ಟೆಂಪಲ್ ಟೌನ್ ಭವಿಷ್ಯ
ಇವತ್ತು ಹಿಂದೂ ಅಸ್ಮಿತೆಯ ಪ್ರಶ್ನೆಯೂ ಧರ್ಮಸ್ಥಳದ ವಿಚಾರದಲ್ಲಿ ಎದುರಾಗಿರುವ ಹಿನ್ನೆಲೆಯಲ್ಲಿ ಹೆಗ್ಗಡೆಯವರ ಮುಂದಾಳತ್ವದಲ್ಲಿಯೇ, ಸಂವಿಧಾನದ ಅಡಿಯಲ್ಲಿ ಧಾರ್ಮಿಕ ಮಂಡಳಿಯ ರಚನೆಗೆ ಮುಂದಾಗುವುದು, ಅದರಲ್ಲಿ ಎಲ್ಲ ಮತ ಪಂಗಡಗಳಿಗೂ ಅವಕಾಶ ನೀಡಲು ದೊಡ್ಡ ಮನಸ್ಸು ಮಾಡುವುದು ಗೊಂದಲಗಳ ನಿವಾರಣೆಗೆ ಸೂಕ್ತ ಪರಿಹಾರವೂ ಆಗಬಹುದು. ಆದರೆ, ತಿರುಪತಿಯನ್ನು ಬಿಟ್ಟರೆ, ಅತಿ ಹೆಚ್ಚು ಯಾತ್ರಾರ್ಥಿಗಳನ್ನು, ವಹಿವಾಟನ್ನು ಹೊಂದಿರುವ ‘ಕಾಂಪೋಸಿಟ್ ಧರ್ಮಸ್ಥಳ’ದ ಮಾಲೀಕತ್ವವನ್ನು ಬಿಟ್ಟುಕೊಡಲು ಮನಸ್ಸು ಮಾಡುವುದು, ಬಾಹುಬಲಿ ತೆಗೆದುಕೊಂಡ ವೈರಾಗ್ಯದೆಡೆಗಿನ ನಿರ್ಧಾರದಂತೆಯೇ; ಕಠಿಣವಾದುದು! – ಪ್ರಶಾಂತ್ ಹುಲ್ಕೋಡ್
“ಮಾನ್ಯ ಸಭಾಧ್ಯಕ್ಷರೇ, ಮಾನ್ಯ ನರಸಿಂಹಯ್ಯನವರು ಹೇಳಿದ ಕೊಶ್ಚನ್ ಮಾರ್ಕ್‌ನ್ನು ನಾನು ಹಿಂಬಾಲಿಸುತ್ತಾ ಹೇಳುತ್ತಿದ್ದೇನೆ-
ಪೋಲೆಂಡಿನ ಕ್ರಾಂತಿಕಾರಿ ನಾಯಕ ವಲೇಶ, ಮಾರ್ಕ್ಸಿಸ್ಟ್ ಸಿದ್ಧಾಂತಿ. ಅವನು ದೇವರ ಬಗ್ಗೆ ಮಾತಾಡಲೂ ಇಲ್ಲ, ನಂಬಲೂ ಇಲ್ಲ. ಈತ ಶಾಂತಿಯನ್ನು ಹುಡುಕುತ್ತಾ ಇಟಲಿಯ ಪೋಪ್ ಬಳಿ ಹೋದ. ವಲೇಶ ಪೋಪ್ ಬಳಿ ಹೋದಾಗ, ಪೋಪ್‌ರ ಸುತ್ತಮುತ್ತ ಇಟಲಿಯಲ್ಲೂ ಕಮ್ಯುನಿಸಂ ಬೆಳೆಯುತ್ತಿತ್ತು. ಇದನ್ನು ಕಂಡು ವಲೇಶ ಆಶ್ಚರ್ಯ ಪಟ್ಟ. ಇವೆಲ್ಲವನ್ನೂ ನೋಡಿದರೆ ನರಸಿಂಹಯ್ಯನವರು ಹೇಳಿದ ಪ್ರಶ್ನಾರ್ಥಕ ಚಿನ್ಹೆಯೇ ಸರಿ ಎಂದು ತೋರುತ್ತೆ.”
ಇವು 1985ರಲ್ಲಿ ಅಂದು ಭಾರಿ ಕೈಗಾರಿಕಾ ಸಚಿವರಾಗಿದ್ದ ಸಮಾಜವಾದಿ ರಾಜಕಾರಣಿ ಜೆ. ಹೆಚ್. ಪಟೇಲರು ವಿಧಾನ ಪರಿಷತ್‌ನಲ್ಲಿ ಆಡಿದ ಮಾತುಗಳು. ಡಾ. ಹೆಚ್. ನರಸಿಂಹಯ್ಯ, ಎ. ಕೆ. ಸುಬ್ಬಯ್ಯ ಅವರುಗಳು ದೇವರ ಕುರಿತಾಗಿ ನಡೆಸಿದ ಈ ಸ್ವಾರಸ್ಯಕರ ಚರ್ಚೆಯಲ್ಲಿ ಪಟೇಲರೂ ಪಾಲ್ಗೊಂಡಿದ್ದರು ಎಂಬ ಮಾಹಿತಿ ವಿಧಾನ ಪರಿಷತ್ ಹೊರತಂದಿರುವ ಸಂಸದೀಯ ಪಟು- ಜೆ. ಹೆಚ್. ಪಟೇಲ್ ಪುಸ್ತಕದಲ್ಲಿ ಲಭ್ಯ ಇದೆ.
