ಮೈಸೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸದ್ಯ ಜಾಮೀನು ಪಡೆದುಕೊಂಡು ಹೊರಬಂದಿರುವ ನಟ ದರ್ಶನ್ ಇಂದಿನಿಂದ ಮೈಸೂರಿನಲ್ಲಿ ದಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಇಂದಿನಿಂದ ನಾಲ್ಕು ದಿನಗಳ ಕಾಲ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ. ದಿ ಡೆವಿಲ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರೇಣುಕಾಸ್ವಾಮಿ ಹತ್ಯೆ ಸಂಬಂಧ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು.
ಮೈಸೂರಿನಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು. ಮತ್ತೆ ಮೈಸೂರಿನಲ್ಲೇ ಶೂಟಿಂಗ್ ಗೆ ಚಾಲನೆ ನೀಡಲಾಗಿದೆ. ಮಾರ್ಚ್ 12ರಿಂದ 15ರವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮೈಸೂರಿನ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ, ದಿ ಡೆವಿಲ್ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶೂಟಿಂಗ್ ನಡೆಸಲಿದೆ. ಮಾರ್ಚ್ 15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.
ಮೈಸೂರಿನ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಚಲನಚಿತ್ರದ ಶೂಟಿಂಗ್ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು 1,64,785 ರೂ.ಗಳನ್ನು ‘ದಿ ಡೆವಿಲ್’ ಚಿತ್ರತಂಡ ಈಗಾಗಲೇ ಪಾವತಿಸಿದೆ.
10 ತಿಂಗಳ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಮೈಸೂರಿನಲ್ಲಿ ನಟ ದರ್ಶನ್ ಬಂಧನವಾಗಿತ್ತು. ಸುದೀರ್ಘ ಸಮಯದ ಬಳಿಕ ನಟ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಭದ್ರತೆಗಾಗಿ ಮೈಸೂರಿನ ಸರ್ಕಾರಿ ಅತಿಥಿಗೃಹದ ಬಳಿ ಬೌನ್ಸರ್ಗಳನ್ನು ನಿಯೋಜಿಸಲಾಗಿದೆ. ದರ್ಶನ್ ರೇಂಜ್ ರೋವರ್ ಕಾರಿನಲ್ಲಿ ಮೈಸೂರಿನ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ್ದಾರೆ.