ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಂಜೆ 6.30ರೊಳಗೆ ಜಾಮೀನು ಪ್ರತಿ ಸಿಕ್ಕರೆ ಇಂದೇ ಜೈಲಿನಿಂದ ದರ್ಶನ್ ಬಿಡುಗಡೆ

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A -2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್ ಅವರಿಗೆ ಕೊನೆಗೂ ಹೈ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಬಳ್ಳಾರಿ ಜೈಲಿನಲ್ಲಿರುವ ಅವರಿಗೆ ಚಿಕಿತ್ಸೆಗಾಗಿ ಮಾತ್ರ 6 ವಾರಗಳ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರಾಗಿದೆ.

ಜಾಮೀನು ಪ್ರತಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸಂಜೆ 6.30ರೊಳಗೆ ತಲುಪಿದರೆ ದರ್ಶನ್ ಅವರನ್ನು ಇವತ್ತೇ ಬಿಡುಗಡೆ ಮಾಡುವುದಾಗಿ ಜೈಲು ಅಧೀಕ್ಷಕಿ ಲತಾ ತಿಳಿಸಿದ್ದಾರೆ. ಸಂಜೆ 6.30ರೊಳಗೆ ಬಂಧೀಖಾನೆಯನ್ನು ಬಂದ್ ಮಾಡುತ್ತೇವೆ. ಆ ಸಮಯದೊಳಗೆ ಜಾಮೀನು ಪ್ರತಿ ಸಿಕ್ಕರೆ ಬಿಡುಗಡೆ ಮಾಡುತ್ತೇವೆ. ತಡವಾದರೆ ನಾಳೆ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಜಾಮೀನು ಪ್ರತಿ ನ್ಯಾಯಾಲಯದ ಅಧಿಕೃತ ಇ ಮೇಲ್ ಮೂಲಕ ತಲುಪಬೇಕು ಇಲ್ಲವೇ ಕುಟುಂಬದ ಸದಸ್ಯರು ತಲುಪಿಸಬೇಕಾಗುತ್ತದೆ. ಒಂದು ವೇಳೆ ಗುರುವಾರದಿಂದ ನಾಲ್ಕು ದಿನಗಳ ಸರಣಿ ರಜೆ ಇರುತ್ತದೆ. ಇದು ತಡಕಾಗುವುದಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ವಿಚಾರಣಾಧೀನ ಕೈದಿಗಳಿಗೆ ಸರ್ಕಾರಿ ರಜೆಗಳು ಅನ್ವಯವಾಗುವುದಿಲ್ಲ ಎಂದು ಉತ್ತರಿಸಿದ್ದಾರೆ.
ಅತ್ತ ಜಾಮೀನು ಸಿಕ್ಕ ವಿಷಯ ತಿಳಿಸಿದ ಜೈಲು ಸಿಬ್ಬಂದಿಗೆ ದರ್ಶನ್ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಅವರು ಆರಂಭದಲ್ಲಿ ಜಾಮೀನು ಸಿಕ್ಕಿದೆ ಎಂಬ ಮಾಹಿತಿಯನ್ನು ನಂಬಿರಲಿಲ್ಲ. ಹಿರಿಯ ಅಧಿಕಾರಿಗಳು ತಿಳಿಸದ ನಂತರವಷ್ಟೇ ಅವರಲ್ಲಿ ನಂಬಿಕೆ ಉಂಟಾಗಿತ್ತು.


ಜೈಲಿನ ಬಳಿ ಅಭಿಮಾನಿಗಳ ಸಾಗರವೇ ಸೇರುತ್ತಿದ್ದು, ಜೈಲಿನ ಸುತ್ತಮುತ್ತ ಬಿಗಿ ಭದ್ರೆತೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರು ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದ ಆರೋಪ ಕೇಳಿ ಬಂದ ನಂತರ ದರ್ಶನ್ ಅವರನ್ನು ಆಗಸ್ಟ್ 29 ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.


ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಕಾಮಾಕ್ಯ ದೇವಾಲಯದ ಪೋಟೋ ಹಾಕಿ ಪೋಸ್ಟ್ ಮಾಡಿರುವುದು ಕುತೂಹಲ ಮೂಡಿಸಿದೆ. ದೇವಿ ಆಶೀರ್ವಾದದಿಂದ ಲೇ ಜಾಮೀನು ಸಿಕ್ಕಿದೆ ಎನ್ನವುದು ಅವರ ಭಾವನೆಯಾಗಿದೆ.


ಮೈಸೂರಿನಲ್ಲಿ ಉಳಿದುಕೊಳ್ಳಲು ಐಷಾರಾಮಿ ಮನೆಯೊಂದನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಾಡಿಗೆಗೆ ಪಡೆದಿದ್ದಾರೆ. ದರ್ಶನ್ ಅವರ ಜತೆ ನಟ ಧನ್ವೀರ್ ಮೈಸೂರಿಗೆ ಪ್ರಯಾಣಿಸಲಿದ್ದಾರೆ. ಧನ್ವೀರ್ ಕಳೆದ 1 ತಿಂಗಳಿನಿಂದ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.


ದರ್ಶನ್ ಗೆ ಜಾಮೀನು ಸಿಕ್ಕಿರುವುದು ಇತರ ಆರೋಪಿಗಳಿಗೂ ಕೊಂಚ ನೆಮ್ಮದಿ ನೀಡಿದೆ. ಆರೋಪಿ ನಂ- 2 ಆಗಿರುವ ದರ್ಶನ್ ಗೆ ಜಾಮೀನು ಸಿಕ್ಕಿರುವಾಗ ತಮಗೂ ಜಾಮೀನು ಸಿಗಲಿದೆ ಎಂಬ ಕೋಲ್ಮಿಂಚು ಅವರಲ್ಲಿ ಮೂಡಿದೆ. ಇನ್ನು ಈ ಪ್ರಕರಣದಲ್ಲಿ ಎ-1 ಆಗಿರುವ ದರ್ಶನ್ ಗೆಳತಿ ಪವಿತ್ರಾಗೌಡ ಅವರಿಗೆ ಜಾಮೀನು ಸಿಗಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

More articles

Latest article