ಕವಿಗೋಷ್ಠಿ, ವಿಚಾರ ಸಂಕಿರಣ, ಸಾರ್ವಜನಿಕ ಸಂವಾದ, ವಿಚಾರ ಗೋಷ್ಠಿ ಇವೇ ಮೊದಲಾದ ಬೌದ್ಧಿಕ ಪ್ರಕ್ರಿಯೆಗಳು ರೂಪಾಂತರಗೊಂಡಿವೆ. ಸಾಂಸ್ಕೃತಿಕ ವಲಯದೊಳಗೇ ಪ್ರಚಲಿತ ಸವಾಲು-ಸಮಸ್ಯೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸುವ ವೇದಿಕೆಗಳು ಇಂದು ಕಾನೂನಾತ್ಮಕ ಸಂಕೋಲೆಗಳಿಂದ ಆವೃತವಾಗುತ್ತಿವೆ. ಸಾಂಸ್ಥಿಕ ನೆಲೆಯಲ್ಲಿ ಕನ್ನಡ ಸಾಂಸ್ಕೃತಿಕ ಲೋಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಿದೆ- ನಾ ದಿವಾಕರ.
ಯಾವುದೇ ಸಮಾಜದಲ್ಲಾದರೂ, ʼಸಾಂಸ್ಕೃತಿಕʼ Cultural ಎಂಬ ಪದವನ್ನು ಆಡಳಿತಾತ್ಮಕವಾಗಿ-ಸಾಮಾಜಿಕವಾಗಿ ಎರಡು ನೆಲೆಗಳಲ್ಲಿ ಬಳಸುವುದು ಪಾರಂಪರಿಕವಾಗಿ ಬೆಳೆದುಬಂದಿರುವ ವಿದ್ಯಮಾನ. ಆಳ್ವಿಕೆಯ ಮಾದರಿ ಪ್ರಜಾಸತ್ತಾತ್ಮಕವಾಗಲೀ ಅಥವಾ ನಿರಂಕುಶ ಸರ್ವಾಧಿಕಾರವಾಗಲೀ ಅಲ್ಲಿ ಅಧಿಕಾರ ವಹಿಸಿಕೊಳ್ಳುವ ಶಕ್ತಿಗಳ ದೃಷ್ಟಿಯಲ್ಲಿ ʼ ಸಾಂಸ್ಕೃತಿಕ ʼ ಲೋಕ ಎನ್ನುವುದು ಆಳ್ವಿಕೆಯ ಪ್ರಭಾವವನ್ನು ತಳಮಟ್ಟದವರೆಗೆ ವಿಸ್ತರಿಸಲು ಬಳಸಬಹುದಾದ ಸಂವಹನ ಸಾಧನಗಳಾಗಿ ಕಾಣುತ್ತವೆ. ಅಧಿಕಾರದಲ್ಲಿರುವ ಪಕ್ಷಗಳ ಎಡ ಮತ್ತು ಬಲಪಂಥೀಯ ತತ್ವಗಳು ಈ ಸಾಂಸ್ಕೃತಿಕ ಸಂವಹನಗಳನ್ನೂ ಸಹ ತನ್ನ ಸೈದ್ಧಾಂತಿಕ-ತಾತ್ವಿಕ ಚಿಂತನಾ ವಾಹಿನಿಗಳ ವಿಸ್ತರಣೆಗೆ ಚಿಮ್ಮುಹಲಗೆಯಾಗಿ ಬಳಸಿಕೊಳ್ಳುತ್ತವೆ. ವ್ಯಕ್ತಿಗತ ನೆಲೆಯಲ್ಲಿ ಸಮಾಜದ ವ್ಯಕ್ತಿನಿಷ್ಟ ತಾತ್ವಿಕ ಚಿಂತನಾಧಾರೆಗಳು ಈ ಮೇಲ್ಮಟ್ಟದ ಸಾಂಸ್ಕೃತಿಕ ವಿದ್ಯಮಾನಗಳನ್ನು ನಿರ್ವಚಿಸುವ ಬೌದ್ಧಿಕ (Intellecual) ಹಾಗೂ ಶೈಕ್ಷಣಿಕ (Academic) ಸಂಕಥನಗಳನ್ನು ಪ್ರಭಾವಿಸುತ್ತವೆ. ಸ್ವತಂತ್ರ ಭಾರತದ ಚರಿತ್ರೆಯನ್ನು ಗಮನಿಸಿದಾಗ, ಆರಂಭದಿಂದಲೂ ಸಹ ಸರ್ಕಾರಗಳು ಸಾಂಸ್ಕೃತಿಕ ಜಗತ್ತಿನ ಸ್ವಾಯತ್ತತೆ ಮತ್ತು ಸ್ವಂತ ನಿರ್ವಹಣೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿರುವುದು ಕಾಣುವುದಿಲ್ಲ.
