“ದೇಶ ನಮ್ಮಆಯ್ಕೆ -ದ್ವೇಷವಲ್ಲ”

Most read

ಪದ್ಮರಾಜ್ ಅವರ ಮಾತಿನಲ್ಲಿ ಇಂತಹ ಹಿಂಸೆಯ ಅಹಂಕಾರದ ಯಾವ ಎಳೆಯೂ ಇಲ್ಲ. ಅವರ ಮಾತಿನಲ್ಲಿ ಸಾಕಷ್ಟು ಧನಾತ್ಮಕ ಚಿಂತನೆ ಇದೆ. ಯುವಕರ ಬಗ್ಗೆ, ಮಹಿಳೆಯರ ಬಗ್ಗೆ ಕನಸುಗಳಿವೆ. ಕಾಳಜಿ ಇದೆ. ಈ ಜಿಲ್ಲೆಯ  ಅಭಿವೃದ್ಧಿಗೆ ಈ ಹಿಂದೆ ದುಡಿದ ಮಹನೀಯರ ಬಗ್ಗೆ ಗೌರವ ಇದೆ. ದ್ವೇಷವಿಲ್ಲದ, ಸಧೃಡ ದೇಶ ಕಟ್ಟುವ ಮಾತನಾಡುವ “ಶ್ರೀ ಪದ್ಮರಾಜ್ ರಾಮಯ್ಯ ಪೂಜಾರಿ” ಅವರಿಗೆ ಅವಕಾಶ ನೀಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಭವಿಷ್ಯದ ಭರವಸೆ ಅವರಾಗ ಬಲ್ಲರು- ಡಾ.ಉದಯಕುಮಾರ್‌ ಇರ್ವತ್ತೂರು

ಜಿಲ್ಲೆಯ ಜನರ ಆಶಯ ನೆಮ್ಮದಿಯ ಬದುಕು, ಮಕ್ಕಳಿಗೆ ಭದ್ರತೆಯ ಭವಿಷ್ಯ ಮತ್ತು ಎಲ್ಲ ವರ್ಗದ ಜನ ಪರಸ್ಪರ ಪ್ರೀತಿ, ಗೌರವದಿಂದ ಕೂಡಿ ಬದುಕುವ ಪರಿಸರ. ಸ್ವಾತಂತ್ರ್ಯದ ನಂತರದ 44 ವರ್ಷದಲ್ಲಿ ಆದಂತಹ ಬದಲಾವಣೆಯನ್ನು ಗಮನಿಸಿದರೆ ಉತ್ತರ ಬಹಳ ಸ್ಪಷ್ಟ.

1991ರ ನಂತರ ಆದ ದೊಡ್ಡ ಬದಲಾವಣೆ ಎಂದರೆ ಸಂವಿಧಾನದ ಆಶಯದಂತೆ ಸರಕಾರ ಕೈಗೊಂಡ ಯೋಜನೆಗಳಿಂದ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾದ ಸಮಾಜದ ಜನರು ಮತ್ತೆ ಹಿಮ್ಮುಖವಾಗಿ ಚಲಿಸಲು ಆರಂಭಿಸಿದ್ದು. 1991 ರ ನಂತರ ಆರ್ಥಿಕ ಸಶಕ್ತೀಕರಣ, ಉದ್ಯೋಗ, ಜೀವನಾಧಾರಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸಿಕೊಡುವ ದೊಡ್ಡ ಕೈಗಾರಿಕೆಗಳು, ಕೃಷಿ ಚಟುವಟಿಕೆಗಳು, ಕಂಡು ಬರುತ್ತಿಲ್ಲ. ಇದರ ಬದಲಿಗೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮಹಿಳೆಯರ ಸುರಕ್ಷತೆ, ಅಧಿಕಾರದ ಸಧ್ಬಳಕೆ…. ಮುಂತಾದ ಸಂವಿಧಾನದತ್ತ ಸದಾಶಯಗಳಿಗೆ ಅಪಾಯ ಒದಗಿ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗುತ್ತಿದೆ. ಜನರ ದಿನನಿತ್ಯದ ಜೀವನ ಕಷ್ಟದಲ್ಲಿದೆ, ಜನ ಕೇಳುವ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ? ಯಾಕೆ ಈ ರೀತಿಯ ಪರಿಸ್ಥಿತಿ ಬಂದಿದೆ ಎಂದು ಸರಕಾರವನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಸರಕಾರದ ಸಮರ್ಥನೆ ಮಾಡುತ್ತಾ ಜನಸಾಮಾನ್ಯರನ್ನೇ ಪ್ರಶ್ನೆ ಮಾಡುವ ವಿಚಿತ್ರ ಸನ್ನಿವೇಶ ಕಂಡು ಬರುತ್ತಿದೆ.

