ನವದೆಹಲಿ: ರಾಜ್ಯಸಭೆ ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಸರ್ಕಾರದ ಅತಿದೊಡ್ಡ ವಕ್ತಾರ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಬುಧವಾರ ಧನಖರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ನೋಟಿಸ್ ಕುರಿತು ಮಾತನಾಡಿದ ಅವರು ರಾಜ್ಯಸಭೆಯಲ್ಲಿನ ಅಡೆತಡೆಗಳಿಗೆ ಅಧ್ಯಕ್ಷರೇ ದೊಡ್ಡ ಕಾರಣ ಎಂದು ನೇರವಾಗಿ ಆಪಾದಿಸಿದರು.
ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ಪದಚ್ಯುತಗೊಳಿಸುವಂತೆ ಇಂಡಿಯಾ ಬ್ಲಾಕ್ ರಾಜ್ಯಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಲು ನೋಟಿಸ್ ಸಲ್ಲಿಸಿದೆ. ಈ ಬಗ್ಗೆ ಮಾತನಾಡಿದ ಅವರು ಖರ್ಗೆ, 1952 ರಿಂದ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಣಯವನ್ನು ವಿಪಕ್ಷಗಳು ಮಂಡಿಲಸಿಲ್ಲ. ಏಕೆಂದರೆ, ಆ ಸ್ಥಾನವನ್ನು ಹೊಂದಿರುವವರು ನಿಷ್ಪಕ್ಷಪಾತ ಮತ್ತು ರಾಜಕೀಯವನ್ನು ಮೀರಿದವರು, ಯಾವಾಗಲೂ ನಿಯಮಗಳ ಪ್ರಕಾರ ಸದನವನ್ನು ನಡೆಸುತ್ತಿದ್ದರು ಎಂದು ಹೇಳಿದರು.
ಆದರೆ, ಇಂದು ಸದನದಲ್ಲಿ ನಿಯಮಕ್ಕಿಂತ ರಾಜಕೀಯವೇ ಹೆಚ್ಚಾಗುತ್ತಿದೆ. ರಾಜ್ಯಸಭಾ ಅಧ್ಯಕ್ಷರು ಮುಖ್ಯೋಪಾಧ್ಯಾಯರಂತೆ ವರ್ತಿಸುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು. ಪ್ರತಿಪಕ್ಷಗಳು ಎತ್ತಿದ ಚರ್ಚೆಯನ್ನು ಉಪಾಧ್ಯಕ್ಷರು ಉದ್ದೇಶಪೂರ್ವಕವಾಗಿ ತಡೆದಿದ್ದಾರೆ. ವಿರೋಧ ಪಕ್ಷಗಳು ನಿಯಮಾನುಸಾರ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದಾಗ, ಅವರು ಉದ್ಧೇಶಪೂರ್ವಕವಾಗಿ ಚರ್ಚೆಗೆ ಅವಕಾಶ ನೀಡುವುದಿಲ್ಲ. ಪದೇಪದೆ ವಿರೋಧ ಪಕ್ಷದ ನಾಯಕರನ್ನು ಮಾತನಾಡದಂತೆ ತಡೆಯುತ್ತಾರೆ ಎಂದು ಖರ್ಗೆ ಆಪಾದಿಸಿದರು.
ಸಂವಿಧಾನ ಮತ್ತು ಸಾಂವಿಧಾನಿಕ ಸಂಪ್ರದಾಯದ ಬದಲಾಗಿ ಉಪಾಧ್ಯಕ್ಷ ಧನಕರ್ ಅವರ ನಿಷ್ಠೆಯು ಆಡಳಿತಾರೂಢ ಬಿಜೆಪಿಗೆ ತೋರುತ್ತಿದ್ದಾರೆ. ಅವರು ತಮ್ಮ ಮುಂದಿನ ಬಡ್ತಿಗಾಗಿ ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ದೊಡ್ಡ ಅಡ್ಡಿಪಡಿಸುವವರು ಸ್ವತಃ ಸಭಾಪತಿ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲಎಂದು ಖರ್ಗೆ ಪ್ರತಿಪಾದಿಸಿದರು.
ರಾಜ್ಯಸಭಾ ಅಧ್ಯಕ್ಷರ ಕ್ರಮಗಳು ದೇಶದ ಘನತೆಗೆ ಧಕ್ಕೆ ತಂದಿದ್ದು, ಇಂಡಿಯಾ ಬ್ಲಾಕ್ ಅವಿಶ್ವಾಸ ನಿರ್ಣಯ ಮಂಡಿಸಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಅವರು ವಿವರಿಸಿದರು.