ಹಾಗೆ ನೋಡಿದರೆ ಸಾಂಸ್ಕೃತಿಕ ವಲಯದ ಸ್ವಾಯತ್ತತೆ ಎನ್ನುವ ಒಂದು ಉದಾತ್ತ ವಿದ್ಯಮಾನದ ನಿರ್ವಚನೆಯೇ ನಮ್ಮಲ್ಲಿ ನಡೆದಿಲ್ಲ. 1950-60ರ ದಶಕದಲ್ಲಿ ಹಿಂದಿ ಚಿತ್ರರಂಗದ ರಾಜ್‌ಕಪೂರ್, ಬಂಗಾಲದ ಸತ್ಯಜಿತ್ ರೇ ಮುಂತಾದವರು ತಯಾರಿಸುತ್ತಿದ್ದ ಸಿನೆಮಾಗಳಲ್ಲಿ ವ್ಯವಸ್ಥೆಯನ್ನು ವಿಮರ್ಶಾತ್ಮಕವಾಗಿ ನೋಡುವ, ಪ್ರತಿರೋಧದ ಒಳನೋಟಗಳು ಇರುತ್ತಿದ್ದವು. ರಾಜಕೀಯ ಮತ್ತು ಆಡಳಿತ ನೀತಿಗಳನ್ನು ಟೀಕಾತ್ಮಕವಾಗಿ ನೋಡುವ ಒಂದು ಪರಿಭಾಷೆಯನ್ನೂ ಈ ಚಿತ್ರಗಳು ಹುಟ್ಟುಹಾಕಿದ್ದವು. 1958ರಲ್ಲೇ ರಾಜ್‌ಕಪೂರ್ ನಟಿಸಿದ ರಮೇಶ್ ಸೈಗಲ್ ಅವರ ಚಿತ್ರ ಫಿರ್ ಸುಬಹ್ ಹೋಗಿ ಚಿತ್ರದ ” ಓ ಸುಬಹ್ ಕಭೀ ತೊ ಆಯೇಗಿ “ (ರಚನೆ ಸಾಹಿತ್ ಲುಧಿಯಾನ್ವಿ ) ಸರ್ಕಾರದಿಂದ ನಿರ್ಬಂಧಕ್ಕೊಳಗಾಗಿತ್ತು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ ಈ ನಿರಂಕುಶಾಧಿಕಾರ ಸಾಂಸ್ಕೃತಿಕ ಲೋಕವನ್ನು ಮತ್ತಷ್ಟು ʼ ಬೋಲ್ಟು-ನಟ್ಟು ʼಗಳಿಂದ ಬಿಗಿಮಾಡಿದ್ದನ್ನು ಗುಲ್ಜಾರ್ ಅವರ ʼ ಆಂಧಿ ʼ (ಸಂಜೀವ್ ಕುಮಾರ್-ಸುಚಿತ್ರಾ ಸೆನ್)ಚಿತ್ರದ ಪ್ರಸಂಗದಲ್ಲಿ ಗುರುತಿಸಬಹುದು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಳುವ ವರ್ಗಗಳು ತಳಮಟ್ಟದ ಸಮಾಜಕ್ಕೆ ತಲುಪಬಹುದಾದ ವಿಪ್ಲವಕಾರಿ ಸಂದೇಶಗಳನ್ನು ತಡೆಗಟ್ಟಲು ಸಾಮಾನ್ಯವಾಗಿ ಸಾಂಸ್ಕೃತಿಕ ಲೋಕದ ಸಂವಹನ ಸೇತುವೆಗಳನ್ನು ಬಳಸಿಕೊಳ್ಳುತ್ತವೆ. ಸೆನ್ಸಾರ್ ಮಂಡಲಿ ಎಂಬ ಒಂದು ಸಂಸ್ಥೆ ಚಿತ್ರರಂಗದಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಬಂದಿದೆ. ಒಂದು