ಪ್ರಜ್ವಲ್‌ ರೇವಣ್ಣನನ್ನು ಬಂಧಿಸಲು ಆಗ್ರಹ | ಮಂಗಳೂರಿನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ʼಕಪ್ಪು ಉಡುಪಿನಲ್ಲಿ ಮಹಿಳೆಯರುʼ ಪ್ರತಿಭಟನೆ

Most read

                                                                                           ವರ್ತಮಾನ ಕಾಲದ ಬಿಕ್ಕಟ್ಟಿನಲ್ಲಿ ಹೆಣ್ಣು ತನ್ನ ಘನತೆ ಮತ್ತು ಗೌರವವನ್ನು ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ದಿನನಿತ್ಯ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಕೊಲೆಗಳು ಹೆಣ್ಣನ್ನು ರಕ್ತದ ಮಡುವಿನಲ್ಲಿ ಬೀಳುವಂತೆ ಮಾಡಿದೆ. ಎಲ್ಲಕ್ಕೂ ಕಲಶವಿಟ್ಟಂತೆ ಹಾಸನದ ಪೆನ್‌ ಡ್ರೈವ್ ಮಹಿಳಾ ದೌರ್ಜನ್ಯ ಪ್ರಕರಣ ಜಗತ್ತಿನಾದ್ಯಂತ ಕುಖ್ಯಾತಿಯನ್ನು ಪಡೆದಿದೆ. ಆರೋಪಿಗಳನ್ನು ರಕ್ಷಿಸುತ್ತಿರುವ ಹುನ್ನಾರವು ನಡೆಯುತ್ತಿದೆ. ಹೆಣ್ಣು ಜನ್ಮವನ್ನು ಅವಮಾನಿಸುವ ಹೀಯಾಳಿಸುವ ಮತ್ತು ಅವಳ ಬದುಕಿನ ಘನತೆ ಮತ್ತು ಗೌರವವನ್ನು ಕಸಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲದಕ್ಕೆ ಪ್ರತಿಭಟನೆಯಾಗಿ ಮಹಿಳೆಯರು ಮತ್ತೆ ಮತ್ತೆ ಬೀದಿಗೆ ಬಂದು ನಿಲ್ಲುವಂತೆ ಆಗಿದೆ. ಸರಕಾರ, ಶಾಸಕಾಂಗ ನ್ಯಾಯಾಂಗ ಇದನ್ನೆಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹೆಣ್ಣು ಮಕ್ಕಳು ತಮ್ಮ ಮನೆಯ ಒಳಗೆ ಹತ್ಯೆಯಾಗುವ, ರಕ್ತದ ಮಡುವಿನಲ್ಲಿ ಬೀಳುವ, ಕಾಲೇಜು ಕ್ಯಾಂಪಸ್ ಮನೆಯ ವಾತಾವರಣದಲ್ಲಿ ಸುರಕ್ಷಿತವಲ್ಲದ ಸ್ಥಿತಿಯಲ್ಲಿ ಬದುಕಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಕ್ರೌರ್ಯ ಮತ್ತು ಕಾಮ ಎರಡು ಜೋಡಿ ಪದಗಳು. ಇದರಿಂದ ಹಿಂಸೆ ವಿಜೃಂಭಿಸುತ್ತಿದೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರ್ತಿ ಜ್ಯೋತಿ ಚೇಳ್ಯಾರು ಸರಕಾರವನ್ನು ಒತ್ತಾಯಿಸಿದರು.

ಪ್ರಜ್ವಲ್‌ ರೇವಣ್ಣನನ್ನು  ಬಂಧಿಸಲು ಆಗ್ರಹಿಸಿ ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು ಹಮ್ಮಿಕೊಂಡ ಕಪ್ಪು ಉಡುಗೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಕನ್ನಡ ಪ್ಲಾನೆಟ್‌ ಗೆ ತಮ್ಮ ಅನ್ನಿಸಿಕೆಗಳನ್ನು ಅವರು ಹಂಚಿಕೊಂಡರು.

ಅನುಪಮಾ ಮಾಸಿಕದ ಸಂಪಾದಕಿ ಶೆಹನಾಝ್‌ ಎಂ ಮಾತಾಡಿ ʼಪ್ರಜ್ವಲ್‌ ರೇವಣ್ಣ ಮಹಿಳಾ ದೌರ್ಜನ್ಯ ಹಗರಣವು ನಾಡಿಗೆ ನಾಡೇ ತಲೆ ತಗ್ಗಿಸುವಂತೆ ಮಾಡಿದೆ. ಇಂದು ಇಂತಹ ವಿಡಿಯೋ ಬಹಿರಂಗಕ್ಕೆ ಬಾರದೇ ಇರುತ್ತಿದ್ದರೆ ದೌರ್ಜನ್ಯಕ್ಕೀಡಾಗುವ ಮಹಿಳೆಯರ ಸಂಖ್ಯೆ ಇನ್ನೂ ಹೆಚ್ಚಾಗುತ್ತಾ ಹೋಗುತ್ತಿತ್ತು. ಅದರೆ ಸಂತ್ರಸ್ತೆಯರ ಗುರುತು ಮರೆಸದೆ ಹಾಗೇ ಹೊರಹಾಕಿದ್ದು ಅಕ್ಷಮ್ಯ. ಈಗ ಸಂತ್ರಸ್ತೆಯರಿಗೆ ಸತ್ಯ ಹೇಳದಂತೆ ಬೆದರಿಸಲಾಗುತ್ತಿದೆ. ಹೆಣ್ಣು ಮಕ್ಕಳು ಭಯದಿಂದ ಬದುಕುವ ಪ್ರಸಂಗ ಬಂದಿದೆ. ಅವರ ಘನತೆ, ಮಾನ, ಗೌರವ ಕುಸಿಯುತ್ತಿದೆ. ಅವರಿಗೆ ರಕ್ಷಣೆ ಕೊಡ ಬೇಕಾಗಿದೆ. ಈ ಹಗರಣವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಕೀಳುತನ ಬಿಟ್ಟು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರಕಾರ ದಿಟ್ಟ ಹೆಜ್ಜೆ ಇಡಬೇಕುʼ ಎಂದರು.

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಮರ್ಲಿನ್‌ ಮಾರ್ಟಿಸ್ ಮಾತಾಡಿ ಹಾಸನದಲ್ಲಿ ನಡೆದಿರುವುದು ಸಾಮಾನ್ಯ ಘಟನೆಯಲ್ಲ ಅದೊಂದು ಘೋರ ಲೈಂಗಿಕ ಹತ್ಯಾಕಾಂಡ. ಸರಕಾರ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ಕೊಟ್ಟಿದೆ. ಇಷ್ಟೇ ಸಾಕಾಗುವುದಿಲ್ಲ. ಮಹಿಳೆಯರ ಘನತೆಯ ರಕ್ಷಣೆಗೂ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಎಲ್ಲಿದ್ದರೂ ಆರೋಪಿ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಬೇಕು ಹಾಗೂ ಸಂತ್ರಸ್ತೆಯರಿಗೆ ಮಾನಸಿಕ ಮತ್ತು ಕಾನೂನು ನೆರವು ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.

ಆರೋಪಿ ಪ್ರಜ್ವಲ್ ರೇವಣ್ಣನನ್ನು ಎಲ್ಲಿದ್ದರೂ ಪತ್ತೆಮಾಡಿ ಈ ಕೂಡಲೇ ಬಂಧಿಸಬೇಕು. ಐಟಿ ಕಾಯಿದೆ, ಐಪಿಸಿ ಕಾಯಿದೆಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು, ಜಾಮೀನಿನ ಮೇಲೆ ಹೊರಬಂದಿರುವ (ಸಂಸದ) ರೇವಣ್ಣ ಅವರಿಗೆ ಜಾಮೀನು ನಿರಾಕರಿಸುವಂತೆ ತಕ್ಷಣ ಕ್ರಮ ಜರುಗಿಸಬೇಕು, ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಮತ್ತು ಸಂತ್ರಸ್ತ ಮಹಿಳೆಯರನ್ನು ಉದ್ದೇಶಿಸಿ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕು, ಸಂತ್ರಸ್ತೆಯರಿಗೆ ಮಾನಸಿಕ ಮತ್ತು ಕಾನೂನು ನೆರವು ಒದಗಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆರೋಪಿ ಸಂಸದನೂ ಆಗಿರುವುದರಿಂದ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಪ್ರಕಾರವೂ ಸಂತ್ರಸ್ತೆಯರಿಗೆ ಎಲ್ಲ ನೆರವು ನೀಡಬೇಕು,   ಈ ಲೈಂಗಿಕ ಕೃತ್ಯಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಜೊತೆಗೆ ಭಾಗಿ ಆಗಿರಬಹುದಾದವರನ್ನು ಪತ್ತೆಮಾಡಿ ಮೊಕದ್ದಮೆ ಹೂಡಬೇಕು, ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹೇಳಿದ ಬಿಜೆಪಿ ನಾಯಕ ಬಿ. ದೇವರಾಜೇಗೌಡ ಮತ್ತು ಕಾರ್ತಿಕ್ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಬೇಕು, ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್ ಡಿ ರೇವಣ್ಣ ಅವರ ವಿಧಾನ ಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸರಕಾರಕ್ಕೆ ಮನವಿಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಹಾಸನದಲ್ಲಿ ಇದೇ 30 ರಂದು ನಡೆಯಲಿರುವ ‘ಚಲೋ ಹಾಸನ’ ಪ್ರತಿಭಟನೆಗೆ ಬೆಂಬಲವನ್ನೂ ಸೂಚಿಸಲಾಯಿತು.

ಪ್ರತಿಭಟನೆಯಲ್ಲಿ ಮಂಜುಳಾ ಹರಿಣಿ, ದೇವಿಕಾ, ಗುಲಾಬಿ ಬಿಳಿಮಲೆ, ಪದ್ಮ, ನಳಿನಿ, ಸಾಜಿದಾ ಮೂಮಿನ್‌, ಸುಮಯ್ಯ, ಜೆಸಿಂತಾ, ಫ್ರೀಡಾ, ಸ್ಮಿತಾ ಭಟ್‌, ಯೋಗೀಶ್‌ ಮಲ್ಲಿಗೆಮಾಡು ಮುಂತಾದವರಿದ್ದರು.

More articles

Latest article