“ದೇಶದಲ್ಲಿ ದೇವರನ್ನು ಚೀಪ್ ಅಗಿ ನೋಡಲಾಗುತ್ತಿದೆ. ಫೂಟ್‌ಪಾತಿನಿಂದ ಹಿಡಿದು ವಿಧಾನಸೌಧದವರೆಗೂ ದೇವರೇ ದೇವರು,’’ ಎಂದು ಡಾ. ಹೆಚ್. ನರಸಿಂಹಯ್ಯ ಮಾತು ಆರಂಭಿಸಿದ್ದರು. “ಸರ್ಕಾರಿ ಕೆಲಸ ದೇವರ ಕೆಲಸ ಎಂದು ಏಕೆ ಕರೆದರೋ ನನಗಿನ್ನೂ ಈ ಚಿಂತೆ ಕೊಶ್ಚನ್ ಮಾರ್ಕ್ ಆಗಿಯೇ ಉಳಿದಿದೆ,’’ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎ. ಕೆ. ಸುಬ್ಬಯ್ಯ, “ಮಾನ್ಯ ನರಸಿಂಹಯ್ಯನವರು ದೇವರಿಗೆ ಹಾಕುವ ನಾಮ ತೆಗೆದು ಪ್ರಶ್ನಾರ್ಥಕ ಚಿನ್ಹೆ (?) ಹಾಕಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದಾರೆಯೇ?” ಎಂದು ಅಧ್ಯಕ್ಷರನ್ನು ಪ್ರಶ್ನಿಸಿದ್ದರು. ಚರ್ಚೆಯನ್ನು ಮುಂದುವರಿಸಿದ ಪಟೇಲರು ಮೇಲಿನ ಉತ್ತರ ನೀಡಿದ್ದರು.
ಒಂದು ಕಾಲದಲ್ಲಿ ಮನುಷ್ಯರ (ವಿಶೇಷವಾಗಿ ಗಂಡಸರ) ಹಣೆಯ ಮೇಲಿದ್ದ ನಾಮವೇ ಅವರ ನಂಬಿಕೆಯ ದೇವರು ಯಾರು ಎಂಬುದನ್ನು ನಿರ್ಧರಿಸುತ್ತಿತ್ತು ಎಂಬ ಇತಿಹಾಸವನ್ನು ಬಲ್ಲ ಈ ಮೂವರು, ಬದಲಾದ ಕಾಲಘಟ್ಟದಲ್ಲಿ ಪ್ರಶ್ನಾರ್ಥಕ ಚಿನ್ಹೆ (?)ಯನ್ನು ನಾಮದ ಜಾಗದಲ್ಲಿ ಕಲ್ಪಿಸಿಕೊಳ್ಳುವ ಚರ್ಚೆಗೆ ಕಾರಣರಾಗಿದ್ದರು. ದೇವರು, ಮುಂದುವರಿದು ಧರ್ಮದ ವಿಚಾರ ಬಂದಾಗಲೆಲ್ಲಾ ಇಂತಹದ್ದೇ ಜಿಜ್ಞಾಸೆಗೆ ಸಮಾಜ ಎಲ್ಲಾ ಕಾಲಕ್ಕೂ ಒಳಪಟ್ಟಿದೆ.
ವಿಧಾನಸಭೆಯಲ್ಲಿ ಮೇಲಿನ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿಯೂ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡುವ ಧಾರ್ಮಿಕ ಕೇಂದ್ರಗಳ ಬಗೆಗೆ ಒಂದು ನಿರ್ದಿಷ್ಟ ಕಾನೂನು ರಾಜ್ಯದಲ್ಲಿ ಇರಲಿಲ್ಲ. ಮೈಸೂರು ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯ್ದೆ- 1927, ಮದ್ರಾಸ್ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ- 1951, ಬಾಂಬೆ ಪಬ್ಲಿಕ್ ಟ್ರಸ್ಟ್ – 1950, ಹೈದ್ರಾಬಾದ್ ಎಂಡೋಮೆಂಟ್ ರೆಗ್ಯುಲೇಶನ್ (1349 ಫಸ್ಲಿ) ಹಾಗೂ ಕೂರ್ಗ್ ಟೆಂಪಲ್ ಫಂಡ್ಸ್ ಮ್ಯಾನೇಜ್‌ಮೆಂಟ್ ಆಕ್ಟ್- 1956 ಎಂಬ ಐದು ಕಾನೂನುಗಳ ಅಡಿಯಲ್ಲಿ ದೇವಸ್ಥಾನಗಳ ನಿಗಾ ಹಾಗೂ ನಿರ್ವಹಣೆ ನಡೆಸಲಾಗುತ್ತಿತ್ತು. ವಿಶೇಷ ಅಂದರೆ, ಈ ಎಲ್ಲಾ ಕಾಯ್ದೆಗಳನ್ನು ಒಂದುಗೂಡಿಸಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಕರ್ನಾಟಕ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆಯು ಮೊದಲ ಬಾರಿಗೆ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು 1997ರಲ್ಲಿ ಮತ್ತು ಅವತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಜೆ. ಹೆಚ್. ಪಟೇಲರು.