ಹಂತದವರೆಗೆ ಹವ್ಯಾಸಿ ರಂಗಭೂಮಿ ಈ ನಿಯಂತ್ರಣ ರೇಖೆಗಳಿಂದಾಚೆಗೂ ತನ್ನ ಬಾಹುಗಳನ್ನು ವಿಸ್ತರಿಸಿದ್ದನ್ನು ಗಮನಿಸಬಹುದು. ಇಂದಿಗೂ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿಲ್ಲ ಎನ್ನುವುದೂ ಒಪ್ಪಲೇಬೇಕಾದ ಸತ್ಯ. 1960-70ರ ದಶಕದ ಸಾಮಾಜಿಕ ಕ್ಷೋಭೆ ಮತ್ತು ಉತ್ಕರ್ಷದ ಸನ್ನಿವೇಶದಲ್ಲಿ ಸೃಷ್ಟಿಯಾದ ಜನಸಾಮಾನ್ಯರ ತಲ್ಲಣಗಳನ್ನು ದಾಖಲಿಸುವಲ್ಲಿ ಸಿನೆಮಾಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿ ತಳಸಮಾಜವನ್ನು ತಲುಪಿದ್ದು ರಂಗಭೂಮಿ, ಅದರಲ್ಲೂ ಬೀದಿ ನಾಟಕಗಳ ಮೂಲಕ ಎನ್ನುವುದು ಚಾರಿತ್ರಿಕ ಸತ್ಯ.
ದಲಿತ-ಮಹಿಳಾ-ಆದಿವಾಸಿ-ಕಾರ್ಮಿಕ ಜಗತ್ತಿನಲ್ಲಿ, ದೇಶದ ವ್ಯವಸ್ಥೆಯಲ್ಲಿ ಉಂಟಾದ ಆರ್ಥಿಕ ಅಸಮಾನತೆ ಮತ್ತು ತಾರತಮ್ಯಗಳ ವಿರುದ್ಧದ ದನಿಗಳು ಉಚ್ಛ್ರಾಯ ಮಟ್ಟಕ್ಕೆ ಏರಲು ನೆರವಾದದ್ದು ಕರ್ನಾಟಕದ ಸಮುದಾಯ, ಉತ್ತರ ಭಾರತದ ಜನನಾಟ್ಯ ಮಂಚ್, ಆಂಧ್ರದ ಜನನಾಟ್ಯ ಮಂಡಲಿ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿಗಳು. ಈ ಸಂಸ್ಥೆಗಳು ಹುಟ್ಟುಹಾಕಿದ ಸಂಚಾರಿ ರಂಗಭೂಮಿ ಮತ್ತು ಬೀದಿ ನಾಟಕಗಳ ಪರಂಪರೆ ಆಳುವವರ ಎದೆ ನಡುಗಿಸಿದ್ದೂ ವಾಸ್ತವ. ಖ್ಯಾತ ನಾಟಕಕಾರ ಸಫ್ದಾರ್ ಹಷ್ಮಿ ಈ ಹಾದಿಯಲ್ಲೇ ಹುತಾತ್ಮರಾದ ಒಂದು ದುರಂತ ದಂತಕಥೆ ನಮ್ಮ ನಮ್ಮ ನಡುವೆ ಇನ್ನೂ ಪ್ರಚಲಿತವಾಗಿದೆ. ಸಾಮಾನ್ಯವಾಗಿ ರಂಗಭೂಮಿ ಸಾಪೇಕ್ಷವಾಗಿ ತನ್ನ ಈ ಸಂವೇದನಾಶೀಲ ತಂತುಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವುದನ್ನು ಗುರುತಿಸಬೇಕಿದೆ.
