ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ ) ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಇಂದೂ ಸಹ ಶೋಧ ನಡೆಸಿದೆ. ನಿನ್ನೆ ಮತ್ತು ಇಂದು ನಡೆದ ಶೋಧ ಕಾರ್ಯದಲ್ಲಿ 9 ಭಾಗದಲ್ಲಿ ಒಟ್ಟು 7 ತಲೆಬುರುಡೆಗಳು ಹಾಗೂ ಬಹಳಷ್ಟು ಮೂಳೆಗಳನ್ನು ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ. ಈ ಅವಶೇಷಗಳೆಲ್ಲವೂ ಭೂಮಿಯ ಮೇಲ್ಬಾಗದಲ್ಲೇ ಸಿಕ್ಕಿರುವುದು ಕುತೂಹಲ ಮೂಡಿಸಿದೆ
ಎಸ್ಐಟಿ ತಂಡ ನಿನ್ನೆ ಮತ್ತು ಇಂದು ಶೋಧ ಮತ್ತು ಮಹಜರು ನಡೆಸಿತ್ತು. ನಿನ್ನೆ ಐದು ಸ್ಥಳಗಳಲ್ಲಿ ಐದು ತಲೆ ಬುರುಡೆಗಳು ಹಾಗೂ ನೂರಾರು ಮೂಳೆಗಳನ್ನು ಎಸ್‌ಐಟಿ ವಶಕ್ಕೆ ಪಡೆದಿತ್ತು. ಇಂದು ಎರಡು ತಲೆಬುರುಡೆಗಳು ಹಾಗೂ ಕೆಲವು ಮೂಳೆಗಳನ್ನು ವಶಕ್ಕೆ ಪಡೆದಿದೆ.
ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಎಸ್ಐಟಿ ತಂಡ ಬಂಗ್ಲೆಗುಡ್ಡ ಕಾಡಿನೊಳಕ್ಕೆ ತೆರಳಿದ್ದು, ಮಧ್ಯಾಹ್ನ 3.30ರ ಹೊತ್ತಿಗೆ ಹೊರ ಬಂದಿದೆ. ಎಸ್ಐಟಿ ಅಧಿಕಾರಿಗಳು, ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಎರಡೂ ದಿನ ಕೆಲಸಗಾರರನ್ನೂ ಕರೆದೊಯ್ಯಲಾಗಿತ್ತು.
ಎಸ್ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಅವರ ಮೇಲುಸ್ತುವಾರಿಯಲ್ಲಿ ಶೋಧ ನಡೆಯುತ್ತಿದೆ.
ಧರ್ಮಸ್ಥಳದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿ ದೂರು ನೀಡಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಅರಣ್ಯದಿಂದ ಹೊರತೆಗೆಯಲಾಗಿತ್ತು. ತಲೆಬುರುಡೆ ಇದ್ದ ಸ್ಥಳವನ್ನು ಸೌಜನ್ಯ ಅವರ ಮಾವ ಧರ್ಮಸ್ಥಳ ಗ್ರಾಮದ ಪಾಂಗಾಳ ವಿಠಲ ಗೌಡ ತೋರಿಸಿದ್ದರು. ಇತ್ತೀಚೆಗೆ ಎಸ್ ಐಟಿ ಅಧಿಕಾರಿಗಳು ವಿಠಲಗೌಡ ಅವರನ್ನು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿರುವ ಈ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ಸಂದರ್ಭದಲ್ಲಿ ಭೂ ಮೇಲೆಯೇ ಮೇಲೆಯೇ ಮೃತದೇಹಗಳ ಅವಶೇಷ ಸಿಕ್ಕಿದ್ದವು.