ಬೆಂಗಳೂರು : ವೈದ್ಯಕೀಯ ಕಲಿಕೆ ಎಂದರೆ ಕೇವಲ ವೈದ್ಯರು, ನರ್ಸ್‌ಗಳು, ಔಷಧ ಶಾಸ್ತ್ರಜ್ಞರು ಅಥವಾ ಸಂಶೋಧಕರನ್ನು ತಯಾರಿಸುವುದಲ್ಲ. ಜ್ಞಾನದೊಂದಿಗೆ ಕರುಣೆ, ಮಾನವೀಯತೆ ಹಾಗೂ ವೃತ್ತಿಪರತೆಯನ್ನೂ ಹೊಂದಿರುವ ಹೊಸ ತಲೆಮಾರನ್ನು ರೂಪಿಸಬೇಕಾಗಿದೆ ವೈದ್ಯಕೀಯ ಶಿಕ್ಷಣ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಹೇಳಿದರು. ಅವರು ಇಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿರುವವರು ತಾಂತ್ರಿಕ ಕೌಶಲ್ಯದ ಜೊತೆಗೆ ಸಂವಹನ ಕೌಶಲ್ಯ ಹಾಗೂ ಮನವೀಯತೆಯನ್ನೂ ಬೆಳೆಸಿಕೊಳ್ಳಬೇಕು. ವೈದ್ಯರಾದವರು ರೋಗಿಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದೂ ಮುಖ್ಯ. ವೃತ್ತಿಯ ಜೊತೆಗೆ ಸೇವೆಗೂ ಅವಕಾಶವಿರುವ ಕ್ಷೇತ್ರ ಎಂದರೆ ವೈದ್ಯಕೀಯ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಶಿಕ್ಷಕರು ವೃತ್ತಿಯ ಜೊತೆಗೆ ಸೇವಾ ಮನೋಭಾವವನ್ನೂ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇಡೀ ದೇಶದಲ್ಲಿಯೇ ಅತ್ಯುತ್ತಮ ವೈದ್ಯಕೀಯ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದೆ. ಈ ಗರಿಮೆಯಿಂದಾಗಿ ವಿಶ್ವವಿದ್ಯಾಲಯದ ಜವಾಬ್ದಾರಿಯೂ ಹೆಚ್ಚಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಮಾತನಾಡಿ, ಭಾರತೀಯ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಅವಕಾಶಗಳನ್ನು ಒದಗಿಸಲು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಕ್ರಿಯ ಸಹಭಾಗಿತ್ವವನ್ನು ಬೆಳೆಸಲಾಗಿದೆ. ನಮ್ಮ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಕೌಶಲ್ಯಗಳನ್ನು ಹೊಂದಿ, ಭಾರತದ ಆರೋಗ್ಯ ಸೇವಾ ಅವಶ್ಯಕತೆಗಳನ್ನು ಪೂರೈಸುವಂತಾಗಲು ಹಲವು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಶಿಕ್ಷಣ ಮತ್ತು ಸಂಶೋಧನೆಗಳ ಜೊತೆಗೆ ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಬಲೀಕರಣ ಹಾಗೂ ವೃತ್ತಿ ಕೌಶಲ್ಯಗಳನ್ನು ಬೆಳೆಸುವಲ್ಲಿಯೂ ಕಾರ್ಯಪ್ರವೃತ್ತವಾಗಿದೆ. ಇಂಗ್ಲಂಡ್ ಮತ್ತು ಇತರ ದೇಶಗಳ ವಿಶ್ವವಿದ್ಯಾಲಯಗಳೊಂದಿಗೆ ಕೈ ಜೋಡಿಸುವ ಮೂಲಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅಂತರರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದರು.
ಆರೋಗ್ಯ ವಿಜ್ಞಾನಗಳ ಶಿಕ್ಷಣದಲ್ಲಿ, ಕೇವಲ ಜ್ಞಾನ ಹಂಚುವುದಕ್ಕಷ್ಟೇ ಶಿಕ್ಷಕರ ಪಾತ್ರ ಸೀಮಿತವಾಗಿರುವುದಿಲ್ಲ; ಭವಿಷ್ಯದ ವೈದ್ಯರು, ನರ್ಸ್‌ಗಳು ಹಾಗೂ ಎಲ್ಲಾ ಆರೋಗ್ಯ ವೃತ್ತಿಪರರಲ್ಲಿ ಆರೋಗ್ಯಕರ ಮನೋಭಾವ, ಉತ್ತಮ ಮೌಲ್ಯಗಳು, ಕೌಶಲ್ಯಗಳು ಮತ್ತು ಮಾನವೀಯತೆಯನ್ನು ರೂಪಿಸುವುದೂ ಕೂಡ ಈ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿಶ್ವದ ಅತಿ ದೊಡ್ಡ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ರೂಪುಗೊಂಡಿದೆ. 1500 ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು, ಕಾಲೇಜುಗಳನ್ನು ಹೊಂದಿದೆ. ನಮ್ಮ ಅಧ್ಯಾಪಕರ ಬೌದ್ಧಿಕ ಮತ್ತು ನೈತಿಕ ನಾಯಕತ್ವವಿಲ್ಲದೆ ಈ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಕರಲ್ಲಿ ಹೂಡಿಕೆ ಮಾಡುವುದು ಎಂದರೆ ಆರೋಗ್ಯ ಸೇವೆಯಲ್ಲಿ ಹೂಡಿಕೆ ಮಾಡಿದಂತೆಯೇ ಎಂದು ನಂಬಿದ್ದೇವೆ. ಕಳೆದ ಹಲವು ವರ್ಷಗಳಿಂದ, ಆರ್‌ಜಿಯುಎಚ್‌ಎಸ್ ಶಿಕ್ಷಕರ ಅಭಿವೃದ್ಧಿಗಾಗಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಯುರಾಲಜಿ, ನೆಫ್ರೋ ಯುರಾಲಜಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ,ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ರಿಯಾಜ್ ಬಾಷಾ ಎಸ್., ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಶಿವಪ್ಪ ಬಿ ಅನುರ್ ಶೆಟ್ಟರ್, ಡಾ. ಬಿ. ಗುರುಬಸವರಾಜ , ಡಾ. ಗೀತಾ ಅವಧಾನಿ, ಡಾ. ಶಿವಪುತ್ರಪ್ಪ ರೇವಪ್ಪ ಹರ್ವಾಲ್, ಡಾ. ಪಿ. ಶಾರದಾ, ಡಾ. ರಮೇಶ್. ಸಿ., ಡಾ. ಪ್ರಸನ್ನ ಎನ್. ರಾವ್, ಡಾ. ಝಡ್.ಎಂ.ಎಲ್. ಹಸನ್ , ಡಾ. ಮೊಹಮ್ಮದ್ ಖಲೀಲುಲ್ಲಾ ಶರೀಫ್, ಡಾ. ವನಿತಾ ಎಸ್. ಶೆಟ್ಟಿ , ಡಾ. ಭಾರತಿ ಮುನಿನಾರಾಯಣಪ್ಪ, ಡಾ. ವಿಜಯ್. ಪಿ, ಪ್ರೊ. ರಾಜೇಶ್ ಶೆಣೈ, ಡಾ. ವಿನೋದ್ ಅವರನ್ನು ಸನ್ಮಾನಿಸಲಾಯಿತು.