ಆದರೆ ಈ ದೃಶ್ಯ ಮಾದರಿಯ ಆಧುನಿಕ ಡಿಜಿಟಲ್ ಮಾದರಿಗಳಾದ ಸ್ಟಾಂಡ್ ಅಪ್ ಕಾಮಿಡಿ ಮುಂತಾದ ಅಭಿವ್ಯಕ್ತಿಗಳು ಇಂದಿಗೂ ಸರ್ಕಾರಗಳಿಂದ ನಿಯಂತ್ರಿಸಲ್ಪಡುತ್ತಿವೆ. ಕವಿಗೋಷ್ಠಿ, ವಿಚಾರ ಸಂಕಿರಣ, ಸಾರ್ವಜನಿಕ ಸಂವಾದ, ವಿಚಾರ ಗೋಷ್ಠಿ ಇವೇ ಮೊದಲಾದ ಬೌದ್ಧಿಕ ಪ್ರಕ್ರಿಯೆಗಳು ರೂಪಾಂತರಗೊಂಡಿದ್ದು, ಸಾಂಸ್ಕೃತಿಕ ವಲಯದೊಳಗೇ ಪ್ರಚಲಿತ ಸವಾಲು-ಸಮಸ್ಯೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸುವ ವೇದಿಕೆಗಳು ಇಂದು ಕಾನೂನಾತ್ಮಕ ಸಂಕೋಲೆಗಳಿಂದ ಆವೃತವಾಗುತ್ತಿವೆ. ಒಂದು ಕಾಲದಲ್ಲಿ ಇಂತಹ ಚರ್ಚೆ-ಸಂವಾದಗಳಿಗೆ ಮುಕ್ತ ಜಗತ್ತಿನಂತಿದ್ದ ವಿಶ್ವವಿದ್ಯಾಲಯಗಳು ಇಂದು ಬೌದ್ಧಿಕವಾಗಿ ನಿರ್ಬಂಧಿತ ವಲಯಗಳಾಗಿರುವುದು ವಾಸ್ತವ.