ಕರ್ನಾಟಕ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆ 1997 ಮೊದಲ ಬಾರಿ ಮಂಡನೆಯಾದಾಗ ಮಠಗಳ ಅಧೀನದಲ್ಲಿರುವ ದೇವಸ್ಥಾನಗಳು ಹಾಗೂ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ದೇವಸ್ಥಾನಗಳನ್ನೂ ಕಾನೂನಿನ ವ್ಯಾಪ್ತಿಗೆ ತರುವ ಉದ್ದೇಶವಿತ್ತು. ಆದರೆ ಈ ಕಾಯ್ದೆ ಆಚರಣೆಗೆ ಬಂದಿದ್ದು 2001ರ ಕೊನೆಯಲ್ಲಿ. ಅದು ರಾಷ್ಟ್ರಪತಿ ಕಚೇರಿಯಿಂದ ಅಂಕಿತ ಹಾಕಿಸಿಕೊಳ್ಳುವ ಹೊತ್ತಿಗೆ ದೊಡ್ಡಮಟ್ಟದ ಆದಾಯವಿದ್ದ ದೇವಸ್ಥಾನಗಳ ಆಡಳಿತಗಾರರಿಂದ ವಿರೋಧಕ್ಕೂ ಒಳಗಾಯಿತು. 2006ರ ಹೊತ್ತಿಗೆ ರಾಜ್ಯ ಹೈಕೋರ್ಟ್ ಇಡೀ ಕಾಯ್ದೆಯೇ ಅಸಂವಿಧಾನಿಕ ಎಂದು ಹೇಳಿತು. ಆದರೆ, ಸುಪ್ರೀಂ ಕೋರ್ಟ್, ಕಾಯ್ದೆಯನ್ನು ಮಾರ್ಪಾಡುಗಳ ಜತೆಗೆ ಅನುಷ್ಠಾನಕ್ಕೆ ತರಲು ಅನುವು ಮಾಡಿಕೊಟ್ಟಿತು. ಸದ್ಯ, ಸಾಕಷ್ಟು ತಿದ್ದುಪಡಿಗಳ ಜತೆಗೆ ರಾಜ್ಯದಲ್ಲಿ ಕಾಯ್ದೆ ಜಾರಿಯಲ್ಲಿದೆ; ಆದರೆ ಪರಿಣಾಮಕಾರಿಯಾಗಿಲ್ಲ. ಮತ್ತು ಇವತ್ತಿಗೂ ಕಾಯ್ದೆಯ ಊರ್ಜಿತವನ್ನು ಪ್ರಶ್ನಿಸಿರುವ ದಾವೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
‘ದೇವಸ್ಥಾನಗಳು ಹಾಗೂ ದೇವರುಗಳು ಸರಕಾರದ ಆಸ್ತಿ ಅಲ್ಲ’ ಎಂಬ ವಾದಕ್ಕೆ ಸಂವಿಧಾನದ ಅಡಿಯಲ್ಲಿ ಇವತ್ತಿಗೂ ಮನ್ನಣೆ ಇದ್ದರೆ, ಅದಕ್ಕೆ ಪ್ರಮುಖ ಪ್ರಮುಖ ಕಾರಣ ಆರ್ಟಿಕಲ್ 25 (Freedom of conscience & free profession, practice, and propagation of religion) ಹಾಗೂ ಆರ್ಟಿಕಲ್ 26 (Religious denominations can manage their own affairs in matters of religion). ಆದರೆ, ಸ್ವತಂತ್ರ ಧರ್ಮ, ನಂಬಿಕೆಗಳನ್ನು ಉಳಿಸಿಕೊಳ್ಳುವ ಹಕ್ಕು ಸಮಾಜದ ಸ್ವಾಸ್ಥ್ಯಕ್ಕೆ, ಇತರೆ ಮೂಲಭೂತ ಹಕ್ಕುಗಳಿಗೆ ಚ್ಯುತಿಯನ್ನು ತರುವ ಹಾಗಿಲ್ಲ ಎಂಬುದೂ ಸ್ಪಷ್ಟವಿದೆ. ಜತೆಗೆ, ಯಾವುದು ಈ ದೇಶದಲ್ಲಿ ನಿಜವಾಗಿಯೂ ಧಾರ್ಮಿಕವಾಗಿದೆಯೋ ಅವುಗಳನ್ನು ಉಳಿಸಲು ಸುಪ್ರೀಂ ಕೋರ್ಟ್ ತನ್ನದೇ ಮಾರ್ಗಸೂಚಿಗಳನ್ನು ಹಾಕಿಕೊಂಡಿದೆ. ‘ಅಗತ್ಯ ಧಾರ್ಮಿಕ ಆಚರಣೆಗಳು’ (ERP) ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಧಾರ್ಮಿಕ ಸಂಗತಿಗಳಲ್ಲಿನ ವಿವಾದವನ್ನು ಬಗೆಹರಿಸಲು 1954ರ ಶೀರೂರು ಮಠದ ಪ್ರಕರಣದಲ್ಲಿಯೇ ‘ಗ್ರಂಥ’ವೊಂದನ್ನು ರಚಿಸಿಕೊಂಡಿದೆ. ದೇವಸ್ಥಾನಗಳು, ಧಾರ್ಮಿಕ ಆಚರಣೆಗಳ ಬಗೆಗೆ ವಿವಾದಗಳಾದಾಗ ಸ್ವತಃ ಸುಪ್ರಿಂ ಕೋರ್ಟ್ ಹಳೆಯ ದಾಖಲೆಗಳು, ಆಚರಣೆಗಳನ್ನು ಆಧರಿಸಿ ತೀರ್ಮಾನಕ್ಕೆ ಬರುವುದೇ ಇಆರ್ಪಿಯ ಮೂಲ ಉದ್ದೇಶವೂ ಆಗಿದೆ. ಶೀರೂರು ಮಠದ ಪ್ರಕರಣದಿಂದ ಶುರುವಾದ ಇದು, ಅಜ್ಮೀರ್ ದರ್ಗಾ ಕಮಿಟಿ ವಿವಾದ (1961), ಆನಂದ ಮಾರ್ಗಿಗಳ ತಾಂಡವ ನೃತ್ಯ ವಿವಾದ (2004), ಟ್ರಿಪಲ್ ತಲಾಖ್ (2017), ಶಬರಿಮಲೆ ವಿವಾದ (2018), ಅಯೋಧ್ಯೆ ವಿವಾದ (2019), ದಕ್ಷಿಣ ಕನ್ನಡದ ಹಿಜಾಬ್ ಪ್ರಕರಣದ (2022) ವರೆಗೆ ಇದೇ ERPಯನ್ನು ಬಳಸಿಕೊಂಡೇ ತೀರ್ಪುಗಳು ಹೊರಬೀಳುತ್ತಿವೆ. ಧಾರ್ಮಿಕ ವಿಚಾರಗಳಲ್ಲಿ ಸುಪ್ರೀಂ ಕೋರ್ಟೇ ಜಗದ್ಗುರುಗಳ ತರಹ ತೀರ್ಮಾನ ಪ್ರಕಟಿಸುವ ಈ ನಡೆಗಳ ಬಗ್ಗೆಯೂ ವಿರೋಧಗಳಿವೆ. ಶಬರಿಮಲೆ ವಿವಾದದ ಸಮಯದಲ್ಲಿ ನಿವೃತ್ತ ಮುಖ್ಯನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ಮಹಿಳೆಯರ ಧಾರ್ಮಿಕ ಕೇಂದ್ರಗಳ ಪ್ರವೇಶ ಕುರಿತಂತೆ, ‘ಧಾರ್ಮಿಕ ಪಠ್ಯಗಳಿಗಿಂತ ಸಂವಿಧಾನವೇ ಮಾರ್ಗದರ್ಶನ ನೀಡುವ ಪವಿತ್ರ ಗ್ರಂಥವಾಗಬೇಕು’ ಎಂದಿದ್ದರು. ಇದೇ ಇವತ್ತಿನ ಧರ್ಮಸ್ಥಳ ವಿವಾದಕ್ಕೂ ಉತ್ತರವಾಗಿದೆ.
ಹಾಗೆ ನೋಡಿದರೆ, ಇವತ್ತಿನ ಧರ್ಮಸ್ಥಳ ವಿವಾದದ ಸಾಮಾಜಿಕ ಪ್ರತಿರೋಧದ ಮೂಲ ಬೇರು ಇರುವುದೇ ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ವಿಚಾರದಲ್ಲಿ; ಇದೊಂದು ಕ್ರಿಮಿನಲ್ ಪ್ರಕರಣ. 2012ರಲ್ಲಿ ಪ್ರಕರಣ ಹೊರಬಿದ್ದಾಗ ಕುಟುಂಬದ ಜತೆಗೆ ನಿಂತು ಮೊದಲ ಪ್ರತಿರೋಧ ದಾಖಲಿಸಿದ್ದು ಸಿಪಿಐ (ಎಂ) ಪಕ್ಷ. ಇವರ ಜತೆಗೆ, ಮಹಿಳಾ, ದಲಿತ ಹಾಗೂ ರೈತ ಮತ್ತಿತರ ಪ್ರಗತಿಪರ ಸಂಘಟನೆಗಳೂ ಆರೋಪಿಗಳ ಬಂಧನಕ್ಕೆ ಆಗ್ರಹ ಸಲ್ಲಿಸಿದ್ದವು. ಅವತ್ತು ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ತನಿಖೆಯ ಆರಂಭದಲ್ಲಿಯೇ ಸಾಕ್ಷಿಗಳ ನಾಶಕ್ಕೆ ಪೊಲೀಸ್ ಇಲಾಖೆಯೇ ಅನುವು ಮಾಡಿಕೊಟ್ಟಿತು. ಸಾಲದ್ದಕ್ಕೆ ಶೃಂಗೇರಿಯಿಂದ ಬದುಕಿನ ವೈರಾಗ್ಯವನ್ನೇ ಹೊತ್ತು ಬಂದಿದ್ದ ಸಂತೋಷ್ ರಾವ್ ಎಂಬ ಯುವಕನನ್ನು ಬಾಹುಬಲಿ ಬೆಟ್ಟದಿಂದ ಎಳೆದುತಂದು ಆರೋಪಿಯನ್ನಾಗಿಸುವ ನೀಚತನವನ್ನೂ ಆಡಳಿತ ವ್ಯವಸ್ಥೆ ತೋರಿಸಿತು. ಅದು ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣ ಮತ್ತು ಎಂದಿನಂತೆ ಇದನ್ನೂ ಸಾಗ ಹಾಕಲಾಯಿತು ಎಂಬ ನಿಟ್ಟುಸಿರೂ ಆಗಿತ್ತು. ದಮನಕಾರಿ ನಡೆಗಳು ಅತಿಯಾದಾಗಲೆಲ್ಲಾ ಪ್ರತಿರೋಧದ ಹೊಸ ಅಲೆಗಳು ಹುಟ್ಟುತ್ತವೆ; ಧರ್ಮಸ್ಥಳದಲ್ಲಿಯೂ ಅದೇ ನಡೆಯಿತು.
ಸೌಜನ್ಯ ಕೊಲೆ ಪ್ರಕರಣಕ್ಕೆ ಒಂದು ವರ್ಷ ತುಂಬಿದ್ದು ರಾಜ್ಯದಲ್ಲಿ ಸುದ್ದಿ ಕೇಂದ್ರವನ್ನು ಆವರಿಸಿತು ಮತ್ತು ಅದಕ್ಕೆ ಕಾರಣವಾಗಿದ್ದು ಟಿವಿ 9 ವಾಹಿನಿ. ಅವತ್ತಿಗೆ ಜನರ ನಂಬಿಕೆಗೆ ಹತ್ತಿರದಲ್ಲಿದ್ದ ವಾಹಿನಿ ಮೂರು ದಿನಗಳ ಕಾಲ ತೋರಿಸಿದ ಸಾಮಾಜಿಕ ಬದ್ಧತೆ ಭವಿಷ್ಯದ ಅಪರೂಪದ ಜನಹೋರಾಟಕ್ಕೆ ನಾಂದಿ ಹಾಡಿತ್ತು. ಮೊದಲ ಬಾರಿಗೆ ಧರ್ಮಸ್ಥಳದ ಮಾಲೀಕರಾದ ಹೆಗ್ಗಡೆ ಕುಟುಂಬದ ಮೇಲೆ ನೇರ ಆರೋಪಗಳು ಕೇಳಿಬಂದವು. ಈ ಸಮಯದಲ್ಲಿ ಪತ್ರಿಕಾಗೋಷ್ಠಿಯೊಂದನ್ನು ನಡೆಸುವ ಮೂಲಕ ಸ್ವತಃ ವೀರೇಂದ್ರ ಹೆಗ್ಗಡೆ ಸಮಜಾಯಿಷಿ ನೀಡಿದರು. ಅವತ್ತು ಪ್ರತಿರೋಧದ ಅಬ್ಬರದ ನಡುವೆ ಸುವರ್ಣ ವಾಹಿನಿಗೆ ಹೆಗ್ಗಡೆ ನೀಡಿದ ಸಂದರ್ಶನ ಹೆಚ್ಚುಕಡಿಮೆ ಕ್ಲೀನ್ ಚಿಟ್ ಕೊಟ್ಟಂತಹ ವಾತಾವರಣವನ್ನೂ ನಿರ್ಮಿಸಿತ್ತು. ಅಲ್ಲಿಂದ ಮುಂದಿನ ಹತ್ತು ವರ್ಷಗಳ ಕಾಲ ನಡೆದಿದ್ದು ಹೋರಾಟವೊಂದನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಕ್ರಿಯೆಗಳಷ್ಟೆ.
ಉಜಿರೆಯ ಎಸ್‌ಡಿಎಂ ಶಾಲೆಯಲ್ಲಿ 8ನೇ ತರಗತಿವರೆಗೂ ವಿದ್ಯಾಭ್ಯಾಸ ನಡೆಸಿದ ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘಟಕರಾಗಿ ಗುರುತಿಸಿ ಕೊಂಡಿದ್ದವರು. ಇದೇ ಅವಧಿಯಲ್ಲಿ ಅವರು ಸೌಜನ್ಯ ಹೋರಾಟದ ಮುಂಚೂಣಿಗೆ ಬರುವ ಹೊತ್ತಿಗೆ ಪ್ರಜಾಪ್ರಭುತ್ವ ವೇದಿಕೆ ಹೆಸರಿನಲ್ಲಿ ರೂಪಾಂತರಗೊಂಡಿದ್ದರು. ಹಿಂದುತ್ವದ ಸಂಕೇತಗಳನ್ನು ಉಳಿಸಿಕೊಂಡು, ಸಂವಿಧಾನದ ಅಡಿಯಲ್ಲಿ ಅವರ ನೇತೃತ್ವದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಹೋರಾಟವೊಂದು ಜೀವಂತವಾಗಿತ್ತು. ಈ ಸಮಯದಲ್ಲಿಯೇ ಗುರುವಾಯನಕೆರೆಯ ಸೋಮನಾಥ ನಾಯಕ್ ಹಾಗೂ ರಂಜನ್ ರಾವ್ ಯರಡೂರು ಧರ್ಮಸ್ಥಳದ ಮಾಲೀಕರಿಂದ ನಡೆಯುತ್ತಿರುವ ಭೂ ಒತ್ತುವರಿ, ದೇವಸ್ಥಾನಗಳ ಕಾರ್ಮಿಕರ ಹಕ್ಕುಗಳ ಮತ್ತಿತರ ಸಿವಿಲ್ ವಿಚಾರಗಳಲ್ಲಿ ನ್ಯಾಯಾಂಗ ಹೋರಾಟವನ್ನು ಸಂಘಟಿಸಿದರು. ಇದೇ ಅವಧಿಯಲ್ಲಿ ಧರ್ಮಸ್ಥಳದ ದತ್ತಿ ಯೋಜನೆ ಭಾಗವಾಗಿರುವ ಗ್ರಾಮೀಣಾಭಿವೃದ್ಧಿ ಯೋಜನೆಯ ಬಡ್ಡಿ ವ್ಯವಹಾರಗಳ ಬಗೆಗೆ ತಳಮಟ್ಟದಲ್ಲಿಯೇ ಪ್ರತಿರೋಧಗಳು ಬೆಳೆಯಲು ಶುರುವಾಯಿತು. ಆದರೆ ಇವೆಲ್ಲಾ ದನಿಗಳಿಗೂ ಒಂದು ಸ್ಪಷ್ಟ ರೂಪ ಸಿಕ್ಕಿದ್ದು ಸೌಜನ್ಯ ಪ್ರಕರಣದ ಅಂತಿಮ ಆದೇಶ ಹೊರಬಿದ್ದಾಗಲೇ.
