ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ; 9 ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Most read

ಕಣ್ಣೂರು: ಕೇರಳದಲ್ಲಿ 19 ವರ್ಷಗಳ ಹಿಂದೆ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ತಲಶ್ಶೇರಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಇಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 2005ರ ಅಕ್ಟೋಬರ್ 3ರಂದು ಕನ್ನಪುರಂ ಚುಂಡಾದ 25 ವರ್ಷದ ಸಿಪಿಐ(ಎಂ) ಕಾರ್ಯಕರ್ತ ರಿಜಿತ್ ಶಂಕರನ್ ಅವರ ಮೇಲೆ ಆರ್‌ಎಸ್‌ಎಸ್ ಕಾರ್ಯಕರ್ತರು ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದರು.

ಚುಂಡಾದ ದೇವಸ್ಥಾನದ ಬಾವಿ ಸಮೀಪ ಮಾರಕಾಸ್ತ್ರಗಳನ್ನು ಹಿಡಿದು ಆರೋಪಿಗಳು ಹೊಂಚು ಹಾಕಿ ಕುಳಿತಿರುತ್ತಾರೆ.  ರಿಜಿತ್ ಮನೆ ಕಡೆಗೆ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಘಟನೆಯಲ್ಲಿ ರಿಜಿತ್‌ನ ಮೂವರು ಸ್ನೇಹಿತರು ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಜನವರಿ 4ರಂದು ವಿಚಾರಣೆ ಪೂರ್ಣಗೊಳಿಸಿದ್ದ ತಲಶ್ಶೇರಿಯ ನ್ಯಾಯಾಲಯವು, ಕೊಲೆ (ಸೆಕ್ಷನ್ 302), ಕೊಲೆ ಯತ್ನ (ಸೆಕ್ಷನ್ 307), ಕಾನೂನುಬಾಹಿರ ಸಭೆ (ಸೆಕ್ಷನ್ 143), ಗಲಭೆ (ಸೆಕ್ಷನ್ 147), ಆಯುಧಗಳಿಂದ ಗಾಯಗೊಳಿಸುವುದು (324) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.   ಮತ್ತು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಪ್ರಕರಣದಲ್ಲಿ ಒಟ್ಟು 10 ಮಂದಿ ಆರೋಪಿಗಳು ಭಾಗಿಯಾಗಿದ್ದರು. ಅವರಲ್ಲಿ ಒಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಳಿದ ಆರೋಪಿಗಳಾದ ಸುಧಾಕರನ್ (57), ಜಯೇಶ್ (41), ರಂಜಿತ್ (44), ಅಜೀಂದ್ರನ್ (51), ಅನಿಲ್‌ಕುಮಾರ್ (52), ರಾಜೇಶ್ (46), ಶ್ರೀಕಾಂತ್ (47), ಅವರ ಸಹೋದರ ಶ್ರೀಜಿತ್ (43), ಮತ್ತು ಭಾಸ್ಕರನ್ (67) ಅವರನ್ನು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ.

More articles

Latest article