1980ರ ದಶಕದ ನಂತರದಲ್ಲಿ ಬಂದ ಚಲನಚಿತ್ರಗಳತ್ತ ಗಮನಹರಿಸಿದಾಗ ಈ ವಿದ್ಯಮಾನ ಸ್ಪಷ್ಟವಾಗುತ್ತದೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಪ್ರತಿಭಟಿಸುವ ಮತ್ತು ಅದರ ವಿರುದ್ಧ ಹೋರಾಡುವ ಮನೋಭಾವವನ್ನು ವ್ಯಕ್ತಿಗತ ನೆಲೆಯಲ್ಲಿ ಅಭಿವ್ಯಕ್ತಿಗೊಳಿಸುತ್ತಾ, ನಾಯಕ ನಟ ಏಕಾಂಗಿಯಾಗಿ ಹೋರಾಡಿ ಗೆಲ್ಲುವ ಅಥವಾ ಹುತಾತ್ಮನಾಗುವ ಕಥಾ ಹಂದರಗಳು ಎಲ್ಲ ಭಾಷೆಗಳನ್ನು ಆವರಿಸಿಕೊಂಡವು. ಈ ಕಥನಗಳು ನಾಯಕ ನಟನ ವ್ಯಕ್ತಿಗತ ವೈಭವೀಕರಣದಲ್ಲಿ ಮತ್ತು ಸಮಾಜಘಾತುಕತನದ ವ್ಯಕ್ತಿನಿಷ್ಠತೆಯಲ್ಲಿ (Subjectivity) ಕೊನೆಗೊಳ್ಳುತ್ತಿದ್ದವು. 1980-90ರ ದಶಕದಲ್ಲಿ ಚಿತ್ರರಂಗದ ಕೆಲವೇ ನಿರ್ದೇಶಕರು ಸಾಮಾಜಿಕ ವ್ಯವಸ್ಥೆಯ ಒಳಹುಳುಕುಗಳನ್ನು ಹೊರತೆಗೆದು ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಿದರೂ ಅವುಗಳನ್ನು ʼ ಕಲಾತ್ಮಕ ʼ ಎಂಬ ಆವರಣದಲ್ಲಿ (Bracket) ಬಂಧಿಸಿ, ಮಾರುಕಟ್ಟೆಯ ಜಗುಲಿಯಲ್ಲಿ ಜಾಗ ಸಿಗದಂತೆ ಮಾಡಿದ್ದು, ಬಂಡವಾಳಶಾಹಿ-ಮಾರುಕಟ್ಟೆಯ ಒಂದು ಕುತಂತ್ರ
ಸಾಮಾನ್ಯವಾಗಿ ರಂಗಭೂಮಿ ಈ ವಿದ್ಯಮಾನಗಳಿಂದ ಆದಷ್ಟೂ ಹೊರಗುಳಿದಿದ್ದು ತನ್ನ ಸೃಜನಶೀಲತೆಯನ್ನು ಉಳಿಸಿಕೊಂಡಿದೆ. ಆದರೆ ಎಡಪಂಥೀಯ ಧೋರಣೆಯುಳ್ಳ ಕಾರ್ಮಿಕ ಸಂಘಟನೆಗಳಾಗಲೀ, ಮಧ್ಯಮ ವರ್ಗವನ್ನು ಪ್ರತಿನಿಧಿಸುವ ಬಿಳಿ ಕಾಲರಿನ (ಬ್ಯಾಂಕ್, ವಿಮೆ ಇತ್ಯಾದಿ) ಸಂಘಟನೆಗಳಾಗಲೀ ಈ ಮಾಧ್ಯಮವನ್ನು ಬಳಸಿಯೇ ಇಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈ ವಿದ್ಯಮಾನಗಳನ್ನು ಮತ್ತೊಂದು ಆಯಾಮದಲ್ಲಿ ವಿಶ್ಲೇಷಿಸುವುದಾದರೆ, ಭಾಷೆ, ಸಾಹಿತ್ಯ, ಸಿನೆಮಾ, ಕಲೆ ಮತ್ತು ಇತರ ಸೃಜನಶೀಲ ಬೌದ್ಧಿಕ ವಲಯಗಳ ಸಾಂಸ್ಥಿಕ ಚೌಕಟ್ಟುಗಳು ಹೆಚ್ಚು ಹೆಚ್ಚಾಗಿ ಅಧಿಕಾರ ರಾಜಕಾರಣಕ್ಕೆ ನಿಕಟವಾಗಿರಲು ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಟಸ್ಥವಾಗಿರಲು ಅಥವಾ ವಿಶಾಲ ಸಮಾಜವು ಎದುರಿಸುವ ಚಾರಿತ್ರಿಕ ಅನ್ಯಾಯಗಳ ವಿರುದ್ಧ ಮೌನವಾಗಿರಲು ನಿರ್ಧರಿಸಿರುವುದನ್ನು ಕಳೆದ ಹಲವು ವರ್ಷಗಳಲ್ಲಿ ಗುರುತಿಸಬಹುದು. ಇದರ ಮೂಲ ಸೂತ್ರವನ್ನು ಸಾಂಸ್ಥಿಕ ನಾಮನಿರ್ದೇಶನಗಳಲ್ಲಿ, ಅಕಾಡೆಮಿ, ಪ್ರಾಧಿಕಾರಗಳ ನೇಮಕಾತಿಗಳಲ್ಲಿ ಗುರುತಿಸಬಹುದು. ಇಲ್ಲಿ ಅಧಿಕಾರ ರಾಜಕಾರಣವು, ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಸಹ, ತನ್ನದೇ ಆದ ಯಜಮಾನಿಕೆಯನ್ನು ಸ್ಥಾಪಿಸುತ್ತದೆ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿರುವುದು ಪ್ರಶಸ್ತಿಗಳ ಹಿಂದಿನ ರಾಜಕೀಯ ಛಾಯೆ.
ನಟ್ಟು ಬೋಲ್ಟು ಮತ್ತು ಸ್ಪ್ಯಾನರ್
ಕರ್ನಾಟಕದ ಉಪಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಬಳಸಿರುವ ಬೋಲ್ಟು-ನಟ್ಟುಗಳ ಊಳಿಗಮಾನ್ಯ ಪರಿಭಾಷೆಯನ್ನು ಈ ದೃಷ್ಟಿಯಿಂದ ನೋಡಿದಾಗ, ಇದಕ್ಕೆ 50 ವರ್ಷಗಳ ಇತಿಹಾಸ ಇರುವುದನ್ನೂ ಗುರುತಿಸಬಹುದು. ಆದರೆ ಈ ಬೋಲ್ಟು ಮತ್ತು ನಟ್ಟು ಎಂಬ ಬಿಡಿಭಾಗಗಳು ಮಾತ್ರ ಯಾರನ್ನೂ ಯಾವುದನ್ನೂ ಬಂಧಿಸಲಾಗುವುದಿಲ್ಲ, ಬಿಗಿಹಿಡಿತಕ್ಕೆ ಒಳಪಡಿಸಲಾಗುವುದಿಲ್ಲ. ಅವೆರಡನ್ನೂ ಪ್ರಯೋಗಿಸಿ ಕಾರ್ಯಗತವಾಗಿಸಲು ಒಂದು ಸ್ಪ್ಯಾನರ್ (Spanner) ಬೇಕಲ್ಲವೇ? ಈ ಸ್ಪ್ಯಾನರ್ ಆಳುವ ವರ್ಗಗಳಿಗೆ ಸುಲಭವಾಗಿ ಲಭ್ಯವಾಗುವುದಾದರೂ ಹೇಗೆ ? ಇದಕ್ಕೆ ಕಾರಣವನ್ನು ನಮ್ಮ ಸಾಂಸ್ಕೃತಿಕ ವಲಯ ಕಳೆದುಕೊಂಡಿರುವ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ನೆಲೆಗಳಲ್ಲಿ ಕಾಣಬಹುದು. ಸಾಂಸ್ಥಿಕ ನೆಲೆಗಳಲ್ಲಿ ಕ್ರಿಯಾಶೀಲವಾಗಿರುವ ವ್ಯಕ್ತಿ-ಸಂಘಟನೆಗಳು ತಮ್ಮ ವಿಶಾಲ ಸಾಮಾಜಿಕ ಜವಾಬ್ದಾರಿಯನ್ನು (Broader Social Responsibility) ಮರೆತು, ವ್ಯಕ್ತಿಗತಗೊಳಿಸುವ (Individualisation) ದಿಕ್ಕಿನಲ್ಲಿ ಯೋಚಿಸ ತೊಡಗಿದಾಗ.
