ಮಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳು ನಡೆದಿವೆ ಎಂದು ದೂರು ಸಲ್ಲಿಸಿ ನಂತರ ಬಂಧನಕ್ಕೊಳಗಾಗಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ಇಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನವೆಂಬರ್ 24ರಂದು ಮಂಗಳೂರಿನ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ಲಕ್ಷ ರೂ.ಗಳ ಭದ್ರತಾ ಠೇವಣಿ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಆದರೆ ಶ್ಯೂರಿಟಿ ಮತ್ತು ಜಾಮೀನು ನೀಡುವವರು ಇಲ್ಲದೆ ಚಿನ್ನಯ್ಯ ಬಿಡುಗಡೆಯಾಗಿರಲಿಲ್ಲ. ಮಾಧ್ಯಮಗಳೊಂದಿಗೆ ಮಾತನಾಡಬಾರದು ಎನ್ನುವುದೂ ಸೇರಿದಂತೆ 12 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಬಂದ ಚಿನ್ನಯ್ಯನ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ಮತ್ತು ಚಿನ್ನಯ್ಯನ ಪರ ವಕೀಲರು ಶಿವಮೊಗ್ಗದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಜಾಮೀನು ಪ್ರಕ್ರಿಯೆಯ ದಾಖಲೆಗಳನ್ನು ಸಲ್ಲಿಸಿದ್ದರು. ಇಂದು ಬೆಳಿಗ್ಗೆ 8.30ಕ್ಕೆ ಚಿನ್ನಯ್ಯ ಅವರನ್ನು ಬಿಡುಗಡೆ ಮಾಡಲಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಚಿನ್ನಯ್ಯ ಬಿಡುಗಡೆ ಹಿನ್ನೆಲೆಯಲ್ಲಿ ಕಾರಾಗೃಹದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜೈಲಿನ ಆವರಣದೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಚಿನ್ನಯ್ಯ ತನ್ನ ಪತ್ನಿ ಹಾಗೂ ವಕೀಲರೊಂದಿಗೆ ಶಿವಮೊಗ್ಗದಿಂದ ಮಂಗಳೂರಿಗೆ ತೆರಳಿದ್ದಾರೆ.
ಈ ಪ್ರಕರಣದಲ್ಲಿ ಸಾಕ್ಷಿದೂರುದಾರ ಚಿನ್ನಯ್ಯನನ್ನು ಆಗಸ್ಟ್ 23ರಂದು ವಿಶೇಷ ತನಿಖಾ ತಂಡದ (ಎಸ್ ಐಟಿ) ಪೊಲೀಸರು ಬಂಧಿಸಿದ್ದರು. ಸೆ.6ರಂದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಂದಿನಿಂದ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು.

