ದರ್ಶನ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಅಣ್ಣ-ಅತ್ತಿಗೆಯ ಸ್ಪೆಷಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾ ಇದ್ದಾರೆ. ದುಬೈನಲ್ಲಿ ನಟ ದರ್ಶನ್ ತನ್ನ ಪತ್ನಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅಲ್ಲಿನ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅದರಲ್ಲಿ ಭಾಗಿಯಾಗಿದ್ದಾರೆ.
21 ವರ್ಷಗಳ ಹಿಂದೆ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಇಬ್ಬರ ಮದುವೆ ನಡೆದಿತ್ತು. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೊರಳಿಗೆ ನಟ ದರ್ಶನ್ ಮಾಂಗಲ್ಯಧಾರಣೆ ಮಾಡಿದ್ದರು. ಆಗ ತಾನೇ ಸಿನಿಮಾದಲ್ಲಿ ಯಶಸ್ಸು ಸಿಗುವುದಕ್ಕೆ ಶುರುವಾಗಿತ್ತು. ಯಶಸ್ಸಿನ ಅಲೆಯಲ್ಲಿರುವಾಗಲೇ ದರ್ಶನ್, ವಿಜಯಲಕ್ಷ್ಮೀ ಅವರ ಕೈ ಹಿಡಿದರು. ಲಂಕೇಶ್ ಪತ್ರಿಕೆ ಸಿನಿಮಾ ಬಿಡುಗಡೆ ಬೆನ್ನಲ್ಲೇ ಮದುವೆಯಾಗಿದ್ದರು. ಸದ್ಯ 24 ವರ್ಷ ಇಬ್ಬರ ದಾಂಪತ್ಯಕ್ಕೆ.
ಇಬ್ಬರ ದಾಂಪತ್ಯದಲ್ಲಿ ಎಷ್ಟೇ ಬಿರುಕು ಮೂಡಿದರು, ಮಗನಿಗಾಗಿ ಇತ್ತಿಚಿನ ವರ್ಷಗಳಲ್ಲಿ ಗಂಡ-ಹೆಂಡತಿ ಚೆನ್ನಾಗಿದ್ದಾರೆ. ಎಲ್ಲಾ ಕಡೆಗೂ ದರ್ಶನ್ ತನ್ನ ಪತ್ನಿ ಜೊತೆಗೆ ಭೇಟಿ ಕೊಡುತ್ತಾರೆ, ಕುಣಿತಾರೆ, ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಮದುವೆ ವಾರ್ಷಿಕೋತ್ಸವದ ಅಂಗವಾಗಿ ದುಬೈಗೂ ಜೊತೆಯಾಗಿ ಹೋಗಿದ್ದಾರೆ.
ದುಬೈನ ರೆಸ್ಟೋರೆಂಟ್‌ವೊಂದರಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ನೆಚ್ಚಿನ ಜೋಡಿಗೆ ಶುಭ ಕೋರಿದ್ದಾರೆ. ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ದರ್ಶನ್ ಫ್ಯಾಮಿಲಿ ಸಮೇತ ದುಬೈಗೆ ಹೊರಟಿದ್ದ ವಿಡಿಯೋ ವೈರಲ್ ಆಗಿತ್ತು. ಸೆಲೆಬ್ರೇಷನ್ ವಿಡಿಯೋ ಮತ್ತು ಫೋಟೋಗಳನ್ನು ಅಭಿಮಾನಿಗಳು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.