ಇಂತಹ ಸನ್ನಿವೇಶದಲ್ಲಿ ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಂಡಿರುವ ಸಿನೆಮಾ ರಂಗ ಯಾವ ರೀತಿಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಸಾಧ್ಯ ? ಈ ಮಾರುಕಟ್ಟೆಯೊಡನೆ ಸೆಣಸಲಾರದ ಅನೇಕ ಸೃಜನಶೀಲ ವ್ಯಕ್ತಿಗಳು ನೇಪಥ್ಯಕ್ಕೆ ಸರಿಯುತ್ತಾರೆ. ಮಾರುಕಟ್ಟೆಗೆ ಪೂರಕವಾದ ಹಾದಿಯಲ್ಲಿ ಸಾಗಲೇಬೇಕಾದ ಅನಿವಾರ್ಯತೆಯೇ ಚಿನ್ನದ ಗಣಿಯ ಕಾರ್ಮಿಕರ ಹೀನ ಬದುಕನ್ನು ಮುಂಬೈ ಮಾಫಿಯಾ ಲೋಕದ ಭಾಗವಾಗಿ ಚಿತ್ರಿಸುವಂತೆ ಮಾಡುತ್ತದೆ. ಕಾಂತಾರದಂತಹ ಜನಸಂಸ್ಕೃತಿಯು ಬಾಹ್ಯ ಪ್ರಭಾವಿ ಸಾಂಸ್ಕೃತಿಕ ಲೋಕದೊಳಗೆ ಬೆರೆತುಹೋಗುತ್ತದೆ. ಆದರೆ ಕೋವಿದ್ ಸಂದರ್ಭದ ಸಾವು-ನೋವು-ತಲ್ಲಣಗಳಾಗಲೀ, ಆಗಿನ-ಈಗಿನ ವಲಸೆ ಕಾರ್ಮಿಕರ ಸಂಕಷ್ಟಗಳಾಗಲೀ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆಗಳಾಗಲೀ ಸಿನೆಮಾದ ರಜತಪರದೆಯ ಮೇಲೆ ಬಿತ್ತರವಾಗುವುದಿಲ್ಲ. ಮತ್ತೊಂದೆಡೆ ಸಾಹಿತ್ಯ ಲೋಕದ ಒಂದು ವರ್ಗ ತಣ್ಣನೆಯ ಮೌನಕ್ಕೆ ಜಾರಿಬಿಡುತ್ತದೆ.
ಸಮಸ್ಯೆ ಇರುವುದು ಬೋಲ್ಟು ನಟ್ಟುಗಳಲ್ಲಿ ಅಲ್ಲ. ಅದನ್ನು ಬಳಸುವ ಸ್ಪ್ಯಾನರ್‌ನಲ್ಲಿ. ಇದನ್ನು ಮಾರುಕಟ್ಟೆಗೆ ಕೊಡುವುದು ಮತ್ತು ಸರ್ಕಾರಗಳ ಕೈಗೆ ಕೊಡುವುದು ಏನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಈಗ Corporatisation (ಮಾರುಕಟ್ಟೆಕರಣ) ರಾಜಕೀಯದ ಅವಿಭಾಜ್ಯ ಅಂಗವಾಗಿದೆ. ಈ ಸ್ಪ್ಯಾನರ್‌ನ್ನು ರಾಜಕೀಯ ಪಕ್ಷಗಳ- ಮಾರುಕಟೆಯ ಕೈಗೆ ಕೊಟ್ಟಿರುವುದು ನಾವೇ ಅಲ್ಲವೇ ?
ನಾ ದಿವಾಕರ
ಚಿಂತಕರು
ಇದನ್ನೂ ಓದಿ- ʼಧರ್ಮದಾವರಣದೊಳಗಿದ್ದು ಆಂತರಿಕ ವಿಮರ್ಶೆ ಮಾಡುವುದೂ ಮುಖ್ಯ’-ಝಕಿಯಾ ಸೋಮನ್