ನಮ್ಮ ಕ್ಷೇತ್ರದ ಪಾರ್ಲಿಮೆಂಟ್ ಸದಸ್ಯರು “ನಮ್ಮ ಆದ್ಯತೆ, ಲವ್ ಜಿಹಾದ್, ಹಲಾಲ್, ಬುರ್ಖಾ, ಗೋರಕ್ಷಣೆ, ಮತಾಂತರ, ಅಭಿವೃದ್ಧಿಯಲ್ಲ ಎಂದು ನೇರವಾಗಿಯೇ ಘೋಷಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆ ಎದುರಾಗಿದೆ. ಈ ಬಾರಿ ನಮ್ಮ ಆಯ್ಕೆ ಯಾರು? ನಮ್ಮ ಆದ್ಯತೆಗಳೇನು? ಸಾಮಾನ್ಯ ಜನ ಆರ್ಥಿಕವಾಗಿ ಸಬಲರಾಗದೇ ಯಾವ ಬದಲಾವಣೆಯೂ ಸಾಧ್ಯವಿಲ್ಲ. “ಯಾರು ತನಗೆ ತಾನೇ ಸಹಾಯ ಮಾಡುವುದಿಲ್ಲವೋ ಅವನಿಗೆ/ಅವಳಿಗೆ ದೇವರು ಕೂಡಾ ಸಹಾಯ ಮಾಡಲಾರ” ಎನ್ನುವ ಮಾತೊಂದಿದೆ. ಇದು ನಿಜ ಕೂಡಾ. ಆರ್ಥಿಕ ಸಬಲರಾಗಬೇಕಾದರೆ, ವಿದ್ಯೆ ಬೇಕು, ಆರೋಗ್ಯ ಬೇಕು. ಇದೆಲ್ಲವೂ ಸಾಧ್ಯವಾಗುವುದು ನಮ್ಮ ಸಂವಿಧಾನದತ್ತ ಹಕ್ಕಿನಿಂದ ಮತ್ತು ಅಧಿಕಾರದಿಂದ. ಅಂತಹ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳುವವರನ್ನು ಯಾವ ಬೆಲೆ ತೆತ್ತಾದರೂ ಅಧಿಕಾರದಿಂದ ದೂರ ಇಡಬೇಕಾದದ್ದು ಪ್ರಜ್ಞಾವಂತರ ಆದ್ಯ ಕರ್ತವ್ಯ.

ಈ ಬಾರಿಯ ದಕ್ಷಿಣ ಕನ್ನಡ ಚುನಾವಣಾ ಕಣದಲ್ಲಿ ಇರುವವರು ಇಬ್ಬರೂ ಹೊಸಬರು. ಸಂತೋಷದ ವಿಷಯವೆಂದರೆ, ಇವರು ಪಾರ್ಲಿಮೆಂಟ್‍ನಲ್ಲಿ ನಡೆಯುವ ಚರ್ಚೆಯನ್ನು ಅರ್ಥಮಾಡಿಕೊಳ್ಳಬಲ್ಲವರು ಮತ್ತು ಚುನಾಯಿತರಾದರೆ ಅವಕಾಶ ಸೃಷ್ಟಿಸಿಕೊಂಡು ಮಾತನಾಡ ಬಲ್ಲವರು ಕೂಡಾ. ಆದರೆ ಏನು ಮಾತಾಡಬಹುದು? ಅವರ ಆದ್ಯತೆಗಳು ಏನು? ಅದರಿಂದ ಜನರಿಗೆ ಏನು ಉಪಯೋಗ ಆದೀತು?

