ಮಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪ ಮಾಡಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ಅವರ ಹೇಳೀಕೆಯನ್ನು ದಾಖಲಿಸುವ ಪ್ರಕ್ರಿಯೆ ಇಂದೂ ಮುಂದುವರೆಯಲಿದೆ.
ಈ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ. ಇವರನ್ನು ಶಿವಮೊಗ್ಗ ಜೈಲಿನಿಂದ ಬಿಗಿಭದ್ರತೆಯಲ್ಲಿ ಕರೆ ತರಲಾಗುತ್ತಿದೆ.
ಈ ಪ್ರಕರಣದಲ್ಲಿ ಇತರ ಸಾಕ್ಷಿದಾರರು ನೀಡಿರುವ ಹೇಳಿಕೆಯನ್ನು ನಿನ್ನೆ ದಾಖಲಿಸಿಕೊಳ್ಳಲಾಗಿದೆ. ಚಿನ್ನಯ್ಯ ಅವರ ಹೇಳಿಕೆ ದಾಖಲು ಪ್ರಕ್ರಿಯೆ ಮಂಗಳವಾರ ಪೂರ್ಣಗೊಂಡಿಲ್ಲ. ಆದ್ದರಿಂದ ಇಂದು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಮಂಗಳವಾರ ಪ್ರಕರಣ ಕುರಿತು ಚಿನ್ನಯ್ಯ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸುವ ಪ್ರಕ್ರಿಯೆಆರಮಭವಾಗಿತ್ತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ ಎಸ್ ಎಸ್) ಸೆಕ್ಷನ್ 183ರ ಅಡಿಯಲ್ಲಿ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿನ್ನಯ್ಯ ತಾನೇ ಹೂತು ಹಾಕಿದ್ದ ಮೃತದೇಹವೊಂದರ ತಲೆಬುರುಡೆಯನ್ನು ಪೊಲೀಸರಿಗೆ ಒಪ್ಪಿಸಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್ ಐಟಿ) ವಿಚಾರಣೆ ಕೈಗೊಂಡಾಗ ತಲೆಬುರುಡೆಯನ್ನು ತಂದ ಸ್ಥಳವನ್ನು ತೋರಿಸಲು ನಿರಾಕರಿಸಿದ್ದ. ಸಾಕಷ್ಟು ವಿಚಾರಣೆ ನಂತರ ಆತ ತಲೆಬುರುಡೆಯನ್ನು ತಾನು ಹೊರತೆಗೆದಿಲ್ಲ. ಜಯಂತ್ ಎಂಬಾತ ತನಗೆ ಒಪ್ಪಿಸಿದ್ದ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಂತರದ ಬೆಳವಣಿಗೆಯಲ್ಲಿ ಚಿನ್ನಯ್ಯನನ್ನು ಎಸ್ ಐಟಿ ಪೊಲೀಸರು ಬಂಧಿಸಿ ಅಗಸ್ಟ್ 23ರಂದು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಅವಧಿ ಮುಗಿದ ನಂತರ ಚಿನ್ನಯ್ಯನನ್ನು ಸೆ.18ರಂದು ಮತ್ತೆ ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಚಿನ್ನಯ್ಯ ನೀಡಿದ ತಪ್ಪೊಪ್ಪಿಗೆ ಹೇಳಿಕೆ ನಂತರ ಧರ್ಮಸ್ಥಳ ಪ್ರಕರಣಕ್ಕೆ ಮಹತ್ವದ ತಿರುವು ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ತಿಮರೋಡಿಗಾಗಿ ಹುಟುಕಾಟ:
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇದೇ 27ರಂದು ನಡೆಯಲಿದೆ.
ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದಾರೆ. ತಿಮರೋಡಿ ಅವರು ಮನೆ ಅಥವಾ ಕಚೇರಿಯಲ್ಲೂ ಇಲ್ಲದ ಕಾರಣ ಆದೇಶದ ಪ್ರತಿಯನ್ನು ಇನ್ನೂ ಅವರಿಗೆ ತಲುಪಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.