Friday, December 6, 2024

ಕ್ರಿಕೆಟ್ ಬ್ಯಾಟ್ ಕೊಡಿಸಲು ಅಮ್ಮ ಚಿನ್ನದ ಸರವನ್ನೇ ಮಾರಿದಳು; ಈ ಹುಡುಗ ಈಗ ಟೆಸ್ಟ್ ಪ್ಲೇಯರ್!

Most read

ನಂಗೆ ಕ್ರಿಕೆಟ್ ಬ್ಯಾಟ್ ಬೇಕೇಬೇಕು ಎಂದು ಹಠ ಹಿಡಿದು ಕುಳಿತಿದ್ದ ಆ ಹದಿನಾಲ್ಕು ವರ್ಷದ ಹುಡುಗ. ಅಪ್ಪ ಭಾರತೀಯ ಸೇನೆಯಲ್ಲಿ ಯೋಧನಾಗಿದ್ದವ. ದುಬಾರಿ ಬ್ಯಾಟು ಕೊಡಿಸುವಷ್ಟು ಹಣ ಅವನ ಬಳಿ ಇಲ್ಲ. ಮಗ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡು ಹಾಳಾಗಿಹೋಗ್ತಾನೆ ಎಂಬ ಭೀತಿಯೂ ಅವನದು. ತನ್ನ ಹಾಗೇ ಮಗ ಸೇನೆ ಸೇರಲಿ, ಅದು ಇಷ್ಟ ಇಲ್ಲವಾದರೆ ಕನಿಷ್ಠ ಒಂದು ಸರ್ಕಾರಿ ನೌಕರಿಯನ್ನಾದರೂ ಹಿಡಿಯಲಿ ಎಂದು ಹಂಬಲಿಸುತ್ತಿದ್ದ ಜೀವ ಅದು.

ಆದರೆ ಈ ಹುಡುಗ ಕ್ರಿಕೆಟ್ಟನ್ನೇ ಹಚ್ಚಿಕೊಂಡಿದ್ದ. ನಂಗೆ ಬ್ಯಾಟು ಬೇಕು ಕೊಡಿಸಿ ಎಂದು ಅಪ್ಪ-ಅಮ್ಮಂಗೆ ದುಂಬಾಲು ಬಿದ್ದಿದ್ದ. ಕೊನೆಗೆ ನೀವು ಬ್ಯಾಟು ಕೊಡಿಸದೇ ಹೋದರೆ ನಾನು ಮನೆ ಬಿಟ್ಟು ಹೋಗ್ತೀನಿ ಎಂದು ಬೆದರಿಸಿದ. ಮಗ ನಿಜಕ್ಕೂ ಮನೆ ಬಿಟ್ಟು ಹೋದರೆ ಎಂದು ಯೋಚಿಸಿ ಕಂಗಾಲಾಗಿಹೋಗಿದ್ದು ಅವನ ಅಮ್ಮ. ಎಷ್ಟಾದರೂ ತಾಯಿ ಕರುಳಲ್ಲವೇ? ತನ್ನ ಚಿನ್ನದ ಸರವೊಂದನ್ನು ಮಾರಾಟ ಮಾಡಿ ಮಗನಿಗೆ ಬ್ಯಾಟು ಕೊಡಿಸಿದಳು ಅಮ್ಮ.

ಅಮ್ಮ ತನಗಾಗಿ ಎಂಥ ತ್ಯಾಗ ಮಾಡಿದ್ದಾಳೆಂಬುದು ಆ ವಯಸ್ಸಿಗೆ ಆ ಹುಡುಗನಿಗೆ ಗೊತ್ತಿರಲಿಲ್ಲ. ಆದರೆ ಆ ಬ್ಯಾಟನ್ನು ಅವನು ಚಿನ್ನದಂತೆಯೇ ಕಾಪಾಡಿಕೊಂಡ. ಕ್ರಿಕೆಟ್ ಆಡಿಯೇ ಆಡಿದ, ಹಂತಹಂತವಾಗಿ ಮೇಲೆ ಬಂದ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡ.

ಈ ಹುಡುಗನ ಹೆಸರು ಧ್ರುವ್ ಜುರೇಲ್. ವಯಸ್ಸು ಕೇವಲ 22. ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿರುವ ಯುವ ಪ್ರತಿಭೆ. ಅಲ್ಲಿ ಈಗಾಗಲೇ ಕೆ.ಎಲ್.ರಾಹುಲ್, ಕೆ.ಎಸ್.ಭರತ್ ವಿಕೆಟ್ ಕೀಪರ್ ಗಳಾಗಿ ಇದ್ದಾರೆ. ಧ್ರುವ್ ಗೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ವಿರಾಟ್ ಕೊಹ್ಲಿ, ಜಸ್ಪೀತ್ ಬುಮ್ರಾ, ರವಿ ಅಶ್ವಿನ್, ರೋಹಿತ್ ಶರ್ಮಾರಂಥ ಲೆಜೆಂಡರಿ ಆಟಗಾರರ ನಡುವೆ ಭಾರತ ಟೆಸ್ಟ್ ತಂಡದ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವುದು ಸಾಮಾನ್ಯ ವಿಷಯವೇ?

