ಮಂಗಳೂರು : ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂದು ಗುರುತಿಸಲಾಗಿರುವ ಡಾ. ಅರುಣ್ ಉಳ್ಳಾಲ್ ಎಂಬವರು ಉಳ್ಳಾಲ ತಾಲೂಕು ಕಿನ್ಯಾ ಗ್ರಾಮದಲ್ಲಿ ಸಂಘ ಪರಿವಾರಕ್ಕೆ ಸೇರಿರುವ ಕೇಶವ ಶಿಶು ಮಂದಿರ ಆಯೋಜಿಸಿದ ನವ ವಿವಾಹಿತರ ಸಮಾವೇಶ ಕಾರ್ಯಕ್ರಮದಲ್ಲಿ ಆಡಿರುವ ಮಾತುಗಳು ನಮಗೆಲ್ಲಾ ಆಘಾತ ಉಂಟು ಮಾಡಿದೆ. ನಾವು ಈ ಜನಾಂಗ ದ್ವೇಷದ, ಧಾರ್ಮಿಕ ಅಲ್ಪ ಸಂಖ್ಯಾತರ ಕುರಿತು ದ್ವೇಷ ಹುಟ್ಟಿಸುವ, ಹಿಂಸೆಗೆ ಪ್ರಚೋದಿಸುವ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ. ಹಾಗೂ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರಕಾರ ನ್ಯಾಯಯುತ ಕ್ರಮಗಳನ್ನು ವಿಳಂಬವಿಲ್ಲದೆ ಜರುಗಿಸಬೇಕು ಎಂದು ಮಂಗಳೂರಿನ ಸಮಾನ ಮನಸ್ಕರು ಆಗ್ರಹಿಸಿದ್ದಾರೆ.
“ಕ್ರೈಸ್ತ, ಮುಸ್ಲಿಮರು ಸೇರಿದಂತೆ ಭಿನ್ನ ಧರ್ಮದವರ ಮದುವೆ ಹಾಲ್ ಗಳಲ್ಲಿ ಹಿಂದುಗಳು ಮದುವೆಗಳನ್ನು ನಡೆಸಬಾರದು, ಅವರ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಹಿಂದುಗಳು ಮಕ್ಕಳನ್ನು ಸೇರಿಸಬಾರದು, ಹಿಂದುಗಳ ಒಡೆತನದ ಮದುವೆ ಹಾಲ್ ಗಳು, ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಬಳಸಬೇಕು….” ಎಂಬ ಮಾತುಗಳನ್ನು ಓರ್ವ ಅಧ್ಯಾಪಕ ಸಂಘ ಪರಿವಾರದ ವೇದಿಕೆಯಲ್ಲಿ, ಅವರ ನಾಯಕರ ಸಮ್ಮುಖ ನವ ವಿವಾಹಿತರನ್ನು ಉದ್ದೇಶಿಸಿ ಬಹಿರಂಗವಾಗಿ ಹೇಳುವುದು ಗಾಬರಿ ಹುಟ್ಟಿಸುವ ಅಪಾಯಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಬಲ್ಲಿ ಸ್ಥಳೀಯ ದಂತವೈದ್ಯನೊಬ್ಬ ಸಂಘಪರಿವಾರದ ವೇದಿಕೆಯಲ್ಲಿ ಇದೇ ಅರ್ಥದ ಜನಾಂಗ ದ್ವೇಷದ ಭಾಷಣ ಮಾಡಿದ್ದು ನಮ್ಮ ಗಮನದಲ್ಲಿದೆ. ಇಂತಹ ಘಟನೆಗಳು ಸಾಮಾನ್ಯ ಎಂಬಂತೆ ಪದೇ ಪದೇ ಜರುಗುತ್ತಿರುವುದು ದೇಶದ ಭವಿಷ್ಯದ ಕುರಿತು ಕಾಳಜಿ ಉಳ್ಳವರನ್ನು ಚಿಂತೆಗೀಡು ಮಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಡಾ. ಅರುಣ್ ಉಳ್ಳಾಲ್ ತನ್ನ ಭಾಷಣದಲ್ಲಿ ಮದುವೆ ಸಭಾಂಗಣಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹಿಂದು, ಮುಸ್ಲಿಂ, ಕ್ರೈಸ್ತ ಎಂಬಂತೆ ಧರ್ಮದ ಆಧಾರದಲ್ಲಿ ವಿಭಜಿಸಿದ್ದಾರೆ. ನಮಗೆ ತಿಳಿದ ಪ್ರಕಾರ ಆ ರೀತಿ ಇರಲು ಕಾನೂನಿನಲ್ಲಿ ಅವಕಾಶ ಇಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಮಾಧ್ಯಮ, ಕನ್ನಡ ಮಾಧ್ಯಮ, ಸರಕಾರಿ, ಖಾಸಗಿ ಎಂಬ ಎರಡು ವರ್ಗ, ಖಾಸಗಿಯಲ್ಲಿ ಅನುದಾನಿತ, ಅನುದಾನ ರಹಿತ ಎಂಬ ವರ್ಗಗಳನ್ನು ಶಿಕ್ಷಣ ಇಲಾಖೆ ಮಾಡಿದೆಯೇ ಹೊರತು ಧರ್ಮ, ಜಾತಿಯ ಆಧಾರದಲ್ಲಿ ವರ್ಗೀಕರಣ ಮಾಡಲಾಗಿಲ್ಲ. ಅರುಣ್ ಕುಮಾರ್ ರ ಕುಖ್ಯಾತ ಭಾಷಣದಲ್ಲಿ ಮಂಗಳೂರಿನ ಶಾರದಾ, ಕೆನರಾ, ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳನ್ನು ಹಿಂದು ಶಿಕ್ಷಣ ಸಂಸ್ಥೆಗಳು ಎಂದು ಉಲ್ಲೇಖಿಸಿದ್ದಾರೆ. ಈ ಶಾಲಾ ಕಾಲೇಜುಗಳಿಗೆ ಮಾತ್ರವೇ ಹಿಂದುಗಳು ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಹೇಳಿದ್ದಾರೆ. ಅವರು ಉಲ್ಲೇಖಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಕಲಿಯುತ್ತಿದ್ದಾರೆ. ಕೆನರಾ, ಎಸ್ ಡಿ ಎಮ್, ಶಾರದಾ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳೋ ಅಥವಾ ಅರುಣ್ ಉಳ್ಳಾಲ್ ಹೇಳಿದಂತೆ ಹಿಂದೂ ಶಿಕ್ಷಣ ಸಂಸ್ಥೆಗಳೋ ಎನ್ನುವ ಬಗ್ಗೆ ಅವುಗಳ ಆಡಳಿತ ಮಂಡಳಿಗಳು ಕೂಡಲೇ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
‘ಹಿಂದೂ ಕಾಲೇಜು’ಗಳಲ್ಲಿ ಒಂದು ತರಗತಿಗೂ ವಿದ್ಯಾರ್ಥಿಗಳಿಲ್ಲ, ಆದರೆ ‘ಅನ್ಯಮತೀಯ ಕಾಲೇಜುಗಳಲ್ಲಿ ‘ ಹನ್ನೊಂದು ಬ್ಯಾಚ್ ಗಳಲ್ಲಿ ವಿದ್ಯಾರ್ಥಿಗಳಿದ್ದಾರೆ ಎಂದೂ ಈ ವ್ಯಕ್ತಿ ಅಲವತ್ತುಕೊಂಡಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಅರಸಿಕೊಂಡು ಒಳ್ಳೆಯ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಸರ್ವವಿದಿತವಾಗಿರುವಾಗ, ಈ ಅಧ್ಯಾಪಕನ ಹೇಳಿಕೆಯು ಈತ ಪ್ರಚಾರ ಕೊಡಲು ಹೆಣಗಾಡಿದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ ಎನ್ನುವ ಮೂಲಕ ಆ ಸಂಸ್ಥೆಗಳನ್ನು ಆತನೇ ಅವಮಾನಿಸಿದಂತಾಗಿದೆ. ತಮ್ಮ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸೇರುತ್ತಿಲ್ಲ ಎಂದಾದರೆ ಆಯಾ ಕಾಲೇಜುಗಳವರು ಸ್ವವಿಮರ್ಶೆ ಮಾಡಿಕೊಂಡು ಅದಕ್ಕೆ ಕಾರಣಗಳನ್ನು ಹುಡುಕಿ ಸರಿಪಡಿಸಿಕೊಳ್ಳಬೇಕೇ ಹೊರತು ವಿದ್ಯಾರ್ಥಿಗಳು ಬಯಸುತ್ತಿರುವ ಕಾಲೇಜುಗಳ ಮೇಲೆ ಮತೀಯವಾದಿ ದಾಳಿ ನಡೆಸುವುದಲ್ಲ ಎಂದು ಹೇಳಿದ್ದಾರೆ.
ಸಂವಿಧಾನದ ಆಶಯಗಳಿಗೆ ಘಾಸಿ ಉಂಟುಮಾಡುವ ಜನಾಂಗ ದ್ವೇಷಿ ಚಿಂತನೆಗಳನ್ನು ಹರಡುತ್ತಿರುವ ಅರುಣ್ ಉಳ್ಳಾಲ್ ಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಇದು ಮತ್ತಷ್ಟು ಆಘಾತಕಾರಿ. ಸಮಾಜ ವಿಭಜನೆಯ, ಜನಾಂಗ ದ್ವೇಷದ ಸಿದ್ದಾಂತವಾದಿಗಳಿಗೆ ಸರಕಾರ ಕೊಡಮಾಡುವ ಇಂತಹ ಪ್ರಶಸ್ತಿಗಳು ದೊರಕಿರುವುದು ಖೇದಕರ. ಈ ಪ್ರಶಸ್ತಿಗಳನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಎಂದೂ ಒತ್ತಾಯಿಸಿದ್ದಾರೆ.
ನಾಗರಿಕ ಸಮಾಜದ ಪ್ರಬಲ ಆಗ್ರಹದ ಹಿನ್ನೆಲೆಯಲ್ಲಿ ಜನಾಂಗ ದ್ವೇಷದ ಭಾಷಣ ಮಾಡಿದ ಪ್ರಕರಣದಲ್ಲಿ ಡಾ. ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಣೆ ಮೊಕದ್ದಮೆ ದಾಖಲಿಸಿರುವುದು ಸ್ವಾಗತಾರ್ಹ. ಆದರೆ, ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆಯೆಂಬಂತೆ ಪರಿಗಣಿಸಿ ಸೆನ್ ಠಾಣೆಯಲ್ಲಿ ಐಟಿ ಸೆಕ್ಷನ್ ಅಡಿ ಎಫ್ ಐ ಆರ್ ದಾಖಲಿಸಿರುವುದು ಸಮಂಜಸ ಅಲ್ಲ. ಇದು ಆರೋಪಿತನಿಗೆ ಕಾನೂನಿನ ಬಲೆಯಿಂದ ನುಣುಚಿಕೊಳ್ಳಲು ಅವಕಾಶ ಒದಗಿಸಬಹುದು. ಇದು ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದಲ್ಲಿ ಸಂಘ ಪರಿವಾರ ಪೋಷಿತ ಕೇಶವ ಶಿಶು ಮಂದಿರದ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಆಕ್ರೋಶ ಮಾತ್ರ ವ್ಯಕ್ತವಾಗಿದೆ. ಆದುದರಿಂದ ಐಟಿ ಸೆಕ್ಷನ್ ಕೈ ಬಿಟ್ಟು ಮತೀಯ ದ್ವೇಷ ಹಾಗೂ ವಿಭಜನಕಾರಿ ಚಟುವಟಿಕೆಗಳ ಕುರಿತಾದ ಬಲವಾದ ಸೆಕ್ಷನ್ ಗಳನ್ನು ಸೇರಿಸಿ ಎಫ್ ಐ ಆರ್ ಬಲಪಡಿಸಬೇಕು, ಹಾಗೂ ಎಫ್ಐಆರ್ ಅನ್ನು ಘಟನೆ ನಡೆದ ವ್ಯಾಪ್ತಿಯ ಉಳ್ಳಾಲ ಠಾಣೆಗೆ ವರ್ಗಾಯಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ರೀತಿಯ ಮತೀಯ ವಿಭಜನೆ, ದ್ವೇಷ ಹಬ್ಬಿಸುವ ಭಾಷಣಗಳಿಗೆ ಅವಕಾಶ ಕಲ್ಪಿಸಿದ ಆಯೋಜಕರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಬೇಕಿದೆ. ತನ್ನ ಭಾಷಣದಲ್ಲಿ ಅರುಣ್ ಉಳ್ಳಾಲ್ “ಅಣ್ಣ ಹೇಳಿದಂತೆ.... ಎಂದು ವೇದಿಕೆಯಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಪದೇ ಪದೇ ಉಲ್ಲೇಖಿಸಿದ್ದಾರೆ. ಈ ಮಾತುಗಳು ಪ್ರಭಾಕರ ಭಟ್ ರು ಅರುಣ್ ಉಳ್ಳಾಲ್ ರಿಗೆ ಜನಾಂಗ ದ್ವೇಷದ ಭಾಷಣ ಮಾಡಲು ಪ್ರೇರಣೆ ಒದಗಿಸಿರುವುದನ್ನು ಖಚಿತ ಪಡಿಸುತ್ತದೆ. ಪ್ರಭಾಕರ ಭಟ್ ಹಾಗೂ ಸಂಘ ಪರಿವಾರದ ಮುಖಂಡರು ಪದೇ ಪದೇ ಈ ರೀತಿಯ ಭಾಷಣಗಳಿಗೆ ಕಾನೂನಿನ, ಸರಕಾರದ ಯಾವ ಭಯವೂ ಇಲ್ಲದೆ ವೇದಿಕೆ ಕಲ್ಪಿಸುತ್ತಿರುವುದರಿಂದ ಪ್ರಭಾಕರ ಭಟ್ ಸಹಿತ ವೇದಿಕೆ ಮೇಲಿದ್ದ ಸಂಘ ಪರಿವಾರದ ಇತರೆ ನಾಯಕರನ್ನೂ ಅರುಣ್ ಉಳ್ಳಾಲ್ ಜೊತೆ ಸಹ ಆರೋಪಿಗಳನ್ನಾಗಿಸಬೇಕು ಎಂದು ಜಂಟಿ ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.
ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಜಾನಪದ ತಜ್ಞ ಡಾ. ಗಣನಾಥ ಶೆಟ್ಟಿ ಎಕ್ಕಾರು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಉದಯ ಕುಮಾರ ಇರ್ವತ್ತೂರು, ಡಾ. ಎನ್ ಇಸ್ಮಾಯಿಲ್, ಸಂಶೋಧಕ ಪ್ರೊ. ಶಿವರಾಮ ಶೆಟ್ಟಿ, ಹಿರಿಯ ದಲಿತ ನಾಯಕ ಎಂ ದೇವದಾಸ್, ಚಿಂತಕ ಶ್ರೀನಿವಾಸ ಕಾರ್ಕಳ, ಹಿರಿಯ ಸಾಹಿತಿ ಬಿ ಎಮ್ ರೋಹಿಣಿ, ನ್ಯಾಯವಾದಿ ಯಶವಂತ ಮರೋಳಿ, ಪತ್ರಕರ್ತ ನವೀನ್ ಸೂರಿಂಜೆ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಚಿಂತಕ ವಾಸುದೇವ ಉಚ್ಚಿಲ, ಸಾಮಾಜಿಕ ಚಿಂತಕ ಎಮ್ ಜಿ ಹೆಗ್ಡೆ, ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ, ಸಾಮರಸ್ಯ ಮಂಗಳೂರು ಸಂಘಟನೆಯ ಮಂಜುಳಾ ನಾಯಕ್, ಶಿಕ್ಷಕಿ ಎಂ. ಉಷಾ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಗುಲಾಬಿ ಬಿಳಿಮಲೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಪ್ರಕಾಶಕ ಕಲ್ಲೂರು ನಾಗೇಶ್, ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ದಕ್ಷಿಣ ಕನ್ನಡದ ಸಂತೋಷ್ ಬಜಾಲ್, ಸಮುದಾಯ ಮಂಗಳೂರು ಇದರ ಮನೋಜ್ ವಾಮಂಜೂರು, ರಂಗಕರ್ಮಿ ಪ್ರಭಾಕರ ಕಾಪಿಕಾಡ್ ಇವರೆಲ್ಲ ಈ ಹೇಳಿಕೆಯ ಮೂಲಕ ಡಾ. ಅರುಣ್ ಉಳ್ಳಾಲ್ ಮೇಲೆ ಕಠಿಣ ಕ್ರಮ ಜರಗಿಸುವಂತೆ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.