ಸೌಜನ್ಯ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ 2023ರಲ್ಲಿ ನೀಡಿದ ತೀರ್ಪು ಧರ್ಮಸ್ಥಳದ ಮಾಲೀಕರ ವಿರುದ್ಧದ ಹೋರಾಟಗಳಿಗೆ ಹೊಸ ಆಯಾಮವನ್ನೇ ನೀಡಿತು. ಪ್ರಕರಣದಲ್ಲಿ ಇದ್ದ ಏಕೈಕ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ಕೋರ್ಟ್ ಹೇಳಿತು. ತನಿಖಾ ಸಂಸ್ಥೆಗಳ ಹೊಣೆಗೇಡಿತನವನ್ನು ಖಂಡಿಸಿತು. ಅಂದು ನ್ಯಾಯಾಲಯ ಬಳಸಿದ ಅನ್ಯಾಯದ ಎಡೆಗಿನ ಕಟುವಾದ ಭಾಷೆ ಮತ್ತೆ ಸೌಜನ್ಯಳ ಸಾವಿಗೆ ನ್ಯಾಯದ ಬೇಡಿಕೆಯನ್ನು ಮುನ್ನೆಲೆಗೆ ಬರುವಂತೆ ಮಾಡಿತು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೌಜನ್ಯ ಕುಟುಂಬ ಇಟ್ಟ ಮೊದಲ ಬೇಡಿಕೆ ‘ಅಕ್ವಿಟಲ್ ಕಮಿಟಿ’ ರಚಿಸಿ ಎಂಬುದು. ಒಂದು ವೇಳೆ, ಸರಕಾರ ಮುತುವರ್ಜಿ ವಹಿಸಿ ಅಂದೇ ಅಕ್ವಿಟಲ್ ಕಮಿಟಿ ರಚಿಸಿದ್ದರೆ, ಇಷ್ಟೊತ್ತಿಗೆ ಸೌಜನ್ಯ ಪ್ರಕರಣದ ಲೋಪಗಳನ್ನು ಎಳೆಎಳೆಯಾಗಿ ಜನರ ಮುಂದಿಡುವ ಕೆಲಸ ಆಗುತ್ತಿತ್ತು. ಆದರೆ ತನ್ನದೇ ಹಳೆಯ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ ಭಾಗವಾಗಿ ಸರಕಾರ ಅದೊಂದು ವಿಚಾರವನ್ನು ಚರ್ಚೆಯ ಕೇಂದ್ರಕ್ಕೆ ತೆಗೆದುಕೊಳ್ಳಲೇ ಇಲ್ಲ. ಹೀಗಿರುವಾಗಲೇ ಹೊರಬಿದ್ದಿದ್ದು ಯುವಕ ಸಮೀರ್ ಯೂಟ್ಯೂಬ್ ವಿಡಿಯೋ. ರಾಜ್ಯ ಕಂಡಿದ್ದ ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರ್‍ನಂತಹ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ನೆನಪಿಸಿದ ವಿಡಿಯೋ ಆವರೆಗೂ ಧರ್ಮಸ್ಥಳದ ಮಾಲೀಕರ ಬಗೆಗೆ ಇದ್ದ ಆರೋಪಗಳನ್ನು ಒಂದು ಟೈಮ್‌ಲೈನ್‌ನಲ್ಲಿ ಜನರಿಗೆ ಪರಿಚಯಿಸಿತು. ಧರ್ಮಸ್ಥಳದ ಬಗ್ಗೆ ಯುವ ಪೀಳಿಗೆಯಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿತು. ಅಲ್ಲಿಂದ ಮುಂದೆ ನಡೆದ ವಿಚಾರಗಳ ಬಗೆಗೆ ಹೆಚ್ಚಿನ ವಿವರಣೆಗಳ ಅಗತ್ಯವಿಲ್ಲ.
ಧರ್ಮಸ್ಥಳದಲ್ಲಿ ಅಪರಿಚಿತ ಶವಗಳನ್ನು ಯಾವುದೇ ಕಾನೂನು ಪ್ರಕ್ರಿಯೆಗೆ ಒಳಪಡಿಸದೆ ಹೂಳಲಾಗಿದೆ ಎಂದು ದೂರದಾರ ಚಿನ್ನಯ್ಯ ಮುಂದೆ ಬಂದಿದ್ದು, ಸರಕಾರ ಎಸ್‌ಐಟಿ ರಚಿಸಿದ್ದು, ಟೆಂಪಲ್ ಟೌನ್‌ನಲ್ಲಿ ಉತ್ಖನನ ನಡೆಸಿದ್ದು, ಕೊನೆಗೆ ಆತನೇ ಆರೋಪಿಯಾಗಿದ್ದು, ಸೌಜನ್ಯ ಕುಟುಂಬದವರು ದೂರು ನೀಡಿದ್ದು, ಇತರೆ ಕೊಲೆ ಪ್ರಕರಣಗಳ ಬಗೆಗೂ ದೂರುಗಳು ದಾಖಲಾಗಿದ್ದು ಎಲ್ಲವೂ ಸದ್ಯ ನಡೆಯುತ್ತಿರುವ ಸರಣಿ ಬೆಳವಣಿಗೆಗಳು. ಹೀಗಾಗಿ, ಎಸ್‌ಐಟಿ ನೀಡುವ ವರದಿ ಹಾಗೂ ತೆಗೆದುಕೊಳ್ಳಬಹುದಾದ ಕ್ರಮಗಳ ಹಿನ್ನೆಲೆಯಲ್ಲಿ ಈ ಎಲ್ಲಾ ಕ್ರಿಮಿನಲ್ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ಆಶಯ ವ್ಯಕ್ತವಾಗಿದೆ. ಆರೋಪಿಗಳ ಬಂಧನವಾಗದೆ ಹೋದರೆ, ಎಸ್‌ಐಟಿಯ ಆಚೆಗೂ ಹೋರಾಟಗಳು ನಿಲ್ಲುವುದಿಲ್ಲ. ಸ್ಕ್ಯಾಂಡಲ್ ಹೊರಬಿದ್ದಾಗ ಬಂಧನ ಮಾತ್ರವೇ ಜನದನಿಯನ್ನು ತಣ್ಣಗಾಗಿಸುವ ಸಾಧನ.
ಧರ್ಮಸ್ಥಳದ ಸುತ್ತ ಸುತ್ತಿಕೊಂಡಿರುವ ಕ್ರಿಮಿನಲ್ ಪ್ರಕರಣಗಳ ಜತೆಗೆ ಇವತ್ತಿಗೆ ಟೆಂಪಲ್ ಟೌನ್‌ನ ಮಾಲೀಕತ್ವದ ಬಗೆಗೂ ಪ್ರಶ್ನೆಗಳು ಎದ್ದಿವೆ. ಇದರ ಪರಿಹಾರಕ್ಕೆ ನಮ್ಮ ಮುಂದಿರುವುದು ಮೂರೇ ಆಯ್ಕೆಗಳು. “ಕರ್ನಾಟಕದ ಸವದತ್ತಿ ಎಲ್ಲಮ್ಮ ದೇವಸ್ಥಾನವನ್ನು ಎಂಡೋಮೆಂಟ್ ಕಾಯ್ದೆ ಅಡಿಯಲ್ಲಿ ತರಲು ಅನುಸರಿಸಿದ ಮಾರ್ಗವೇ ಧರ್ಮಸ್ಥಳದ ವಿಚಾರದಲ್ಲಿಯೂ ಪಾಲಿಸುವ ಅಗತ್ಯವಿದೆ,” ಎನ್ನುತ್ತಾರೆ ಐಎಎಸ್ ಅಧಿಕಾರಿಯೊಬ್ಬರು. ಈಗಿರುವ ಕಾಯ್ದೆಗೆ ಒಂದು ವಿಶೇಷ ತಿದ್ದುಪಡಿಯೊಂದನ್ನು ತರುವ ಅಗತ್ಯವಿದೆ ಎಂದು ಅವರು ವಿವರಿಸುತ್ತಾರೆ. ಆದರೆ ಇದಕ್ಕೆ ಕರ್ನಾಟಕದ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಬೆಂಬಲವೂ ಬೇಕಾಗುತ್ತದೆ. ಈಗಿರುವ ರಾಜಕೀಯ ವಾತಾವರಣದಲ್ಲಿ ಅದನ್ನು ನಿರೀಕ್ಷಿಸಬಹುದಾ?
ಇದನ್ನು ಹೊರತು ಪಡಿಸಿದರೆ, ಸುಪ್ರೀಂ ಕೋರ್ಟ್ 1976ರಲ್ಲಿ ಧರ್ಮಸ್ಥಳದ ಆಡಳಿತದ ಬಗೆಗೆ ನೀಡಿರುವ ತೀರ್ಪನ್ನು ಬದಲಾದ ಕಾಲಘಟ್ಟದಲ್ಲಿ ಮರುಪರಿಶೀಲನೆಗೆ ಒಳಪಡಿಸುವುದು ಇರುವ ಮತ್ತೊಂದು ಮಾರ್ಗ. ಪಕ್ಕದ ಆಂಧ್ರದ ತಿರುಪತಿ ದೇವಸ್ಥಾನದ ಕುರಿತು ಇಟ್ಟ ಗಟ್ಟಿ ನಡೆಯನ್ನು ಇಲ್ಲಿಯೂ ಇಡುವ ಅಗತ್ಯವಿದೆ. ERP ಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ, ಧರ್ಮಸ್ಥಳ ಸರ್ವಧರ್ಮಗಳ ಸಮನ್ವಯಕ್ಕೆ ಹೇಳಿಮಾಡಿಸಿದ ಕ್ಷೇತ್ರವಾಗಿದೆ. ಇಲ್ಲಿ ಒಡಮೂಡುವ ಧಾರ್ಮಿಕ ಸಂಕರ ಭಾರತದ ಇತರೆ ಧಾರ್ಮಿಕ ವಿವಾದಗಳಿಗೂ ಉತ್ತರ ನೀಡುವಷ್ಟು ಪ್ರಬಲವಾಗಿರಲಿದೆ. ಅದರೆ, ಇದಕ್ಕಾಗಿ ಸುಪ್ರೀಂ ಕೋರ್ಟ್ ನ ಬಾಗಿಲು ಬಡಿಯುವವರು ಯಾರು? “ಇಲ್ಲಿ ಖಾಸಗಿ ವ್ಯಕ್ತಿಗಳಿಗಿಂತ ಸರಕಾರ ಮನಸ್ಸು ಮಾಡಬೇಕು,’’ ಎನ್ನುತ್ತಾರೆ ಎಂಡೋಮೆಂಟ್ ಕಾಯ್ದೆಯ ಕುರಿತು ಅರಿವು ಇರುವ ಐಎಎಸ್ ಅಧಿಕಾರಿ.
