ಬೆಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ನಾವು ತೋರಿಸುವ ಸ್ಥಳಗಳನ್ನೂ ಅಗೆಯಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕು ಎಂದು ಕೋರಲಾಗಿರುವ ಅರ್ಜಿ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಪ್ರಾಸಿಕ್ಯೂಷನ್‌ಗೆ ಸೂಚಿಸಿದೆ.
ಈ ಸಂಬಂಧ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆಗಸ್ಟ್ 29ರಂದು ಎಸ್‌ಐಟಿಗೆ ಮನವಿ ನೀಡಲಾಗಿದೆ. ಈ ಅರ್ಜಿ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಎಸ್ ಐಟಿಗೆ ನಿರ್ದೇಶಿಸಬೇಕು. ಅರ್ಜಿದಾರರು ತೋರಿಸುವ ಸ್ಥಳಗಳಲ್ಲಿ ಅಗೆಯಲು ನೆರವಾಗಲು ಅರ್ಜಿದಾರರ ಜತೆಯಾಗಿ ನ್ಯಾಯಾಂಗ ರಿಜಿಸ್ಟ್ರಾರ್ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕೋರ್ಟ್ ಕಮಿಷನರ್ ನೇಮಕ ಮಾಡಬೇಕು ಎಂದು ಕೋರಿದ್ದಾರೆ.
ದೆಹಲಿ ಹೈಕೋರ್ಟ್ ವಕೀಲ ದೀಪಕ್ ಖೋಸ್ಲಾ ಅವರು ಅರ್ಜಿದಾರರ ಪರ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಅವರು ವಾದಿಸುತ್ತಾ ಅರ್ಜಿದಾರರು ಎಸ್‌ಐಟಿಗೆ ಆಗಸ್ಟ್ 29ರಂದೇ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಧರ್ಮಸ್ಥಳದಲ್ಲಿ ನೂರಾರು ಅನಾಮಧೇಯ ಶವಗಳನ್ನು ಅಕ್ರಮವಾಗಿ ಹೂತು ಹಾಕಿರುವ ಬಗ್ಗೆ ಸ್ಥಳಗಳನ್ನು ಗುರುತಿಸಿದ್ದಾರೆ. ಈ ಸ್ಥಳಗಳನ್ನು ಈಗಿನಿಂದಲೇ ಅಗೆಯಲು ಆರಂಭಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರು , ಅರ್ಜಿದಾರರ ಪರ ವಕಾಲತ್ತನ್ನೇ ಸಲ್ಲಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ನ್ಯಾಯಮೂರ್ತಿಗಳು ಪ್ರಾಸಿಕ್ಯೂಷನ್‌ಗೆ ಅರ್ಜಿಯ ಪ್ರತಿಯನ್ನು ನೀಡುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದರು.