ಧರ್ಮಸ್ಥಳ ಅಸಹಜ ಸಾವುಗಳು | ಕೊಂದವರು ಯಾರು? ಆಂದೋಲನದಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

Most read

ಬೆಂಗಳೂರು : “ಕನ್ನಡ ರಾಜ್ಯೋತ್ಸವದಂದು ನ್ಯಾಯಕ್ಕಾಗಿ ಕರ್ನಾಟಕದ ಮಹಿಳೆಯರು ಆಗ್ರಹಿಸುತ್ತಿದ್ದಾರೆ” ಎಂದು ನೂರಾರು ಮಹಿಳೆಯರು ಘೋಷಿಸಿದರು.

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ‘ಕೊಂದವರು’ ಯಾರು? ಎಂಬ ಸತ್ಯವನ್ನು ಸರಕಾರ ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಕನ್ನಡ ರಾಜ್ಯೋತ್ಸವ ದಿನದಂದು ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳಾ ಸಂಘಟನೆಗಳು, ಮಹಿಳಾ ಸಮಾನತೆಯನ್ನು ಬೆಂಬಲಿಸುವ ಸಹೃದಯರು ಒಟ್ಟುಗೂಡಿ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಮಹಿಳೆಯರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.

“ಎಸ್ ಐ ಟಿ ರಚನೆಗಾಗಿ ಆಗ್ರಹಿಸಿದ ಮಹಿಳಾ ಆಯೋಗದ ಪತ್ರ ಮತ್ತು ಅದನ್ನು ಆಧರಿಸಿ ಎಸ್ ಐ ಟಿ ರಚಿಸಿದ ಸರ್ಕಾರದ ಆದೇಶ, ಈ ಎರಡರಲ್ಲೂ ಸ್ಪಷ್ಟವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನೂ ಒಳಗೊಂಡ ಸಮಗ್ರ ತನಿಖೆ ನಡೆಯಬೇಕು ಎಂಬ ಆಶಯವಿದೆ. ಹಾಗಿದ್ದ ಮೇಲೆ, ಅಂತಹ ಎಲ್ಲ ಪ್ರಕರಣಗಳ ತನಿಖೆಯನ್ನೂ ಸಂಪೂರ್ಣಗೊಳಿಸುವ ತನಕ ಸರ್ಕಾರ ಎಸ್ ಐ ಟಿ ತನಿಖೆ ನಿಲ್ಲಿಸಬಾರದು” ಎಂದು ಫ್ರೀಡಂ ಪಾರ್ಕ್ ಲ್ಲಿ ಸೇರಿದ್ದ ಚಿಂತಕಿಯರು, ಬರಹಗಾರ್ತಿಯರು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಒತ್ತಾಯಿಸಿದರು.

ಎಸ್‌ಐಟಿಗೆ ಯಾವ ಒತ್ತಡವೂ, ತೊಡಕೂ ಇಲ್ಲದೆ, ಯಾರೂ ಮೂಗು ತೂರಿಸದೆ ಮುಕ್ತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹಾಗೂ ಧರ್ಮಸ್ಥಳದ ವ್ಯಾಪ್ತಿಯಲ್ಲಿ ದಾಖಲಾದ ಮಹಿಳೆಯರ/ಯುವತಿಯರ ಮೇಲಿನ ಅತ್ಯಾಚಾರ, ಕೊಲೆಗಳ ಎಲ್ಲ ಪ್ರಕರಣಗಳ ಸಮಗ್ರ ತನಿಖೆ ನಡೆಸಲು ಸರಕಾರ ಅನುವು ಮಾಡಿಕೊಡಬೇಕು. ಅಲ್ಲಿ ನಡೆದಿರುವ ಈ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳ ಅನುಮಾನಾಸ್ಪದ ಸಾವುಗಳನ್ನೂ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಎಸ್‌ಐಟಿ ಸಾರ್ವಜನಿಕ ನೋಟಿಸ್ ನೀಡಿ ಸಾಕ್ಷಿಗಳು ಮತ್ತು ದೂರುದಾರರು ಭಯವಿಲ್ಲದೆ ತನಿಖೆಗೆ ಸಹಕರಿಸಲು, ಅವರಿಗೆ ಅಗತ್ಯವಾದ ಭದ್ರತೆ ಮತ್ತು ಗೌಪ್ಯತೆಯನ್ನು ಕಲ್ಪಿಸಬೇಕು. ಸಂತ್ರಸ್ತರ ಕುಟುಂಬಗಳಿಗೆ ಸರಕಾರ ರಕ್ಷಣೆ ಮತ್ತು ಪರಿಹಾರ ಕಲ್ಪಿಸಬೇಕು. ಹೈಕೋರ್ಟ್ ತೀರ್ಪಿನಂತೆ ಸೌಜನ್ಯ ಪ್ರಕರಣದಲ್ಲಿ ತನಿಖೆ ನಡೆಸುವಾಗ ಗಂಭೀರ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಜಾತಿ, ವರ್ಗ, ಮತ ಮತ್ತು ರಾಜಕೀಯ ಪ್ರಾಬಲ್ಯ ಬಳಸಿಕೊಂಡು ಸತ್ಯವನ್ನು ಹತ್ತಿಕ್ಕಲು ಅಥವಾ ತನಿಖೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಎಲ್ಲ ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಅವರಿಗೆ ಭದ್ರತೆ ಒದಗಿಸಬೇಕು. ಮಹಿಳೆಯರ ಮೇಲಿನ ಎಲ್ಲ ತರಹದ ಹಿಂಸೆಗಳನ್ನು ತಡೆಗಟ್ಟಲು ವ್ಯಾಪಕವಾಗಿ ತಳಮಟ್ಟದಿಂದ ಜಾಗೃತಿ ಮೂಡಿಸಬೇಕು. ಎಲ್ಲ ಧಾರ್ಮಿಕ ಸಂಸ್ಥೆಗಳೂ, ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಲೈಂಗಿಕ ಕಿರುಕುಳಗಳ ದೂರುಗಳನ್ನು ಸ್ವೀಕರಿಸಿ ಕಾನೂನುಬದ್ಧ ವಿಚಾರಣೆ ನಡೆಸಲು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ಸಮಿತಿ ಸ್ಥಾಪಿಸುವುದನ್ನು ಕಡ್ಡಾಯ ಮಾಡಿ, ಅವುಗಳ ಬಗ್ಗೆ ನಿಗಾ ವಹಿಸಿ ವಿಮರ್ಶೆ ಮಾಡಲು ಪರಿಣತರ ಸ್ವತಂತ್ರ ಸಮಿತಿಯನ್ನು ಸ್ಥಾಪಿಸಬೇಕು ಎಂದು ಹೋರಾಟಗಾರರು ಸರಕಾರವನ್ನು ಒತ್ತಾಯಿಸಿದರು.

