ಬೆಂಗಳೂರು: ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧಿಕಾರಾವಧಿಯಲ್ಲಿ ನಡೆದಿದ್ದ ಎಲ್ಲ ಕೋವಿಡ್ ಎಲ್ಲ ಹಗರಣಗಳ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೋವಿಡ್ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೋವಿಡ್ ಹಗರಣ ಸಂಬಂಧ ಹಲವು ದೂರು ದಾಖಲಾಗಿದ್ದವು. ಸಚಿವ ಸಂಪುಟ ಸಭೆ ಬಳಿಕ ಕೋವಿಡ್ ಹಗರಣದ ತನಿಖೆಗೆ ಎಸ್ ಐಟಿ ರಚನೆಗೆ ಸಂಪುಟ ಸಮ್ಮತಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಗರಣಗಳ ತನಿಖೆಗೆ ವಿಶೇಷ ತನಿಖಾ ದಳ(ಎಸ್ ಐಟಿ) ರಚಿಸಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರ ಅವಧಿಯಲ್ಲಿ ನೂರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ಸಚಿವರಾದ ಎಚ್.ಕೆ ಪಾಟೀಲ, ಕೆ.ಎನ್.ರಾಜಣ್ಣ ಸೇರಿದಂತೆ ಸಂಪುಟದ ಬಹುತೇಕ ಸಚಿವರು ಎಸ್ ಐಟಿ ರಚಿಸಲು ಆಗ್ರಹಪಡಿಸಿದ್ದಾರೆ. ಸಚಿವರ ಆಗ್ರಹಕ್ಕೆ ಮಣಿದ ಸಿದ್ದರಾಮಯ್ಯ ಅವರು ಎಸ್ ಐಟಿ ರಚನೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅ.10ರಂದು ನಡೆದ ಸಂಪುಟ ಸಭೆಯೂ ಎಸ್ ಐಟಿ ರಚನೆಗೆ ಒಪ್ಪಿಗೆ ನೀಡಿತ್ತು. ಕೋವಿಡ್ -19 ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಖರೀದಿ, ಸೇರಿದಂತೆ ಭಾರಿ ಅವ್ಯವಹಾರ ನಡೆಸಿದೆ ಎಂಬ ಆರೋಪ ಅಂದಿನಿಂದಲೂ ಕೇಳಿ ಬರುತ್ತಿತ್ತು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಹೊಂದಾಣಿಕೆ ಮಡಿಕೊಳ್ಳಬಾರದು ಎಂದೂ ಆಗ್ರಹಪಡಿಸಲಾಗಿದೆ.