ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆಘಾತಕಾರಿ ಮಾಹಿತಿಗಳು ಹೊರಬರುತ್ತಿದ್ದು, ಸ್ನಾನಕ್ಕೆ ನೀರು ಕಾಯಿಸುವ ಹೀಟರ್ ನಿಂದ ಆತನಿಗೆ ಕರೆಂಟ್ ಶಾಕ್ ಕೊಟ್ಟಿದ್ದ, ಸುಟ್ಟಿದ್ದ ಮಾಹಿತಿ ಈಗ ಹೊರಬಿದ್ದಿದೆ.
ದರ್ಶನ್ ಮತ್ತು ಸಹಚರರನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಈ ವಿವರಗಳನ್ನು ನ್ಯಾಯಾಲಯದ ಮುಂದಿಟ್ಟರು.
ರೇಣುಕಾಸ್ವಾಮಿ ಮೇಲೆ ಆರೋಪಿಗಳು ದಾರುಣವಾಗಿ ಹಲ್ಲೆ ನಡೆಸಿದ್ದಾರೆ. ಆತನ ದೇಹಕ್ಕೆ ಸ್ನಾನಕ್ಕೆ ನೀರು ಕಾಯಿಸುವ ಹೀಟರ್ ಬಳಸಿ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಈ ಹೀಟರ್ ಅನ್ನು ಆರೋಪಿಗಳು ಮುಚ್ಚಿಟ್ಟಿದ್ದು ಅದನ್ನು ರಿಕರವ್ ಮಾಡಬೇಕಿದೆ ಎಂದು ಅವರು ನ್ಯಾಯಾಧೀಶರ ಮುಂದೆ ಅರಿಕೆ ಮಾಡಿಕೊಂಡರು. ಈ ವಿವರಗಳನ್ನು ಕೇಳಿದ ನ್ಯಾಯಾಧೀಶರೇ ಒಂದರೆಕ್ಷಣ ಅವಕ್ಕಾದರು. ಈ ಡಿವೈಸ್ ಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಂತೆ ಅವರು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದರು.
ಕೊಲೆ ನಡೆಸಿದ ಬಳಿಕ ದರ್ಶನ್ ಮೈಸೂರಿಗೆ ತೆರಳಿದ್ದರು. ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳಲು ನಾಲ್ವರನ್ನು ಒಪ್ಪಿಸಿ ಅವರಿಗೆ ಹಣದ ಆಮಿಷ ನೀಡಲಾಗಿತ್ತು. ಅವರು ಹಿಂಜರಿದ ಹಿನ್ನೆಲೆಯಲ್ಲಿ ನಾಲ್ವರನ್ನು ದರ್ಶನ್ ಅವರೇ ಮೈಸೂರಿಗೆ ಕರೆಯಿಸಿಕೊಂಡು ಮಾತನಾಡಿಸಿರುವ ಮಾಹಿತಿ ಇದೆ ಎಂದು ಸರ್ಕಾರಿ ಅಭಿಯೋಜಕರು ಹೇಳಿದರು. ಆ ನಂತರವೇ ನಾಲ್ವರು ಪೊಲೀಸರ ಮುಂದೆ ಶರಣಾಗಿ ಕಟ್ಟುಕಥೆ ಹೇಳಿದರು. ವಿಚಾರಣೆ ನಡೆಸಿದಾಗ ಕೊಲೆಯ ಪೂರ್ಣ ವಿವರಗಳು ಬೆಳಕಿಗೆ ಬಂತು ಎಂದು ಅವರು ವಿವರಿಸಿದರು.