ದಲಿತ ಪೊಲೀಸ್‌ ಪೇದೆ ವಿವಾಹ ಮೆರವಣಿಗೆ ಮೇಲೆ ಠಾಕೂರ್‌ ಸಮುದಾಯ ದಾಳಿ

Most read

ಬುಲಂದ್‌ ಶಹರ್ : ದಲಿತ ಪೊಲೀಸ್‌ ಪೇದೆಯೊಬ್ಬರ ವಿವಾಹದ ಮೆರವಣಿಗೆಯ ಮೇಲೆ ಪ್ರಬಲ ಜಾತಿ ವ್ಯಕ್ತಿಗಳು ದಾಳಿ ನಡೆಸಿ, ಡಿಜೆ ಸಂಗೀತವನ್ನು ವಿರೋಧಿಸಿ ದಾಂಧಲೆ ನಡೆಸಿರುವ ಪ್ರಕರಣ ಉತ್ತರ ಪ್ರದೇಶದ ಬುಲಂದ್‌ ಶಹರ್‌ ಎಂಬಲ್ಲಿ ನಡೆದಿದೆ. ದಲಿತ ಜನರ ಮೇಲೆ ಕಲ್ಲು ತೂರಾಟ ನಡೆಸಿರುವ ಮೇಲ್ವರ್ಗ ಜಾತಿಗಳಿಗೆ ಸೇರಿದ ಜನರು ವರನನ್ನು ಕುದುರೆಯಿಂದ ಬಲವಂತವಾಗಿ ಕೆಳಗಿಳಿಸಿದ್ದಾರೆ.

ಮದುವೆಗೆ ಆಗಮಿಸಿದ್ದ ಹಲವಾರು ಅತಿಥಿಗಳ ಮೇಲೂ ದಾಳಿ ನಡೆಸಿ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿ, ಐವರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಪಿಎಸಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ವರ ರಾಬಿನ್ ಸಿಂಗ್ ಮತ್ತು ಲಖಾವತಿಯ ಮಹಿಳಾ ಕಾನ್‌ಸ್ಟೆಬಲ್ ಅವರ ವಿವಾಹ ನೆರವೇರಿತ್ತು. ಇವರ ಮದುವೆಯ ಮೆರವಣಿಗೆ ಹಾದು ಹೋಗುತ್ತಿದ್ದಾಗ ಠಾಕೂರ್ ಸಮುದಾಯದ 20-25 ಮಂದಿ ತಡೆದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಡಿಜೆ ಸಂಗೀತದೊಂದಿಗೆ ತಾವು ವಾಸಿಸುವ ಪ್ರದೇಶದಲ್ಲಿ ಮೆರವಣಿಗೆ(ಬರಾತ್) ಹಾದು ಹೋಗುವುದನ್ನು ಅವರು ಆಕ್ಷೇಪಿಸಿ, ನಮ್ಮ ಮೇಲೆ ಕಲ್ಲು ತೂರಿದ್ದಾರೆ. ಬಲವಂತವಾಗಿ ನನ್ನ ಮಗನನ್ನು ಕುದುರೆಯಿಂದ ಕೆಳಗಿಳಿಸಿ, ಡಿಜೆ ವಾಹನವನ್ನು ಧ್ವಂಸಗೊಳಿಸಿ ಅತಿಥಿಗಳನ್ನು ಗಾಯಗೊಳಿಸಿದ್ದಾರೆ ಎಂದು ವರನ ತಂದೆ ತಿಳಿಸಿದ್ದಾರೆ. ಕೆಲವರು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ, ದಲಿತ ಬಾರಾತ್ ತಮ್ಮ ಪ್ರದೇಶದಲ್ಲಿ ಹಾದು ಹೋಗಬಾರದು ಎಂದು ತಾಕೀತು ಮಾಡಿದರು. ಅವರು ಡಿಜೆ ಚಾಲಕನನ್ನು ಥಳಿಸಿ ಉಪಕರಣಗಳನ್ನು ನಾಶಪಡಿಸಿದರು ಎಂದು ವರ ಆರೋಪಿಸಿ ದೂರು ನೀಡಿದ್ದಾರೆ.

More articles

Latest article