ಧರ್ಮಸ್ಥಳ ಕೃತ್ಯಗಳು: ಲಭ್ಯವಾದ ಅವಶೇಷಗಳು ಪುರುಷರದ್ದು; ಎಫ್‌ ಎಸ್‌ ಎಲ್‌ ವರದಿ

Most read

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾಗಿರುವ ಅವಶೇಷಗಳ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ನನ್ನಿಂದ ಬಲವಂತವಾಗಿ ಹೂತುಹಾಕಿಸಲಾಗಿದೆ ಎಂದು ಸಾಕ್ಷಿ ದೂರುದಾರ ಚಿನ್ನಯ್ಯ ದೂರು ಸಲ್ಲಿಸಿದ ನಂತರ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ತನಿಖೆ ಆರಂಭಿಸಿದ ಎಸ್‌ ಐಟಿ ಇಲ್ಲಿನ ಸ್ನಾನಘಟ್ಟದ ಸಮೀಪದ ಕಾಡಿನಲ್ಲಿ ಮೃತದೇಹಗಳ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿತ್ತು.

ಧರ್ಮಸ್ಥಳದ ಸ್ನಾನಘಟ್ಟ ಹತ್ತಿರದ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಉತ್ಖನನ ನಡೆಸಿದಾಗ  ಚಿನ್ನಯ್ಯ ತೋರಿಸಿದ್ದ 6 ಮತ್ತು 11ಎ ಸ್ಥಳದಲ್ಲಿ ಪತ್ತೆಯಾದ ಮೃತದೇಹಗಳ ಅವಶೇಷಗಳು ಪುರುಷರದ್ದು ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳೂ ಖಚಿತಪಡಿಸಿವೆ.

ಅವಶೇಷಗಳ ಭೌತಿಕ ಲಕ್ಷಣಗಳು ಹಾಗೂ ಅವುಗಳು ಪತ್ತೆಯಾದ ಇದ್ದ ಸ್ಥಿತಿಯ ಆಧಾರದಲ್ಲಿ ಅವುಗಳು ಪುರುಷರದ್ದು ಎಂದು ಎಫ್‌ಎಸ್ಎಲ್ ವರದಿಯಲ್ಲಿ ಹೇಳಲಾಗಿದೆ. ಆದರೆ ಈ ಅಂಶವು ವಂಶವಾಹಿ ಪರೀಕ್ಷೆಯನ್ನು ಆಧರಿಸಿಲ್ಲ. ಮೇಲಾಗಿ ಮೃತದೇಹಗಳ ಮೂಳೆಗಳಿಗೆ ಸಂಬಂಧಿಸಿದಂತೆ ಕುಟುಂಬದ ಯಾವುದೇ ಸದಸ್ಯರ  ಡಿಎನ್ಎ ಮಾದರಿಗಳು ಲಭ್ಯವಿಲ್ಲ. ಹಾಗಾಗಿ ಅದು ಯಾರ ಮೃತದೇಹ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದ್ದರಿಂದ ಲಭ್ಯವಾದ ಮೃತದೇಹದ ಮೂಳೆಗಳ ಆಧಾರದಲ್ಲಿ ಪುರುಷರದ್ದು ಎಂದು ಮಾತ್ರ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಚಾರಣೆಗೆ ಹಾಜರಾಗುವಂತೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ ಹಾಗೂ ಜಯಂತ್ ಟಿ. ಅವರಿಗೆ ಎಸ್‌ಐಟಿ ನೋಟಿಸ್‌ ಜಾರಿಗೊಳಿಸಿದೆ. ಆದರೆ ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗದೆ ಇದ್ದಲ್ಲಿ ಅವರಿಗೆ  ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

More articles

Latest article