ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದಲ್ಲಿ ಸಂಭವಿಸಿರುವ ಮಹಿಳೆಯರು ಮತ್ತು ಯುವತಿಯರ ನಾಪತ್ತೆ ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಎಸ್ ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ಎಸ್‌ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಸಾಕ್ಷಿ ದೂರುದಾರ ಚಿನ್ನಯ್ಯ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಹಗಳ ಉತ್ಪನನಕ್ಕೆ ಸೀಮಿತವಾಗಿ ಆತನ ಹೇಳಿಕೆಯ ಮಿತಿಯೊಳಗೆ ತನಿಖೆ ನಡೆದಿರುವುದು ಕಂಡುಬಂದಿದೆ. ಉತ್ಪನನದ ಸಂದರ್ಭದಲ್ಲಿ ದೊರತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ ಸಾವು ಸಂಭವಿಸಿದ ಕಾರಣದ ಬಗ್ಗೆ ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ, ಕಾಡಿನ ಪ್ರದೇಶದಲ್ಲಿ ಅಸ್ಥಿಪಂಜರ ದೊರಕಿರುವ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಪತ್ರದಲ್ಲಿ ವಿವರಿಸಿದ್ದಾರೆ.
ಧರ್ಮಸ್ಥಳದಲ್ಲಿ ಸಂಭವಿಸಿರುವ ಮಹಿಳೆಯರು ಮತ್ತು ಯುವತಿಯರ ನಾಪತ್ತೆ ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗೆ ತನಿಖೆಯನ್ನು ಕೈಗೊಂಡಿದ್ದರೆ ಅದರ ಮಾಹಿತಿಯನ್ನು ಹಂಚಿಕೊಳ್ಳುವಂತೆಯೂ ಅವರು ಕೋರಿದ್ದಾರೆ.
ಎಸ್ ಐಟಿ ತನಿಖೆಗೆ ಆಗ್ರಹಿಸಿ ಆಯೋಗವು 14.07.2025ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿತ್ತು. ಕಳೆದ 20ಕ್ಕೂ, ಹೆಚ್ಚು ವರ್ಷಗಳಿಂದ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳು ಕೇಳಿ ಬರುತ್ತಿವೆ. ಆದ್ದರಿಂದ ಎಸ್ ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ಕೋರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಆಯೋಗದ ಮನವಿಗೆ ಸ್ಪಂದಿಸಿದ ಸರ್ಕಾರವು, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲಿಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 39/2025, ಕಲಂ 211 (ಎ), ಬಿಎನ್‌ಎಸ್ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸಿ ಆದೇಶಿಸಿತ್ತು.
ಎಸ್‌ಐಟಿ ರಚನೆಯಾಗಬೇಕೆಂಬ ಕೋರಿಕೆಯ ಆಶಯವೂ ಮತ್ತು ಸರ್ಕಾರದ ಆದೇಶವೂ ಕೇವಲ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ:39/2025, ಕಲಂ 211 (ಎ), ಬಿಎನ್ಎಎಸ್ ಪ್ರಕರಣದ ತನಿಖೆಗೆ ಸೀಮಿತವಾಗಿರದೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ‘ಸಮಗ್ರ ತನಿಖೆಯನ್ನು ಎಸ್‌ಐಟಿ ಮಾಡಬೇಕೆಂಬುದನ್ನು ಸೂಚಿಸುತ್ತದೆ. ಹೀಗಿದ್ದರೂ, ಈವರೆಗೆ ಎಸ್‌ಐಟಿ ಅಂತಹ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಬಗ್ಗೆ, ಯಾವುದೇ ಮಾಹಿತಿ ಕಂಡು ಬರುತ್ತಿಲ್ಲ ಎಂದೂ ಆಯೋಗವು ಪತ್ರದಲ್ಲಿ ತಿಳಿಸಿದೆ.

