ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಪಟ್ಟಂತೆ ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (ಎಸ್ ಐಟಿ) ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡ ಅವರಿಗೆ ನೋಟಿಸ್ ನೀಡಿದೆ.
ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರು ನೋಟಿಸ್ ನೀಡಿದ್ದು, ಅಕ್ಟೋಬರ್ 27ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಒಂದು ವೇಳೆ ಹಾಜರಾಗಲು ವಿಫಲರಾದರೆ ಬಂಧಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ (ಬಿಎನ್ ಎಸ್ಎಸ್) ಕಲಂ 35(3) ಅಡಿಯಲ್ಲಿ, ದಿನಾಂಕ 04/07/2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಕುರಿತಂತೆ ಸಂದರ್ಶನಕ್ಕಾಗಿ 27/10/2025 ರಂದು ಬೆಳಿಗ್ಗೆ 10.30ಕ್ಕೆ SIT ಕಛೇರಿಗೆ ಹಾಜರಾಗಲು ಸೂಚಿಸಲಾಗಿದೆ.
ಪ್ರಕರಣದ ಸಂದರ್ಭಗಳು ಮತ್ತು ಸಂಬಂಧಿತ ಸಂಗತಿಗಳನ್ನು ಖಚಿತಪಡಿಸಲು ನಿಮ್ಮ ಹಾಜರಾತಿ ಅಗತ್ಯವಿರುತ್ತದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ಈ ಕೆಳಕಂಡ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ಸೂಚಿಸಲಾಗಿದೆ:
ಯಾವುದೇ ಅಪರಾಧವನ್ನು ಮುಂದಿನ ದಿನಗಳಲ್ಲಿ ನಡೆಸುವಂತಿಲ್ಲ; ಈ ಪ್ರಕರಣದ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು; ಈ ಪ್ರಕರಣವನ್ನು ಅರಿತ ಯಾವುದೇ ವ್ಯಕ್ತಿಗೆ ನ್ಯಾಯಾಲಯ ಅಥವಾ ಪೊಲೀಸರ ಮುಂದೆ ಹೇಳದಂತೆ ಒತ್ತಾಯಿಸುವುದಗಲೀ ಅಥವಾ ಬೆದರಿಕೆ ಹಾಕುವುದಾಗಲೀ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

