ಬೆಂಗಳೂರು: ಧರ್ಮಸ್ಥಳಕ್ಕೆ ಕಳಂಕ ತರುವ ಉದ್ದೇಶದಿಂದ ಪಿತೂರಿ ನಡೆಸಿದ್ದಾರೆ ಎಂದು ತಮ್ಮ ವಿರುದ್ಧ ಆರೋಪ ಮಾಡಿದ್ದ ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್ ಮುಖಂಡ ಸಂಸದ ಶಶಿಕಾಂತ್ ಸೆಂಥಿಲ್ ಬೆಂಗಳೂರಿನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಕರಣದ ಸಂಬಂಧ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಸದರೂ ಆಗಿರುವ ಸೆಂಥಿಲ್ ಅವರು ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಇಂದು ಹಾಜರಾಗಿದ್ದರು.
ಶಶಿಕಾಂತ ಸೆಂಥಿಲ್ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಸಂಜಯ ಯಾದವ್, ದೂರನ್ನು ದಾಖಲಿಸಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ಕೆ.ಎನ್.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು ಇದೇ ತಿಂಗಳ 11ಕ್ಕೆ ದೂರಿನ ವಿಚಾರಣೆ ನಡೆಸಲು ದಿನಾಂಕವನ್ನು ನಿಗದಿಪಡಿಸಿದರು.
ನಂತರ ಮಾತನಾಡಿದ ಸೆಂಥಿಲ್ ಅವರು, ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನುಈ ಪ್ರಕರಣಕ್ಕೆ ಥಳುಕು ಹಾಕಿದ್ದಾರೆ. ಅವರ ಆರೋಪಗಳಿಗೆ ಯಾವುದೇ ಆಧಾರ ಇಲ್ಲ. ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿದೆ. ಇದು ರಾಜಕೀಯ ಪಿತೂರಿಯಾಗಿದೆ. ಜನಾರ್ದನ ರೆಡ್ಡಿ ಗಣಿ ಲೂಟಿಕೋರ ಎಂದು ವಾಗ್ದಾಳಿ ನಡೆಸಿದರು.
ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ. ತಲೆ ಬುರುಡೆ ತೋರಿಸುತ್ತಿರುವವರು ದೆಹಲಿಯ ನಿಮ್ಮ ನಿವಾಸದಲ್ಲಿ ಆಶ್ರಯ ಪಡೆದಿದ್ದರು ಎಂಬ ಆರೋಪಕ್ಕೆ ಉತ್ತರಿಸಿದ ಅವರು ಇದುವರೆಗೂ ನನಗೆ ದೆಹಲಿಯಲ್ಲಿ ಮನೆಯೇ ಇಲ್ಲ. ನಾನು ತಮಿಳುನಾಡು ಭವನದಲ್ಲೇ ವಾಸವಾಗಿದ್ದೇನೆ ಎಂದು ಉತ್ತರಿಸಿದರು. ನನ್ನನ್ನು ಕ್ರಿಶ್ಚಿಯನ್ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅದು ಶುದ್ಧ ಸುಳ್ಳು. ಸುಬ್ರಹ್ಮಣ್ಯನ ಮತ್ತೊಂದು ಹೆಸರೇ ಸೆಂಥಿಲ್ ಎನ್ನುವುದೂ ಇವರಿಗೆ ತಿಳಿದಿಲ್ಲ. ಎಂದು ಸೆಂಥಿಲ್ ಅವರು ನನ್ನ ವಿರುದ್ಧ ಯಾರೇ ಆದರೂ ಅಪಪ್ರಚಾರ ಮಾಡುವುದನ್ನು ಆರಂಭಿಸಿದರೆ ಅಂಥಹವರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು.