ಅಭಿಮಾನಕ್ಕೂ ಇರಲಿ ಅಂಕುಶ; ಅತಿಯಾದರೆ ವಿನಾಶ

Most read

ಸಿನೆಮಾಗಳಲ್ಲಿ ಜನಪರ, ನ್ಯಾಯಪರ ಉದಾತ್ತ ಪಾತ್ರವಿದ್ದಲ್ಲಿ ಆ ಪಾತ್ರದ ಉತ್ತಮ ಆದರ್ಶಗಳನ್ನು ಮಾತ್ರ ಅನುಸರಿಸಬೇಕೇ ಹೊರತು ಆ ಪಾತ್ರ ಮಾಡಿದ ನಾಯಕನನ್ನು ಅತಿಯಾಗಿ ಆರಾಧಿಸುವುದು ಅಂಧಾಭಿಮಾನಕ್ಕೆ ದಾರಿಯಾಗುತ್ತದೆ. ಮೇರುನಟ ರಾಜಕುಮಾರರವರು ಅಭಿಮಾನಿಗಳನ್ನೇ ದೇವರೆಂದರು. ಅಭಿಮಾನಿಗಳು ಉತ್ತಮ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಅವರು ದೇವರಾಗಲು ಸಾಧ್ಯ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಅಭಿಮಾನ ಎನ್ನುವುದು ಅಂಧಾಭಿಮಾನವಾದಾಗ ಅತಿರೇಕಕ್ಕೆ ದಾರಿಯಾಗುತ್ತದೆ. ಕ್ರಿಕೆಟ್ ಆಟವನ್ನು ಆನಂದಿಸಬೇಕೇ ಹೊರತು ಆಟಗಾರರನ್ನು ತಲೆಯ ಮೇಲೆ ಮತ್ತು ಒಳಗೆ ಹೊತ್ತು ಮೆರೆಸಬಾರದು. ಸಿನೆಮಾ ಹಾಗೂ ಅಲ್ಲಿಯ ಪಾತ್ರಗಳನ್ನು ನೋಡಿ ಅನುಭವಿಸಬೇಕೇ ಪರಂತು  ನಟರನ್ನು ಆರಾಧಿಸಬಾರದು. ಅದೇ ರೀತಿ ರಾಜಕಾರಣಿಗಳು ಒಳಿತು ಮಾಡಿದರೆ ಬೆಂಬಲಿಸಬೇಕೇ ಹೊರತು ಹಿಂಬಾಲಕರಾಗಬಾರದು.

ಆದರೆ ಈ ಅಭಿಮಾನ ಎನ್ನುವುದು ಮೆಚ್ಚುಗೆಯ ಗಡಿಯನ್ನು ದಾಟಿ ಮೈಮರೆಯುವ ಹಂತಕ್ಕೆ ಹೋದರೆ ಮಾನಸಿಕ ಗುಲಾಮತನ ಆವರಿಸಿಕೊಳ್ಳುತ್ತದೆ. ಆ ನಂತರ ಮನಮೆಚ್ಚಿದ ನಾಯಕ ಆಡಿದ್ದು, ಮಾಡಿದ್ದೆಲ್ಲವೂ ಒಪ್ಪಿತವಾಗಿ ಮೆಚ್ಚುಗೆಯು ಹುಚ್ಚಾಗಿ ಬದಲಾಗುವ ಅಪಾಯಕ್ಕೆ ಅನೇಕಾನೇಕ ಉದಾಹರಣೆಗಳಿವೆ.

ಜಯಲಲಿತಾರಂತಹ ನಾಯಕಿ ಸತ್ತಾಗ ಮನನೊಂದು ಅನೇಕರು ಆತ್ಮಹತ್ಯೆ ಮಾಡಿಕೊಂಡರು. ವರನಟ ರಾಜಕುಮಾರ್ ತೀರಿಕೊಂಡಾಗ ಆಕ್ರೋಶಗೊಂಡು ಗಲಭೆಯನ್ನೇ ಸೃಷ್ಟಿಸಿದರು. ಬೆಂಬಲಿಸಿದ ಕ್ರಿಕೆಟ್ ತಂಡ ಸೋತಾಗ, ಕ್ರಿಕೆಟರ್ ಔಟಾದಾಗ ಟಿವಿಯನ್ನೇ ಒಡೆದು ಹಾಕಿದವರು, ಬೀದಿಯಲ್ಲಿ ಬೆಂಕಿ ಹಾಕಿ ಟೈರ್ ಸುಟ್ಟವರು ಅನೇಕರಿದ್ದಾರೆ. ಇಂತಹ ಅಂಧಾಭಿಮಾನದ ಅತಿರೇಕದ ಪರಿಣಾಮಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ.

ಈ ಸಿನೆಮಾ ಎನ್ನುವ ದೃಶ್ಯಮಾಧ್ಯಮ ಹುಟ್ಟುಹಾಕುವ ವಿಸ್ಮಯ ಮತ್ತು ವಿಸ್ಮೃತಿ ಹೇಳಲಸಾಧ್ಯವಾದದ್ದು. ಸಿನೆಮಾ ಎನ್ನುವುದು ವಾಸ್ತವದ ಭ್ರಮೆಯನ್ನು ಹುಟ್ಟಿಸುವ ಮಾಧ್ಯಮವೇ ಹೊರತು ಎಂದೂ ವಾಸ್ತವವಾಗಲು ಸಾಧ್ಯವಿಲ್ಲ. ಈ ಸತ್ಯದ ಅರಿವು ಇಲ್ಲದೆ  ಭ್ರಮೆಗೊಳಗಾಗಿ ನಾಯಕ ಪಾತ್ರವನ್ನು ಅನುಕರಿಸುವ, ಪಾತ್ರಧಾರಿಯನ್ನು ಅನುಸರಿಸಿ ಆರಾಧಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಭಿಮಾನಿ ಸಂಘಗಳನ್ನೂ ಹುಟ್ಟು ಹಾಕಿದ್ದಾರೆ.  ಈ ರೀತಿ ವಿವೇಚನೆಯನ್ನು ಮೀರಿದ ವ್ಯಕ್ತಿ ಆರಾಧನೆಯು ವಿವೇಕವನ್ನು  ನಾಶಪಡಿಸುತ್ತದೆ. ಮಾನಸಿಕ ಗುಲಾಮಗಿರಿಯನ್ನು ಪ್ರಚೋದಿಸುತ್ತದೆ.

ಊರು ಕೇರಿಗಳಲ್ಲಿ ಜನಪ್ರಿಯ ನಾಯಕ ನಟರ ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಒಂದು ಗುಂಪು ಒಬ್ಬ ಪ್ರಸಿದ್ಧ ನಟನ ಅಭಿಮಾನಿ ಸಂಘ ಸ್ಥಾಪಿಸಿದರೆ, ಅದಕ್ಕೆ ಪ್ರತಿಸ್ಪರ್ಧಿಯಾಗಿ ಇನ್ನೊಂದು ಯುವಕರ ಗುಂಪು ಮತ್ತೊಬ್ಬ ಜನಪ್ರಿ ಯ ನಟನ ಅಭಿಮಾನಿ ಸಂಘವನ್ನು ಆರಂಭಿಸುತ್ತದೆ. ಹಲವಾರು ಸಲ ಈ ಅಭಿಮಾನಿ ಸಂಘದ ಗುಂಪುಗಳೇ ವ್ಯಕ್ತಿ ವೈಭವೀಕರಣದ ಅತಿರೇಕಕ್ಕೆ ಒಳಗಾಗಿ ಪರಸ್ಪರ ಹೊಡೆದಾಡಿಕೊಂಡ ಉದಾಹರಣೆಗಳಿವೆ. 

ಸಿನೆಮಾಗಳಲ್ಲಿ ಜನಪರ, ನ್ಯಾಯಪರ ಉದಾತ್ತ ಪಾತ್ರವಿದ್ದಲ್ಲಿ ಆ ಪಾತ್ರದ ಉತ್ತಮ ಆದರ್ಶಗಳನ್ನು ಮಾತ್ರ ಅನುಸರಿಸಬೇಕೇ ಹೊರತು ಆ ಪಾತ್ರ ಮಾಡಿದ ನಾಯಕನನ್ನು ಅತಿಯಾಗಿ ಆರಾಧಿಸುವುದು ಅಂಧಾಭಿಮಾನಕ್ಕೆ ದಾರಿಯಾಗುತ್ತದೆ. ಮೇರುನಟ ರಾಜಕುಮಾರರವರು ಅಭಿಮಾನಿಗಳನ್ನೇ ದೇವರೆಂದರು. ಅಭಿಮಾನಿಗಳು ಉತ್ತಮ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಅವರು ದೇವರಾಗಲು ಸಾಧ್ಯ. ಮೆಚ್ಚಿನ ನಟ ಏನೇ ಕೆಟ್ಟ ಕೆಲಸ ಮಾಡಿದರೂ ಅದನ್ನು ಪ್ರಶ್ನಿಸದೇ ಆತನನ್ನು ಸಮರ್ಥಿಸಿ ಕೊಳ್ಳುವವರು ಅಭಿಮಾನಿ ದೇವರಾಗಲು ಸಾಧ್ಯವೇ ಇಲ್ಲ. 

ಸಿನೆಮಾದಲ್ಲಿರುವ ಕಥೆ ಹಾಗೂ ಕಥಾನಾಯಕನೇ ಬೇರೆ, ಪಾತ್ರಧಾರಿಯಾದ ನಾಯಕ ನಟನ ವಾಸ್ತವದ ಬದುಕೇ ಬೇರೆ. ಸಿನೆಮಾದಲ್ಲಿ ಖಳನಾಯಕನಾಗಿ ವಿಜೃಂಭಿಸಿದ ನಟ ನಿಜ ಬದುಕಿನಲ್ಲಿ ಉತ್ತಮ ನಡತೆಯ ವ್ಯಕ್ತಿಯಾಗಿರಬಹುದು. ಅದೇ ರೀತಿ ಸಿನೆಮಾಗಳಲ್ಲಿ ಆದರ್ಶಮಯ ಪಾತ್ರಗಳನ್ನು ಮಾಡುವ ನಟ ವಾಸ್ತವದಲ್ಲಿ ಅದಕ್ಕೆ ಭಿನ್ನವಾದ ವ್ಯಕ್ತಿತ್ವವನ್ನೂ ಹೊಂದಿರಬಹುದು. ಇದಕ್ಕೆ ಇತ್ತೀಚಿನ ಉದಾಹರಣೆ ಜನಪ್ರಿಯ ನಟ ದರ್ಶನ್.

