ಡಿಸಿಎಂ ಶಿವಕುಮಾರ್ ಗೆ ತಪ್ಪದ ಸಂಕಷ್ಟ; ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ಸಿಬಿಐ; ಯಾವುದು ಈ ಪ್ರಕರಣ?

Most read

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಂಕಷ್ಟ ತಪ್ಪಿದ ಹಾಗೆ ಕಾಣುತ್ತಿಲ್ಲ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಈ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಬಿಐ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

ರಾಜ್ಯ ಸರ್ಕಾರ ಸಿಬಿಐ ನಿಂದ ಪ್ರಕರಣವನ್ನು ಹಿಂಪಡೆದ ಕ್ರಮವನ್ನು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಿಬಿಐ ಹೈ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಗಳನ್ನು ಆಗಸ್ಟ್ 29 ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಪ್ರಕರಣವನ್ನು ಸುಪ್ರೀಂಕೋರ್ಟ್‌ ತೀರ್ಮಾನಿಸಲಿ ಎಂದು ಅಭಿಪ್ರಾಯಪಟ್ಟಿತ್ತು.

ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಯತ್ನಾಳ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಯತ್ನಾಳ್ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಅಭಿಪ್ರಾಯ ಕೇಳಿತ್ತು. ಹೀಗಾಗಿ ಸಿಬಿಐ ಕೂಡಾ ಈಗ ಅರ್ಜಿ ಸಲ್ಲಿಸಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿವಾದ ಮಂಡಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರ ಮತ್ತು ಲೋಕಾಯುಕ್ತಕ್ಕೆ ನೋಟಿಸ್ ಜಾರಿ ಮಾಡಿ, ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದೆ.

ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಈ ಹಿಂದಿನ ಬಿಜೆಪಿ ಸರ್ಕಾರ 2019ರಲ್ಲಿ ನೀಡಿತ್ತು. ಈ ಅನುಮತಿಯನ್ನು ಕಾಂಗ್ರೆಸ್ ಸರ್ಕಾರ 2023ರ ನವಂಬರ್ 23ರಂದು ಹಿಂಪಡೆದಿತ್ತು. ನಂತರ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. 2013 ಮತ್ತು 2018ರ ಅವಧಿಯಲ್ಲಿ ಶಿವಕುಮಾರ್ ಅವರು ಆದಾಯ ಮೀರಿ 74 ಕೋಟಿ ರೂಪಾಯಿ ಆದಾಯ ಗಳಿಸಿರುವ ಆರೋಪ ಇದಾಗಿದೆ. ಈ ಅವಧಿಯಲ್ಲಿ ಅವರು ಸಚಿವರಾಗಿದ್ದರು. 2017 ರಲ್ಲಿ ಆದಾಯ ತೆರಿಗೆ ಇಲಾಖೆ ಡಿಕೆಶಿ ಅವರಿಗೆ ಸಂಬಂಧಿಸಿದ 70ಸ್ಥಳಗಳಲ್ಲಿ ಶೋಧ ನಡಸಿತ್ತು. ತದನಂತರ 2020ರಲ್ಲಿ ಸಿಬಿಐ ಎಫ್ ಐ ಆರ್ ದಾಖಲಿಸಿ ತನಿಖೆ ಆರಂಭಿಸಿತ್ತು. ಆಗಿನಿಂದಲೂ ಕಾನೂನು ಸಮರ ನಡೆಯುತ್ತಾ ಬಂದಿದೆ. ಆಗ ಸಿಬಿಐ ಎಫ್ ಐ ಆರ್ ದಾಖಲಿಸಿ ತನಿಖೆ ಆರಂಭಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್ ಅವರು, ಇಡೀ ದೇಶದಲ್ಲಿ ಸಿಬಿಐ ತನಿಖೆ ನಡೆಸುತ್ತಿರುವ ಏಕೈಕ ರಾಜಕಾರಣಿ ಅಂದರೆ ನಾನೊಬ್ಬ ಮಾತ್ರ. ಅಷ್ಟರ ಮಟ್ಟಿಗೆ ಸಿಬಿಐಗೆ ನನ್ನ ಮೇಲೆ ಪ್ರೀತಿ ಇದೆ ಎಂದಿದ್ದಾರೆ. ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಕರಣವನ್ನು ಹಿಂಪಡೆಯುವ ಅಧಿಕಾರವಿದೆ. ಅದರಂತೆ ಈ ಪ್ರಕರಣವನ್ನು ಹಿಂಪಡೆದು ಲೋಕಾಯುಕ್ತ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.

More articles

Latest article