ಧ್ರುವ್ ಚಾಂದ್ ಜುರೇಲ್ ಆಗ್ರಾದ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಅಪ್ಪ ನೇಮ್ ಸಿಂಗ್ ಜುರೇಲ್ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಯೋಧ. ಮಗ ಕ್ರಿಕೆಟ್ ಆಡುವುದು ಅಪ್ಪನಿಗೆ ಇಷ್ಟವಿರಲಿಲ್ಲ. ಆದರೆ ಹುಡುಗನ ಕ್ರಿಕೆಟ್ ಹುಚ್ಚಿಗೆ ಅಪ್ಪ ಮಣಿಯಲೇಬೇಕಾಯಿತು. ಮಗನ ಕನಸು ಈಡೇರಿಸಲು ಅಪ್ಪ-ಅಮ್ಮ ಟೊಂಕ ಕಟ್ಟಿ ನಿಂತರು. ಮಗನನ್ನು ಕ್ರಿಕೆಟ್ ಆಡಲು ಬಿಟ್ಟು ಅವನ ಭವಿಷ್ಯವನ್ನು ಹಾಳು ಮಾಡುತ್ತಿದ್ದಾನೆ ಎಂದು ಬಂಧುಗಳು, ನೆರೆಹೊರೆಯವರು ಹೀಗಳೆದರೂ ಅವರು ಧೃತಿಗೆಡಲಿಲ್ಲ. ಭವಿಷ್ಯ ರೂಪಿಸಿಕೊಳ್ಳಲು ಆಗ್ರಾದಲ್ಲಿ ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಧ್ರುವ್ ನೋಯ್ಡಾಗೆ ಹೋಗುತ್ತಿದ್ದ. ಆಗ್ರಾ-ನೋಯ್ಡಾ ನಡುವೆ ಪ್ರಯಾಣ ಮಾಡುತ್ತ ಮಗ ದೈಹಿಕವಾಗಿ, ಮಾನಸಿಕವಾಗಿ ದುರ್ಬಲ ಆಗುತ್ತಾನೆ ಎಂಬ ಭೀತಿಗೆ ಸಿಲುಕಿದ ಅಮ್ಮ, ನೊಯ್ಡಾದಲ್ಲೇ ಮನೆ ಮಾಡಿ ಅಲ್ಲಿಗೇ ಶಿಫ್ಟ್ ಆಗುತ್ತಾಳೆ.

ಧ್ರುವ್ ಜುರೇಲ್ ಅಪ್ಪ-ಅಮ್ಮನ ತ್ಯಾಗ ಹುಸಿಹೋಗಲು ಬಿಡಲಿಲ್ಲ. ಭಾರತ ಅಂಡರ್ 19 ತಂಡಕ್ಕೆ ಆಡಿದ, ವಿಶ್ವಕಪ್ ಪ್ರತಿನಿಧಿಸಿದ, ವೈಸ್ ಕ್ಯಾಪ್ಟನ್ ಕೂಡ ಆದ. ಇವನು ಆಡಿದ ಅಂಡರ್ 19 ವಿಶ್ವಕಪ್ 2020ರಲ್ಲಿ ಭಾರತ ರನ್ನರ್ ಅಪ್ ಆಯಿತು. ಸಹಜವಾಗಿಯೇ ಐಪಿಎಲ್ ಫ್ರಾಂಚೆಸಿಗಳ ಕಣ್ಣು ಇವನ ಮೇಲೆ ಬಿದ್ದಿತು. ರಾಜಸ್ಥಾನ್ ರಾಯಲ್ಸ್ 20ಲಕ್ಷಕ್ಕೆ ಕೊಂಡುಕೊಂಡಿತು. ಮೊದಲ ಸೀಜನ್ ನಲ್ಲಿ ಆಡುವ ಅವಕಾಶವೇ ಸಿಗಲಿಲ್ಲ. ಆದರೆ ಎರಡನೇ ಸೀಜನ್ ನಲ್ಲಿ ಅವಕಾಶ ದೊರೆಯಿತು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ತಳಕ್ರಮಾಂಕದಲ್ಲಿ ಆಡುವ ಹೊಡಿಬಡಿ ಆಟಗಾರನ ರೂಪದಲ್ಲಿ ಧ್ರುವ್ ಕಾಣಿಸಿಕೊಂಡ. ಹೊಸದಾಗಿ ಬಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವೂ ಇವನಿಗೆ ವರದಾನವಾಗಿ ಬಂದಿತು.

ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆಲ್ಲಲು 30 ಚೆಂಡುಗಳಲ್ಲಿ 74 ರನ್ ಬೇಕಾಗಿದ್ದಾಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದವನು ಧ್ರುವ್ ಜುರೇಲ್. ಅವನಿಗೆ ಅದು ಮೊದಲ ಐಪಿಎಲ್ ಪಂದ್ಯ. ಎಂಟನೆಯ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ ಜುರೇಲ್ ಹದಿನೈದು ಎಸೆತಗಳಲ್ಲಿ 32 ರನ್ ಚೆಚ್ಚಿ ತನ್ನ ತಂಡವನ್ನು ಗೆಲ್ಲಿಸಿಯೇ ಬಿಟ್ಟ. ಅದಾದ ನಂತರ ಹಲವು ಪಂದ್ಯಗಳಲ್ಲಿ ಅವನು ರಾಜಸ್ಥಾನ್ ರಾಯಲ್ಸ್ ಗೆ ಆಸರೆಯಾಗಿ ನಿಂತ. ಐಪಿಎಲ್ ನಲ್ಲಿ ಅವನ ಸ್ಟ್ರೈಕ್ ರೇಟ್ 170 ದಾಟಿತು!

ಜೈಪುರದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು ನೋಡಲು ಜುರೇಲ್ ನ ಅಪ್ಪ-ಅಮ್ಮ ಇಬ್ಬರೂ ಬಂದಿದ್ದರು. ಅಪ್ಪ ಅಮ್ಮನಿಗೆ ಹೇಳಿದ, ನೋಡು ‘ನಿನ್ನ ಚಿನ್ನದ ಸರ ವಸೂಲಿ ಆಯ್ತು!’

More articles

Latest article