ರಸ್ತೆಯ ಮೇಲೆ ಕಾರು ಚಲಿಸುತ್ತಿರುವಾಗಲೇ ತನ್ನದೇ ಹೆಂಡತಿಯ ಮೇಲೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನಿಸಿದ ದರ್ಶನ್ ಎನ್ನುವ ನಟನನ್ನು  ‘”ಅವನ ಹೆಂಡತಿಯನ್ನು ಅವನು ಹೊಡೆದದ್ದರಲ್ಲಿ ತಪ್ಪೇನಿದೆ” ಎಂದು ಆತನ ಅಭಿಮಾನಿಗಳು ಸಮರ್ಥಿಸಿಕೊಂಡ ರೀತಿ ಅತಿರೇಕವಾಗಿತ್ತು. ಮಹಿಳಾ ಅಭಿಮಾನಿಗಳು ಗುಂಪು ಕಟ್ಟಿಕೊಂಡು ಹೋಗಿ ಪೊಲೀಸ್ ಸ್ಟೇಶನ್ನಿಗೆ ಮುತ್ತಿಗೆ ಹಾಕಿ ಬಿಡುಗಡೆಗೆ ಒತ್ತಾಯಿಸಿದ್ದೂ ಸಹ ಅಂಧಾಭಿಮಾನದ ಪ್ರತೀಕವಾಗಿತ್ತು. ಅದೇ ಕೇಸಲ್ಲಿ 28 ದಿನ ಜೈಲಲ್ಲಿದ್ದು ಬಂದರೂ ಪಾಠ ಕಲಿಯದ ಅದೇ ದರ್ಶನ್ ಈಗ ತನ್ನ ಗೆಳತಿಗೆ ಯಾರೋ ಅಪರಿಚಿತ ಅಶ್ಲೀಲ ಸಂದೇಶ ಕಳುಹಿಸಿದ್ದನ್ನೇ ನೆಪವಾಗಿರಿಸಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಅಮಾನುಷವಾಗಿ ಹಲ್ಲೆ ಮಾಡಿ ಸಾಯಿಸಿ ಬಂಧನಕ್ಕೊಳಗಾಗಿದ್ದು ಅಕ್ಷಮ್ಯ. ಈ ದುಷ್ಕೃತ್ಯಕ್ಕೆ ಜೊತೆಯಾದವರೂ ಸಹ ದರ್ಶನ್ ಆಪ್ತರು, ಆತನ ಅಭಿಮಾನಿ ಸಂಘದ ನಾಯಕರು. ನಾಯಕ ನಟನ ದುಷ್ಕೃತ್ಯಗಳಲ್ಲಿ ಭಾಗಿಯಾಗುವ, ನಟನ ಕಾನೂನು ವಿರೋಧಿ ಕೃತ್ಯಗಳನ್ನು ಬೆಂಬಲಿಸಿ ಸಮರ್ಥಿಸಿಕೊಳ್ಳುವವರು ಎಂದಾದರೂ ಅಭಿಮಾನಿ ದೇವರುಗಳಾಗಲು ಸಾಧ್ಯವಿದೆಯಾ?

ಈಗ ದರ್ಶನ್ ಪ್ರಕರಣದಿಂದಾದರೂ ಎಲ್ಲಾ ರೀತಿಯ ಅತಿರೇಕಿ ಅಂಧಾಭಿಮಾನಿಗಳು ಪಾಠ ಕಲಿತು ಎಚ್ಚರಗೊಳ್ಳಬೇಕಿದೆ. ತಮ್ಮ ಸ್ವಂತ ಬದುಕನ್ನು ಬದಿಗಿಟ್ಟು ಅಭಿಮಾನದ ಹೆಸರಲ್ಲಿ ವ್ಯಕ್ತಿ ವೈಭವೀಕರಣಕ್ಕೆ ಇಳಿಯುವವರು ಯೋಚಿಸಬೇಕಿದೆ. ಅಭಿಮಾನ ಎನ್ನುವುದು ಸಿನೆಮಾದ ಪಾತ್ರ ಹಾಗೂ ಪಾತ್ರಧಾರಿಯ ಪ್ರತಿಭೆಗಷ್ಟೇ ಸೀಮಿತವಾಗಿರಬೇಕು. ಅದರಾಚೆ ವ್ಯಕ್ತಿಪೂಜೆಗಿಳಿದು ಆರಾಧನೆ ಆರಂಭಿಸಿದರೆ ಅಭಿಮಾನಿಗಳ ಬದುಕಿನ ಸಮಯ ವ್ಯರ್ಥವಾಗುತ್ತದೆ. ದರ್ಶನ್ ನಂತಹ ದುರಹಂಕಾರಿ ಸೈಕೋಪಾತ್ ನಟನನ್ನು ಬೆಂಬಲಿಸಿ ಆರಾಧಿಸಿದ ಬಗ್ಗೆ ಅಭಿಮಾನಿಗಳಿಗೆ ಇಂದಲ್ಲಾ ನಾಳೆ ಜಿಗುಪ್ಸೆಯೂ ಮೂಡಬಹುದಾಗಿದೆ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article