ರಾಮನಗರ: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡಿರುವ ಡಿಕೆ ಸುರೇಶ್ ಮತದಾನ ಮಾಡಿದ ಬಳಿಕ ಮಾತನಾಡಿದ್ದು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ದೊಡ್ಡಾಲನಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಡಿ.ಕೆ. ಸುರೇಶ್, ಇದು ನನ್ನ ನಾಲ್ಕನೇ ಚುನಾವಣೆ. ಜನ ನಮ್ಮ ಮೇಲೆ ಹಚ್ಚಿನ ವಿಶ್ವಾಸ ಇಟ್ಟು ಗೆಲ್ಲಿಸುವ ವಾತಾವರಣ ಇದೆ. ನನ್ನ ಕೆಲಸಗಳು ನನ್ನ ಗೆಲುವಿಗೆ ಕಾರಣ ಆಗುತ್ತೆ. ನಾನು ಬೆಳಿಗ್ಗೆಯಿಂದಲೂ ಕೆಲ ಮತಗಟ್ಟೆಗಳಿಗೆ ಭೇಟಿ ನೀಡಿ ಬಂದಿದ್ದೇನೆ. ಎಲ್ಲಾ ಕಡೆ ಗೆಲ್ಲುವ ವಾತಾವರಣ ಇದೆ ಎಂದಿದ್ದಾರೆ.
ಕಾಂಗ್ರೆಸ್ ನಿಂದ ಕೂಪನ್ ಹಂಚಿಕೆ ಮಾಡಲಾಗುತ್ತಿದೆ ಎಂಬ ಬಿಜೆಪಿ/ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಕೂಪನ್ ಹಂಚಿರೋದನ್ನು ನಾನು ಹೇಳಲಾ ಎಂದು ಬಿಜೆಪಿ ಗಿಫ್ಟ್ ಕಾರ್ಡ್ ತೋರಿಸಿದರು. ಬಿಜೆಪಿ-ಜೆಡಿಎಸ್ ನವರಿಗೆ ಆರೋಪ ಮಾಡೋದು ಬಿಟ್ಟು ಬೇರೇನೂ ಗೊತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ಪಾಪ ಹೆಣ್ಣುಮಕ್ಕಳ ಮಾನ ಮರ್ಯಾದೆ ಕಳೆಯುವ ಕೆಲಸ ಆಗ್ತಿದೆ. ಹೆಚ್.ಡಿ.ಡಿ.ಕುಟುಂಬ ಹಾಸನ ಜಿಲ್ಲೆಯ ಮರ್ಯಾದೆ ಹರಾಜು ಹಾಕುತ್ತಿದೆ. ಇದು ಅವರಿಗೆ ನಾಚಿಕೆ ಆಗಬೇಕು. ಇದರ ಬಗ್ಗೆ ಮೊದಲು ಮಾತನಾಡಲಿ. ಮೊದಲು ಕಣದಿಂದ ಅವರು ಹಿಂದೆ ಸರಿಯಬೇಕು. ಅವರ ಕುಟುಂಬಕ್ಕೆ ಹೆಣ್ಣುಮಕ್ಕಳ ಮೇಲೆ ಗೌರವ ಇದ್ರೆ ಚುನಾವಣಾ ಕಣದಿಂದ ಹಿಂದೆ ಸರಿಯಲಿ ಎಂದರು.
ಈ ರೀತಿಯ ನೀಚ ವ್ಯವಸ್ಥೆ ಇಟ್ಟುಕೊಂಡು ಅವರು ನಮ್ಮ ಬಗ್ಗೆ ಆರೋಪ ಮಾಡ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏನಾಗ್ತಿದೆ? ಅದಕ್ಕೆಲ್ಲ ಉತ್ತರ ಕೊಡುವವರು ಯಾರು? ಬೇರೆಯವರ ಮೇಲೆ ಆರೋಪ ಮಾಡೋದು ಒಂದೇ ಕೆಲಸ ಅಲ್ಲ. ತಮ್ಮ ನಡೆನುಡಿಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದಿದ್ದಾರೆ.
ಬಿಜೆಪಿಯವ್ರು ಹತಾಶರಾಗಿದ್ದಾರೆ. ಸುಖಾಸುಮ್ಮನೆ ನಮ್ಮಮೇಲೆ ಆರೋಪ ಮಾಡ್ತಾರೆ. ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಅದನ್ನ ಹದಗೆಡಿಸಲು ಹೀಗೆ ಆರೋಪ ಮಾಡ್ತಿದ್ದಾರೆ ಎಂದಿದ್ದಾರೆ.