ಸಂವಿಧಾನ ತಿದ್ದುಪಡಿ (Constitution amendment) ಮಾಡಲು ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹಗಡೆ (Anantkumar Hegde) ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ಅನಂತ್ ಕುಮಾರ್ ಹೆಗಡೆ ಪರ ಸಿಟಿ ರವಿ ಬ್ಯಾಟಿಂಗ್ ಮಾಡಿದ್ದಾರೆ.
ಚಿಕ್ಕಮಗಳೂರು ನಗರದ ಪಾಂಚಜನ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಟಿ ರವಿ, ಅನಂತಕುಮಾರ್ ಏನು ಹೇಳಿದ್ದಾರೆ ಎಂದು ನಾನು ವಿಡಿಯೋ ನೋಡಿದೆ. ಅನಂತಕುಮಾರ್ ಹೆಗಡೆ ಹೇಳಿರುವುದರಲ್ಲಿ ತಪ್ಪೇನಿದೆ? ಅಂಬೇಡ್ಕರ್ ಅವರು ಸಂವಿಧಾನದ ಮೂಲ ಪ್ರತಿಯಲ್ಲಿ ರಾಮನ ಚಿತ್ರ ಹಾಕಿದ್ದರು. ರಾಮನ ಚಿತ್ರ ಮೂಲ ಪ್ರತಿಯಲ್ಲಿ ಹಾಕಿದ ಉದ್ದೇಶವೇನು? ಇದು ರಾಮನ ಭೂಮಿ ಅಂತ ಅಂಬೇಡ್ಕರ್ ಅವರಿಗೂ ಗೊತ್ತಿತ್ತು ಎಂದು ಹೇಳಿದ್ದಾರೆ.
ಸಂವಿಧಾನವನ್ನ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಪೈಕಿ 95 ಬಾರಿ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ ತಿದ್ದುಪಡಿಗೆ ಸಂವಿಧಾನದಲ್ಲೇ ಅವಕಾಶವಿದೆ. ಆಂಬೇಡ್ಕರ್ ಆಶಯದಂತೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು. ಭಾರತ ರಾಷ್ಟ್ರವೇ ಅಲ್ಲ ಒಕ್ಕೂಟ ಅನ್ನುವವರು ಸಂವಿಧಾನ ವಿರೋಧಿಗಳು ಎಂದು ಹೇಳಿದ್ದಾರೆ.