ಚನ್ನಪಟ್ಟಣ ಫಲಿತಾಂಶ ಎಲ್ಲರಿಗೂ ಆಘಾತ ತಂದಿದೆ. ಪ್ರತಿ ಹಳ್ಳಿಯಲ್ಲೂ ನನಗೆ ಪ್ರೀತಿ, ವಾತ್ಸಲ್ಯ ತೋರಿದ್ದಾರೆ. ಮತದಾರರ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಎನ್ ಡಿಎ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಫಲಿತಾಂಶದ ನಂತರ ಮಾತನಾಡಿದ ಅವರು ಒಬ್ಬ ಯುವಕನಿಗೆ ಎನ್ ಡಿಎ ಅಭ್ಯರ್ಥಿ ಆಗುವ ಅವಕಾಶ ಸಿಕ್ಕಿತ್ತು. 18 ದಿನಗಳ ಕಾಲ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಿದ್ದೇನೆ. 87 ಸಾವಿರಕ್ಕೂ ಹೆಚ್ಚು ಮತಗಳು ನಮ್ಮ ಪರ ಬಂದಿವೆ. ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ, ಮತದಾರರಿಗೆ ಧನ್ಯವಾದ. ಜನರ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇನೆ ಎಂದರು.
ಇದು ಬಯಸದೇ ಬಂದ ಚುನಾವಣೆ. ಕೊನೆ ಘಳಿಗೆಯ ತೀರ್ಮಾನಕ್ಕೆ ತಲೆ ಬಾಗಬೇಕಾಯಿತು. ಮಂಡ್ಯದ ಕಾರ್ಯಕರ್ತರು ಕೂಡಾ ಚುನಾವಣೆಯಲ್ಲಿ ಶ್ರಮಿಸಿದ್ದಾರೆ. ಚುನಾವಣೆಯ ಸೋಲು ಗೆಲುವಿಗೆ ಅದರದ್ದೇ ಆದ ಕಾರಣಗಳಿರುತ್ತವೆ. ಒಂದು ಸಮುದಾಯದ ಮತಗಳನ್ನು ಕಾಂಗ್ರೆಸ್ ಕ್ರೋಢೀಕರಿಸಿದೆ ಎಂದರು.
ಈ ಚುನಾವಣೆಯ ಗೆಲುವು ಸೋಲು ನನ್ನ ರಾಜಕಾರಣ ನಿರ್ಧರಿಸಲ್ಲ. ಚುನಾವಣೆ ತೀರ್ಪು ನೀಡುವ ಶಕ್ತಿ ಇರೋದು ಜನರಿಗೆ ಮಾತ್ರ. ಅವರ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇವೆ. ಧೃತಿಗೆಡಲ್ಲ ಪಕ್ಷ ಕಟ್ಟಿದ್ದೇ ಹೋರಾಟ ಮಾಡಲು. ನಾವು ಯಾರ ವಿರುದ್ದವೂ ಭಾವನೆಗಳನ್ನು ಹೊರ ಹಾಕಲ್ಲ. ಚನ್ನಪಟ್ಟಣದ ನಮ್ಮ ಮತಗಳು ನಮ್ಮನ್ನು ಕೈ ಬಿಟ್ಟಿಲ್ಲ. ಯುವ ಸಮುದಾಯಗಳಿಗೆ ಧ್ವನಿಗೊಡಿಸುವ ಕೆಲಸ ಮಾಡ್ತೇನೆ. ಈ ಸೋಲನ್ನು ನಾನೇ ಸ್ವೀಕಾರ ಮಾಡುತ್ತೇನೆ. ನನ್ನ ಜೊತೆಗಿದ್ದು ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಇದು ನನಗೆ ಮೂರನೇ ಸೋಲು. ಸೋತಿದ್ದೇನೆ ಎಂದು ಮನೆಯಲ್ಲಿ ಕೂರುವುದಿಲ್ಲ. ಪಕ್ಷ ಇದ್ರೆ ನಿಖಿಲ್ ಕುಮಾರಸ್ವಾಮಿ, ನಿಖಿಲ್ನಿಂದ ಪಕ್ಷ ಅಲ್ಲ. ಮತ್ತೆ ಪಕ್ಷ ಕಟ್ಟುತ್ತೇವೆ ಎಂದರು.