ನಮ್ಮ ಮಕ್ಕಳು ಜಾಗತಿಕ ಪೈಪೋಟಿ ಎದುರಿಸಬೇಕು. ಹಾಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯ. ಈ ಹಿನ್ನೆಲೆಯಲ್ಲಿ ನಾವು ಸಿಎಸ್‌ಆರ್ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಸೂಚಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಸಮಾವೇಶ -2024ರಲ್ಲಿ ಮಾತನಾಡಿ, ಸಿಎಸ್‌ಆರ್ ನಿಧಿಯನ್ನು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಶಿಕ್ಷಣ ಇಲಾಖೆ ರೂಪಿಸಿರುವ “ಸಮತ್ವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಜನತೆ ತಮ್ಮ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಊರು ತೊರೆದು ಬೆಂಗಳೂರಿಗೆ ವಲಸೆ ಬರುವುದನ್ನು ತಡೆಯಲು ಗ್ರಾಮೀಣ ಶಾಲೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯನ್ನು ಶಾಲೆಗಳಿಗೆ ಬಳಸಲು ತೀರ್ಮಾನಿಸಿದ್ದೇವೆ. ಅದರಂತೆ ರಾಜ್ಯದಲ್ಲಿನ ಉದ್ಯಮಿಗಳು ರಾಜ್ಯದಲ್ಲೇ ತಮ್ಮ ಸಿಎಸ್‌ಆರ್ ನಿಧಿಯನ್ನು ಬಳಸುವಂತೆ ಜಿಲ್ಲಾಧಿಕಾರಿಗಳು ನಿಗಾ ಇಡಬೇಕು. ಜಿಲ್ಲೆ, ತಾಲೂಕು ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನ ಶಾಲೆಗಳಲ್ಲಿ ಮಾತ್ರ ಸಿಎಸ್‌ಆರ್ ನಿಧಿ ಬಳಕೆ ಮಾಡಬೇಕು ಎಂದರು.
ಸಿಎಸ್‌ಆರ್ ನಿಧಿಯಡಿ ಅಭಿವೃದ್ಧಿ ಪಡಿಸಲು ರಾಜ್ಯದಲ್ಲಿ 2,000 ಶಾಲೆಗಳನ್ನು ಗುರುತಿಸಿದ್ದು ಉದ್ಯಮಿಗಳು ಇವುಗಳಲ್ಲಿ ಯಾವುದೇ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದು. ಇಡೀ ಶಾಲೆಯನ್ನು ಅಭಿವೃದ್ಧಿ ಪಡಿಸುವುದು ಅಥವಾ ಮೂಲ ಸೌಕರ್ಯ ಕಲ್ಪಿಸುವುದು ಅಥವಾ ಹೊಸದಾಗಿ ಶಾಲೆಯನ್ನು ಕಟ್ಟಲು ಅವಕಾಶವಿದೆ. ನೀವು ಸರಕಾರಿ ಶಾಲೆಗಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ, ನಿಮಗೆ ಬೇಕಾದ ರೀತಿ ಬ್ರಾಂಡಿಂಗ್ ಮಾಡಿಕೊಳ್ಳಿ ಎಂದು ಹೇಳಿದರು.

                                    