ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್ ಚಿಕಿತ್ಸೆಗಾಗಿ ಇಂದು ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಬೆನ್ನು ಹುರಿ ಸಮಸ್ಯೆ ಇರುವುದಕ್ಕಾಗಿಯೇ ಅವರಿಗೆ ಹೈ ಕೋರ್ಟ್ 6 ವಾರಗಳ ಅವಧಿಗೆ ಜಾಮೀನು ಮಂಜೂರು ಮಾಡಿತ್ತು. ಇವರಿಗೆ ಬಳ್ಳಾರಿ ಜೈಲಿನಲ್ಲಿ ಬೆಳಗ್ಗೆ ಮತ್ತು ಸಂಜೆ ಫಿಜಿಯೋಥೆರಪಿ ನೀಡಲಾಗುತ್ತಿತ್ತು. ಆದರೆ ಇವರ ಸಮಸ್ಯೆ ಕಡಿಮೆಯಾಗಿಲ್ಲ. ಇದೀಗ ಅವರಿಗೆ ಆಲ್ಟ್ರಾಸೌಂಡ್ ಮತ್ತು ಐಎಫ್ಡಿ ಥೆರಪಿಯನ್ನು ನೀಡಬೇಕಾಗಿ ಬರಬಹುದು. ಸ್ಟ್ರೆಚ್ಚಿಂಗ್ ವ್ಯಾಯಾಮ ಮಾಡಿಸಬೇಕಾಗುತ್ತದೆ.ಒಂದು ವೇಳೆ ಈ ಚಿಕಿತ್ಸೆಗೆ ಗುಣಮುಖರಾಗದಿದ್ದರೆ ಶಸ್ತ್ರ ಚಿಕಿತ್ಸೆ ನೀಡಬೇಕಾಗುತ್ತದೆ. ನಂತರ ದರ್ಶನ್ ಗೆ ಎಷ್ಟು ದಿನ ವಿಶ್ರಾಂತಿ ಬೇಕು ಎನ್ನುವುದನ್ನು ನಿರ್ಧರಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ 45 ವರ್ಷ ದಾಟಿದವರಿಗೆ ಮೂರು ರೀತಿಯ ಬೆನ್ನು ನೋವು ಇರುತ್ತದೆ. ಡಿಸ್ಕ್, ಲಿಸ್ತಾನಿಸಿಸ್ ಮತ್ತು ಸ್ಟಿನೋಸಿಸ್. ಎಂಬಮೂರು ರೀತಿಯ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಡಿಸ್ಕ್ ಅಂದರೆ ಬೆನ್ನು ಮೂಳೆಯಲ್ಲಿನ ಒತ್ತಡದಿಂದ ಬರುವಂತಹ ನೋವು. ಸ್ಟಿನೋಸಿಸ್ ಅಂದರೆ ಬೆನ್ನು ಮೂಳೆಯಲ್ಲಿ ನೀರಿನ ಅಂಶ ಕಡಿಮೆಯಾಗಿ ಮೂಳೆ ಜರುಗಿ ಬರುವ ನೋವು. ಲಿಸ್ಟನಿಸಿಸ್ ಅಂದರೆ ಬೆನ್ನು ಬಾಗುವುದು, ಅಂದರೆ ಒಂದು ಮೂಳೆ ಮತ್ತೊಂದು ಮೂಳೆ ಮೇಲೆ ಜರುಗುವುದು. ಇದರಿಂದಲೂ ನರದ ಮೇಲೆ ಒತ್ತಡ ಉಂಟಾಗಿ ನೋವು ಬರಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ.
ದರ್ಶನ್ ಅವರಿಗೆ ಯಾವ ರೀತಿಯ ಬೆನ್ನು ನೋವು ಇದೆ ಎಂದು ತಿಳಿದು ಬಂದಿಲ್ಲ. ವಿವಿಧ ಪರೀಕ್ಷೆಗಳನ್ನು ನಡೆಸಿ ಯಾವ ರೀತಿಯ ಚಿಕಿತ್ಸೆ ಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ. ಒಮ್ಮೆ ಚಿಕಿತ್ಸೆ ನೀಡಿದ ನಂತರ 6 ವಾರಗಳ ವಿಶ್ರಾಂತಿ ಬೇಕಾಗಿರುತ್ತದೆ. ಅನಿವಾರ್ಯವಾದಲ್ಲಿ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ದರ್ಶನ್ ಯಾವ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ತಿಳಿದು ಬಂದಿಲ್ಲ. ಕುಟುಂಬದ ಸದಸ್ಯರು ಮತ್ತು ವೈದ್ಯರೊಂದಗೆ ಚರ್ಚಿಸಿ ನಿರ್ಧಾರ ಮಾಡಲಿದ್ದಾರೆ. ಚಿಕಿತ್ಸೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುತ್ತದೆ.