ಬೆಂಗಳೂರು: ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ವಿರುದ್ಧ ತಾನು ಷಡ್ಯಂತ್ರ ನಡೆಸಿದ್ದೇನೆ ಎಂಬ ಆರೋಪವನ್ನು ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ, ತಮಿಳುನಾಡಿನ ಲೋಕಸಭಾ ಸದಸ್ಯ ಸಸಿಕಾಂತ್ ಸೆಂಥಿಲ್ ಅಲ್ಲಗಳೆದಿದ್ದಾರೆ.
ಧರ್ಮಸ್ಥಳದ ವಿರುದ್ಧ ತಾನು ಸಂಚು ರೂಪಿಸಲು ತಾನು ಪ್ರಮುಖ ರೂವಾರಿ ಎಂಬ ಶಾಸಕ ಜನಾರ್ದನ ರೆಡ್ಡಿ ಆರೋಪಕ್ಕೆ ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರತಿಕ್ರಿಯಿಸಿದ್ದಾರೆ.
ಜನಾರ್ದನ ರೆಡ್ಡಿ ಕಟ್ಟು ಕತೆಗಳನ್ನು ಹೇಳುತ್ತಿದ್ದು, ಅವರ ಆರೋಪ ಕೇವಲ ಉಹಾಪೋಹ. ನಾನು ಯಾವುದೇ ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ರೆಡ್ಡಿ ಆರೋಪ ನಗು ತರಿಸುತ್ತದೆ. ಏನು ನಡೆದಿದೆ ಎನ್ನುವುದೇ ನನಗೆ ತಿಳಿದಿಲ್ಲ. ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ 6 ವರ್ಷ ಆಗಿದೆ. ಈಗ ನಾನು ರಾಜಕೀಯ ಪಕ್ಷವೊಂದರ ಜತೆ ಗುರುತಿಸಿಕೊಂಡಿದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಅವರ (ರೆಡ್ಡಿ) ಬಂಧನ ಆಗಿತ್ತು. ನಾನು ಆಗ ಮಾತ್ರ ಜನಾರ್ಧನ ರೆಡ್ಡಿಯವರನ್ನು ನೋಡಿದ್ದೆ ಎಂದು ಸೆಂಥಿಲ್ ಹೇಳಿದ್ದಾರೆ.
ಮಂಗಳವಾರ ಬಿಜೆಪಿ ಮುಖಂಡ ಶಾಸಕ ಜನಾರ್ದನ ರೆಡ್ಡಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರು ನೀಡಿದ್ದ ಪ್ರಕರಣದಲ್ಲಿ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ. ಅವರು ಕಾಂಗ್ರೆಸ್ ವರಿಷ್ಠರಿಗೆ ಆಪ್ತರಾಗಿದ್ದು, ಒತ್ತಡಕ್ಕೆ ಮಣಿದು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅನಾಮಿಕ ಸಾಕ್ಷಿ ದೂರುದಾರ ತಮಿಳುನಾಡು ರಾಜ್ಯಕ್ಕೆ ಸೇರಿದವರಾಗಿದ್ದು, ಸಸಿಕಾಂತ್ ಸೆಂಥಿಲ್ ಅವರ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಆಪಾದಿಸಿದ್ದರು.