ಸುಲ್ತಾನ್ಪುರ: 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಾಖಲಾದ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ ಮಾರ್ಚ್ 6ಕ್ಕೆ ಮುಂದೂಡಿದೆ.
ಫೆಬ್ರುವರಿ 11 ರಂದು ದೂರುದಾರರನ್ನು ಪಾಟೀಸವಾಲು ಮಾಡಲಾಯಿತು ಎಂದು ರಾಹುಲ್ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಹೇಳಿದ್ದಾರೆ. ಪಾಟಿ ಸವಾಲಿನ ಬಳಿಕ ಸೋಮವಾರ (ಫೆ.24) ರಂದು ವಿಚಾರಣೆ ನಿಗದಿಯಾಗಿತ್ತು. ಆದರೆ ದೂರುದಾರರ ಪರ ವಕೀಲ ಸಂತೋಷ್ ಕುಮಾರ್ ಪಾಂಡೆ ನ್ಯಾಯಾಯಲಕ್ಕೆ ಗೈರಾಗಿದ್ದರಿಂದ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಲಾಗಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಆಕ್ಷೇಪಾರ್ಹ ಟೀಕೆ ಮಾಡಿದ್ದರು ಎಂದು ದೆಹಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗನುಮಗಿರಿ ನಿವಾಸಿ ಬಿಜೆಪಿ ನಾಯಕ ಮಿಶ್ರಾ ದೂರು ದಾಖಲಿಸಿದ್ದರು. ಕಳೆದ ಐದು ವರ್ಷದಲ್ಲಿ ಹಲವು ಬಾರಿ ವಿಚಾರಣೆ ನಡೆದರೂ, ರಾಹುಲ್ ಗಾಂಧಿ ಕೋರ್ಟ್ಗೆ ಗೈರು ಹಾಜರಾಗಿದ್ದರು. ಕೊನೆಗೆ 2023ರ ಡಿಸೆಂಬರ್ನಲ್ಲಿ ವಾರಂಟ್ ಜಾರಿ ಮಾಡಿದಾಗ ಕೋರ್ಟ್ಗೆ ಹಾಜರಾಗಿದ್ದರು. 2025ರ ಫೆಬ್ರುವರಿಯಲ್ಲಿ ಪ್ರಕರಣ ಸಂಬಂಧ ರೂ. 25 ಸಾವಿರ ಎರಡು ಭದ್ರತೆ ನೀಡಿ ಜಾಮೀನು ಪಡೆದುಕೊಂಡಿದ್ದರು. ಹಲವು ಬಾರಿ ವಿಚಾರಣೆ ಮುಂದೂಡಿದ ಬಳಿಕ, 2024ರ ಜುಲೈ 26ರಂದು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತ್ತು. ತಾವು ನಿರಪರಾಧಿ ಎಂದು ರಾಹುಲ್ ಗಾಂಧಿ ಕೋರ್ಟ್ ಮುಂದೆ ಹೇಳಿಕೊಂಡಿದ್ದು, ಈ ಪ್ರಕರಣ ತಮ್ಮ ವಿರುದ್ಧದ ರಾಜಕೀಯ ಪಿತೂರಿಯ ಭಾಗವಾಗಿದೆ ಎಂದಿದ್ದರು. ಅದಾಗ್ಯೂ ಸಾಕ್ಷ್ಯಗಳನ್ನು ಒದಗಿಸಿ ಎಂದು ದೂರುದಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ.