ಫೆಬ್ರವರಿ 29 ರಿಂದ ಮಾರ್ಚ್ 7 ರವರೆಗೆ ನಡೆಯಲಿರುವ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ(ಬಿಫ್ಸ್)ದಲ್ಲಿ 180 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರೋದ್ಯಮ 90ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮತ್ತು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ಮಾಡಿದ 50ನೇ ವರ್ಷಾಚರಣೆಯ ಭಾಗವಾಗಿ ಕಾರ್ಯಕ್ರಮವನ್ನು ಭರ್ಜರಿಯಾಗಿ ಮಾಡಲಾಗುತ್ತಿದ್ದು, 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಖ್ಯಾತ ಬಹುಭಾಷ ನಟ ಡಾಲಿ ಧನಂಜಯ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರ ನಡವಳಿಯನ್ನು ಬಿಡುಗಡೆ ಮಾಡಿದೆ.
ನಡವಳಿಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಪ್ರತಿವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸುತ್ತಿದ್ದು, ಅದರಂತೆ ಪ್ರಸಕ್ತ 2023-24ನೇ ಸಾಲಿನಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಲು ಉದ್ದೇಶಿಸಿರುವ ಮೇರೆಗೆ ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಸರ್ಕಾರದ ಆದೇಶದಲ್ಲಿ ಈ ಸಂಬಂಧ ಸಂಘಟನಾ ಮತ್ತು ಕೋರ್ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದೆ.
ದಿನಾಂಕ:03/01/2024ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿನ ನಿರ್ಣಯದನ್ವಯ ಈ ಚಲನಚಿತ್ರೋತ್ಸವವನ್ನು 2024ರ ಫೆಬ್ರವರಿ 29 ರಿಂದ ಮಾರ್ಚ್ 07ರವರೆಗೆ ಏರ್ವಡಿಸಲಾಗಿದ್ದು, ಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನು ದಿ.29/02/2024 ರಂದು ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮುಂಭಾಗ ಹಾಗೂ ದಿ.07/03/2024ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಿದ್ದು, ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಡಾಲಿ ಧನಂಜಯ್ ಇವರನ್ನು ಚಿತ್ರೋತ್ಸವದ ರಾಯಭಾರಿಯನ್ನಾಗಿ (Brand Ambassador) ನೇಮಿಸಿ ಸರ್ಕಾರದ ಆದೇಶ ಹೊರಡಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಏಕಕಡತದಲ್ಲಿ ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಇವರು ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2023-24ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಿರುವ “15 ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯನ್ನಾಗಿ (Brand Ambassador) ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಡಾಲಿ ಧನಂಜಯ್ ಇವರನ್ನು ನೇಮಿಸಿ ಆದೇಶಿಸಿದೆ ಎಂದು ಸರ್ಕಾರ ತಿಳಿಸಿದೆ.