ಚನ್ನಪಟ್ಟಣ: ಕ್ಷೇತ್ರದ ಉಪ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೆಲವೇ ಗಂಟೆಗಳಿರುವಾಗ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ದೊಡ್ಡ ಮಳೂರು ಗ್ರಾಮದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರು ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ನೀವು ಆಶಿರ್ವಾದ ಮಾಡಬೇಕು. ಯೋಗೇಶ್ವರ್ ರನ್ನ ವಿಧಾನಸಭೆಗೆ ಕಳಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಇಂದು ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಹಾಗಾಗಿ ಇದು ಕೊನೆಯ ಪ್ರಚಾರದ ಸಭೆಯಾಗಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲುವು ಅಷ್ಟೇ ಸತ್ಯ ಎಂದು ಹೇಳಿದರು.
ಯೋಗೇಶ್ವರ್ ಅವರನ್ನು ಆಧುನಿಕ ಭಗಿರಥ ಎಂದು ಕರೀತಾರೆ. ರೈತರಿಗೆ ಸಹಾಯ ಮಾಡೋ ಕೆಲಸ ಮತ್ತು ಕೆರೆಗಳನ್ನು ತುಂಬಿಸುವ ಕೆಲಸ ಸಿಪಿ ಯೋಗೇಶ್ವರ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ 3 ಲಕ್ಷ ಲೀ. ಹಾಲು ಉತ್ಪಾದನೆ ಆಗ್ತಿದೆ. ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು. ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಯೋಗೇಶ್ವರ್ ಹೇಳಿದ್ದರು. ನೀತಿ ಸಂಹಿತೆ ಇರೋದ್ರಿಂದ ಯಾವುದೇ ಭರವಸೆ ಕೊಡಲ್ಲ. ಆದ್ರೆ ರೈತರ ಪರ ತೀರ್ಮಾನ ಮಾಡುವೆ ಎಂದು ಸಿಎಂ ಸಿದ್ದರಾಮಯ್ಯ. ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಯಾವೊಬ್ಬ ಒಕ್ಕಲಿಗ ನಾಯಕನನ್ನೂ ಬೆಳೆಸಿಲ್ಲ. ದೇವೇಗೌಡರಿಗೆ ಮೊಮ್ಮಗ ನಿಖಿಲ್ ಮೇಲೆ ವ್ಯಾಮೋಹ. ಹಾಗಾಗಿ ಚನ್ನಪಟ್ಟಣದಲ್ಲಿ ನಿಖಿಲ್ ಗೆ ಟಿಕೆಟ್ ಕೊಟ್ಟಿದ್ದಾರೆ. ಯೋಗೇಶ್ವರ್ ರನ್ನು ತಮ್ಮ ಅಳಿಯ ಡಾ.ಸಿ.ಎನ್ ಮಂಜುನಾಥ್ ಗೆಲುವಿಗೆ ಬಳಸಿದರು. ಯೋಗೇಶ್ವರ್ ಗೆ ಚನ್ನಪಟ್ಟಣದ ಟಿಕೆಟ್ ಕೊಡಬಹುದಿತ್ತು. ಆದರೆ ಒಕ್ಕಲಿಗರಿಗೆ ದೇವೇಗೌಡ್ರು ಟಿಕೆಟ್ ಕೊಡಲ್ಲ. ಬುದ್ದಿವಂತ ಒಕ್ಕಲಿಗರನ್ನು ದೇವೇಗೌಡ್ರು ಬೆಳೆಯಲು ಬಿಡಲ್ಲ. ಒಕ್ಕಲಿಗರಿಗೆ ಅನ್ಯಾಯ ಮಾಡೋದೇ ದೇವೇಗೌಡರ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನನ್ನು ನಾನು ಮುಖ್ಯಮಂತ್ರಿ ಮಾಡಿದೆ ಅಂದರು. ಮಿಸ್ಟರ್ ದೇವೇಗೌಡ ನಾನು, ಜಾಲಪ್ಪ ಇಲ್ಲದಿದ್ರೆ ನೀವು CM ಆಗ್ತಿರಲಿಲ್ಲ. ನಾನು, ಭೈರೇಗೌಡ, ಸಿಂಧ್ಯಾ, ಜಾಲಪ್ಪ ಸೇರಿ ಹಲವರಿಂದ ನೀವು ಸಿಎಂ ಆದಿರಿ. ಸಿದ್ದರಾಮಯ್ಯನಿಗೆ ಸೊಕ್ಕು ಬಂದಿದೆ ಎಂದು ಹೇಳ್ತಾರೆ. ಸಿದ್ದರಾಮಯ್ಯನ ಅಹಂಕಾರ ಇಳಿಸಬೇಕು ಎಂದು ಹೇಳ್ತಾರೆ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದು ಆಕಸ್ಮಿಕವಾಗಿ. ನೀವು ಇವತ್ತಿನವರೆಗೂ ಪಾಳೆಗಾರಿಕೆ ಪ್ರವೃತ್ತಿ ಬಿಟ್ಟಿಲ್ಲ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಸರ್ಕಾರ ತೆಗೆಯುವುದಕ್ಕೆ ದೇವೇಗೌಡನಿಂದಲೂ ಸಾಧ್ಯವಿಲ್ಲ., ಸರ್ಕಾರ ತೆಗೆಯಲು ಕುಮಾರಸ್ವಾಮಿಯಿಂದಲೂ ಸಾಧ್ಯವಿಲ್ಲ ಎಂದು ಅಬ್ಬರಿಸಿದರು.
ದೇವೇಗೌಡರಿಗೆ ಅಳೋದು ಬಿಟ್ರೆ ಏನೂ ಬರಲ್ಲ. ಪಾಪ…ನಿಖಿಲ್ ಗೂ ಅಳೋಕೆ ಕಲಿಸಿಬಿಟ್ಟಿದ್ದಾರೆ. ನಿಖಿಲ್ ಕೂಡ ಪ್ರಚಾರದಲ್ಲಿ ಅಳ್ತಾನೆ. ಅಳೋದು ನಮ್ಮ ವಂಶಪರಂಪರೆಯಲ್ಲಿದೆ ಅಂತಾರೆ. ಮೊಮ್ಮಗನ ಗೆಲ್ಲಿಸಲು ಚನ್ನಪಟ್ಟಣದಲ್ಲೇ ಉಳಿದಿದ್ದಾರೆ. ಯೋಗೇಶ್ವರ್ ಗೆ ಟಿಕೆಟ್ ಸಿಕ್ಕಿದ್ರೆ ಗೌಡ್ರು ಪ್ರಚಾರಕ್ಕೆ ಬರ್ತಿದ್ರಾ? ಕೇವಲ ಕುಟುಂಬ ರಾಜಕೀಯಕ್ಕೆ ಗೌಡ್ರು ಬಂದಿದ್ದಾರೆ ಎಂದು ಹರಿಹಾಯ್ದರು. ಹಾಸನದಲ್ಲಿ ಹೆಣ್ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ದೇವೇಗೌಡರ ಕುಟುಂಬದವರ ಕಣ್ಣೀರಿಗೆ ಮರುಳಾಗಬೇಡಿ ಎಂದರು.