“ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೂ ನಾನು ಬಿಜೆಪಿ ತೊರೆಯುವುದಿಲ್ಲ. ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೈಕಮಾಂಡ್ ಹೇಳಿದರೆ ಅದಕ್ಕೂ ಸಿದ್ದ” ಎಂದು ಮೈತ್ರಿ ಟಿಕೆಟ್ ಪ್ರಬಲ ಆಕಾಂಕ್ಷಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ದೆಹಲಿ ಭೇಟಿ ಬಳಿಕ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, “ಬಿಜೆಪಿ ರಾಜ್ಯ ಹಿರಿಯ ಮುಖಂಡರೊಂದಿಗೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡರೂ ಪರವಾಗಿಲ್ಲ. ನನ್ನ ಪಕ್ಷ ನಿಷ್ಠೆ ಅಚಲ” ಎಂದರು.
ಮತ್ತೊಂದೆಡೆ, “ಜೆಡಿಎಸ್ ಚಿಹ್ನೆ ಮೂಲಕ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ತಿಳಿಸಿದರೂ ಕೂಡ ನಾನು ಬದ್ಧ. ಆದರೆ ನಾನು ಬಿಜೆಪಿ ಪಕ್ಷದ ಜೊತೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದ್ದೀನಿ. ನಾನು ಸ್ಪರ್ಧೆ ಮಾಡಬೇಕು ಅನ್ನೋದು ಕಾರ್ಯಕರ್ತರ ಒತ್ತಾಯ. ಇಷ್ಟು ವರ್ಷ ಪಕ್ಷದ ಜೊತೆ ಕೆಲಸ ಮಾಡಿದ್ದೀನಿ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಹಾಗಾಗಿ, ಪಕ್ಷದ ಜೊತೆ ಹೋಗೋದು ಒಳ್ಳೆಯದು ಎಂಬುದು ಹಿತೈಷಿಗಳ ಭಾವನೆ ಎಂದಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಜೆಡಿಎಸ್‌ಗೆ ಟಿಕೆಟ್ ತಕೊಂಡ್ರೆ ನಾನು ಕೆಲಸ ಮಾಡುತ್ತೇನೆ. ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುತ್ತೇವೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.