ರಾಜ್ಯದ ಉಗ್ರಪ್ಪ ಸಮಿತಿ ಮತ್ತು ರಾಷ್ಟ್ರ ಮಟ್ಟದ ವರ್ಮಾ ಸಮಿತಿ ನೀಡಿರುವ ಶಿಫಾರಸುಗಳನ್ನು ರಾಜ್ಯದ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ವ್ಯಾಪಕ ಪ್ರಚಾರ ನೀಡಿ ಕೂಡಲೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮನುಷ್ಯರಾಗಿ, ಸಹಜೀವಿಗಳಾಗಿ, ಪರಸ್ಪರ ಗೌರವಿಸುವುದನ್ನು ಕಲಿಸುವ ಆರೋಗ್ಯಕರ ದೇಹಶಾಸ್ತ್ರ ಮತ್ತು ಲಿಂಗತ್ವ ಸಮಾನತೆಯ ಶಿಕ್ಷಣವನ್ನು ಅಳವಡಿಸಬೇಕು ಎಂದು ಮಹಿಳಾ ಹೋರಾಟಗಾರರು ಆಗ್ರಹಿಸಿದರು.

ಸಹಿ ಸಂಗ್ರಹ ಅಭಿಯಾನದಲ್ಲಿ ಮಹಿಳಾ ಹೋರಾಟಗಾರ್ತಿಯರಾದ ಡಾ.ವಸುಂಧರಾ ಭೂಪತಿ, ಡಾ. ದು ಸರಸ್ವತಿ,  ಇಂದಿರಾ ಕೃಷ್ಣಪ್ಪ, ಡಾ.‌ ಕೆ.ಶರೀಫಾ, ಡಾ.ಎನ್ ಗಾಯತ್ರಿ, ಚಂಪಾವತಿ ಒಳಗೊಂಡಂತೆ ಹಲವು ಮಂದಿ ಬರಹಗಾರ್ತಿಯರು, ಗೌರಮ್ಮ, ಮೀನಾಕ್ಷಿ, ಇಂದ್ರಮ್ಮ, ಜ್ಯೋತಿ ಎ., ಕೆ.ಎಸ್.ವಿಮಲಾ, ಶಾಂತಮ್ಮ, ಮಧು ಭೂಷಣ್, ಮಮತಾ ಯಜಮಾನ್, ಗೌರಿ, ಗೀತಾ ಸಾಧನಾ, ವೀಣಾ ಹರಿಗೋವಿಂದ್, ಮಲ್ಲಿಗೆ ಸಿರಿಮನೆ, ಸುಷ್ಮಾ ವರ್ಮಾ  ಸೇರಿದಂತೆ ಹಲವಾರು ಹೋರಾಟಗಾರ್ತಿಯರು ಭಾಗವಹಿಸಿದ್ದರು.

ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲೂ ಸಹಿ ಸಂಗ್ರಹ ಅಭಿಯಾನ ನಡೆಯಿತು.

More articles

Latest article