ದಲಿತ ಸಮುದಾಯಕ್ಕೆ ಸೇರಿದ 17 ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬಿಆರ್ ಅಂಬೇಡ್ಕರ್ ಜೊತೆಗೆ ರಾಮನ ಫೋಟೋವನ್ನು ಹಂಚಿಕೊಂಡಿದಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂದು ದಿ ಹಿಂದೂ ವರದಿ ಮಾಡಿದೆ .
ವಾಟ್ಸ್ ಆಪ್ ಸ್ಟೇಟಸ್ ಹಾಕಿದ ವಿದ್ಯಾರ್ಥಿಯು ಅಂಬೇಡ್ಕರ್ ಅಭಿಮಾನಿಯಾಗಿದ್ದು, ಆತ ಅಂಬೇಡ್ಕರ್ ಅವರ ಜೊತೆ ರಾಮನ ಪೋಟೊ ಕೂಡ ಶೇರ್ ಮಾಡಿಕೊಂಡಿದ್ದಾನೆ. ಆದರೆ ರಾಮನನ್ನು ಅಂಬೇಡ್ಕರ್ ಜೊತೆ ಹೋಲಿಸಿ ರಾಮನನ್ನು ಕೀಳಾಗಿ ಕಾಣುತ್ತಿದ್ದೀಯ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆಯಾಗಿದೆ ಎಂದು ವರದಿಯಾಗಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ದಿನದಂದು ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿರುವ ಸ್ಥಳೀಯ ದೇವಸ್ಥಾನದಲ್ಲಿ ಸಂತ್ರಸ್ತೆಯನ್ನು ಬಲವಂತವಾಗಿ ಕರೆದೋಯ್ದು, ‘ಜೈ ಶ್ರೀ ರಾಮ್’ ಎಂದು ಹೇಳಿಸಲಾಗಿದೆ ಎಂದು ಆರೋಪಿಸಲಾಗಿದೆ.
“ನನಗೆ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ನನ್ನನ್ನು ಹನುಮಾನ್ ದೇವಸ್ಥಾನಕ್ಕೆ ಎಳೆದೊಯ್ದು ದೇವರಿಗೆ ಗೌರವ ಸಲ್ಲಿಸಲು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗಲು ಒತ್ತಾಯಿಸಿದರು. ನಾನು ಭಯದಿಂದ ಅವರು ಹೇಳಿದಂತೆ ಕೇಳಬೇಕಾಯ್ತು” ಎಂದು ಹಲ್ಲೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದವರು ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದವರಾಗಿದ್ದು, ಹುಮನಾಬಾದ್ ಪೊಲೀಸರು ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 2015 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹುಮನಾಬಾದ್ ಪಟ್ಟಣದ ನಿವಾಸಿಗಳಾದ ಅಭಿಷೇಕ್, ರೆತೇಶ್ ರೆಡ್ಡಿ, ಸುನೀಲ್ ರೆಡ್ಡಿ ಮತ್ತು ಅಭಿಷೇಕ್ ತೆಲಂಗಾ ಎಂಬ ನಾಲ್ವರು ಆರೋಪಿಗಳನ್ನು ಅದೇ ದಿನ ಬಂಧಿಸಲಾಗಿದೆ.