ಇವೆರಡನ್ನೂ ಪಕ್ಕಕ್ಕಿಟ್ಟರೆ, ಉಳಿದಿರುವುದು ಧರ್ಮಸ್ಥಳದ ಮಾಲೀಕರೇ ಆತ್ಮವಿಮರ್ಶೆಯ ನಡೆಯನ್ನು ಇಡುವುದು ಜನಹಿತದ ದೃಷ್ಟಿಯಿಂದ ಉಳಿದ ಕೊನೆಯ ಆಯ್ಕೆ. “ನಾನು ನಿಮ್ಮಂತೆಯೇ ಸಾಮಾನ್ಯ ಮನುಷ್ಯ. ಪಟ್ಟಕ್ಕೆ ಬರುವುದು ನನಗೆ ಇಷ್ಟವಿರಲಿಲ್ಲ. ಅಂದೂ ವಿರೋಧಗಳು ಬಂದಿದ್ದವು. ಕೋರ್ಟ್ ಕೇಸುಗಳು ಇದ್ದವು. ಆದರೆ, ಅವುಗಳನ್ನು ಲೆಕ್ಕಿಸದೆ ಕ್ಷೇತ್ರವನ್ನು ಕಟ್ಟುವ ಕೆಲಸ ಮಾಡಿದೆ. ಇತಿಹಾಸದಲ್ಲಿ ಹೆಸರು ಉಳಿಯಬೇಕು ಎಂದರೆ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಿತ್ತು,’’ ಎಂದು ಇತ್ತೀಚೆಗೆ ತಮ್ಮನ್ನು ಬೆಂಬಲಿಸುವ ಸಭೆಯಲ್ಲಿ ಸ್ವತಃ ವಿರೇಂದ್ರ ಹೆಗ್ಗಡೆಯವರೇ ಹೇಳಿದ್ದಾರೆ.
“ನಾನು ಸರಕಾರಕ್ಕಿಂತ ಧರ್ಮ ದೇವತೆಗಳಿಗೆ ಉತ್ತರದಾಯಿ,’’ ಎಂದವರು ಪುನರುಚ್ಚರಿಸಿದರು. ಇವತ್ತು ಹಿಂದೂ ಅಸ್ಮಿತೆಯ ಪ್ರಶ್ನೆಯೂ ಧರ್ಮಸ್ಥಳದ ವಿಚಾರದಲ್ಲಿ ಎದುರಾಗಿರುವ ಹಿನ್ನೆಲೆಯಲ್ಲಿ ಅವರ ಮುಂದಾಳತ್ವದಲ್ಲಿಯೇ, ಸಂವಿಧಾನದ ಅಡಿಯಲ್ಲಿ ಧಾರ್ಮಿಕ ಮಂಡಳಿಯ ರಚನೆಗೆ ಮುಂದಾಗುವುದು, ಅದರಲ್ಲಿ ಎಲ್ಲ ಮತ ಪಂಗಡಗಳಿಗೂ ಅವಕಾಶ ನೀಡಲು ದೊಡ್ಡ ಮನಸ್ಸು ಮಾಡುವುದು ಗೊಂದಲಗಳ ನಿವಾರಣೆಗೆ ಸೂಕ್ತ ಪರಿಹಾರವೂ ಆಗಬಹುದು. ಆದರೆ, ತಿರುಪತಿಯನ್ನು ಬಿಟ್ಟರೆ, ಅತಿ ಹೆಚ್ಚು ಯಾತ್ರಾರ್ಥಿಗಳನ್ನು, ವಹಿವಾಟನ್ನು ಹೊಂದಿರುವ ‘ಕಾಂಪೋಸಿಟ್ ಧರ್ಮಸ್ಥಳ’ದ ಮಾಲೀಕತ್ವವನ್ನು ಬಿಟ್ಟುಕೊಡಲು ಮನಸ್ಸು ಮಾಡುವುದು, ಬಾಹುಬಲಿ ತೆಗೆದುಕೊಂಡ ವೈರಾಗ್ಯದೆಡೆಗಿನ ನಿರ್ಧಾರದಂತೆಯೇ; ಕಠಿಣವಾದುದು!
( ಇಲ್ಲಿಗೆ ʼಧರ್ಮಸ್ಥಳ ಫೈಲ್ಸ್ʼ ಸರಣಿ ಮುಗಿಯಿತು )
ಪ್ರಶಾಂತ್ ಹುಲ್ಕೋಡ್
ಪತ್ರಕರ್ತರು
ಇವುಗಳನ್ನು ಓದಿದ್ದೀರಾ?
ಭಾಗ 1 – ಧರ್ಮಸ್ಥಳ: ಮುಖ್ಯವಾಹಿನಿಯ ಆಟ ಮತ್ತು ಡಿಜಿಟಲ್ ಪ್ರತಿರೋಧ | ಭಾಗ 1
ಭಾಗ 2 – http://ದಿ ಮೇಕಿಂಗ್ ಆಫ್ ಧರ್ಮಸ್ಥಳ: ಹುಟ್ಟಿನ ಹಿಂದಿನ ರಹಸ್ಯಗಳು | ಭಾಗ – 2 https://kannadaplanet.com/the-making-of-dharmasthala-part-2/
ಭಾಗ-3 – ಇವರು ಬ್ರಿಟಿಷರ ಬಂಟರು; ಕಾನೂನಿಗೆ ನೆಂಟರು!
ಭಾಗ 4 – ‘ದಿ ರೈಸ್ ಆಫ್ ವೀರೇಂದ್ರ ಹೆಗ್ಗಡೆ’: ಗ್ರಾಮೀಣಾಭಿವೃದ್ಧಿಯ ಮರೆಯಲ್ಲಿ ರಾಷ್ಟ್ರಪತಿ ಕನಸು!