ಈ ಇಬ್ಬರೂ ಇದುವರೆಗೆ ನಡೆದುಕೊಂಡಿರುವ ರೀತಿ, ಮಾಡಿರುವ ಕೆಲಸಗಳು ಮತ್ತು ಚುನಾವಣೆಗೆ ಅಭ್ಯರ್ಥಿಗಳಾದ ನಂತರ ಅವರ ಭಾಷಣಗಳಲ್ಲಿ, ಜನರೊಂದಿಗೆ ನಡೆಸಿದ ಮಾತುಕತೆಯಲ್ಲಿ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ವ್ಯಕ್ತವಾದ ಯೋಚನೆ ಮತ್ತು ಯೋಜನೆಗಳನ್ನು ವಿವೇಚನೆ ಮಾಡಿದರೆ, ಬಹುಷಃ ಅವರ ಮುಂದಿನ ನಡೆ ಏನು ಎನ್ನುವುದನ್ನು ಅರ್ಥಮಾಡಿಕೊಳ್ಳವುದು ಕಷ್ಟವೇನಲ್ಲ.

ಪದ್ಮರಾಜ್‌ ಪೂಜಾರಿ ಮತ್ತು ಬ್ರಿಜೇಶ್‌ ಚೌಟ (ದ.ಕ)

ಉತ್ಸಾಹೀ ಯುವಕ ಶ್ರೀಯುತ ಪದ್ಮರಾಜ ರಾಮಯ್ಯ ಪೂಜಾರಿಯವರು ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವವರು. ಸಮುದಾಯದ ಯುವಕರನ್ನು ಸಂಘಟಿಸಿ ಸಮಾಜವನ್ನು ಸಶಕ್ತಗೊಳಿಸಲು ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಗಾಂಧಿಯಂತಹ ಗಾಂಧಿಯವರ ಗಮನ ಸೆಳೆದ ಶ್ರೀ ನಾರಾಯಣ ಗುರುಗಳು ಹೇಳಿದ್ದು “ಸಂಘಟನೆಯಿಂದ ಶಕ್ತಿ ಮತ್ತು ವಿದ್ಯೆಯಿಂದ ಮುಕ್ತಿ” ಇದನ್ನು ಧ್ಯೇಯ ವಾಕ್ಯವಾಗಿ ಮಾಡಿಕೊಂಡು ‘ಗುರು ಬೆಳದಿಂಗಳು’ ಸಂಸ್ಥೆಯ ಮೂಲಕ ಧರ್ಮವನ್ನು ಒಣ ಆಚರಣೆಯಾಗಿ ಮಾಡದೇ ಅದನ್ನು ಸತ್ಕರ್ಮವಾಗಿಸುವ ಮೂಲಕ ಜನರ ಜೀವನ ಸುಧಾರಿಸಲು ಕೆಲಸ ಮಾಡುತ್ತಿದ್ದಾರೆ. ಅಗತ್ಯವಿರುವವರಿಗೆ ಕಾನೂನು ಸಲಹೆಯನ್ನು ನೀಡಿ ಸಹಾಯ ಹಸ್ತ ಚಾಚುತ್ತಿದ್ದಾರೆ. ನಿಜವಾದ ಅರ್ಥದಲ್ಲಿ ಧರ್ಮದ ಪಾಲನೆ ಆಗಬೇಕಾದದ್ದು ಹೀಗೆಯೇ. ಧರ್ಮದ ಅರ್ಥವನ್ನು ತಿಳಿದವನು ಸಮಾಜದಲ್ಲಿ ಹಿಂಸೆಯನ್ನು, ಅಶಾಂತಿಯನ್ನು ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಯಾಕೆಂದರೆ ಅಂತಹ ಕೆಲಸಗಳು ನಡೆಯುವಲ್ಲಿ ದೇವರು ಇರಲಾರ. ಇದನ್ನು ನಮ್ಮ ಶಾಸ್ತ್ರ, ಪುರಾಣಗಳು ಬಹಳ ಸ್ಪಷ್ಟವಾಗಿಯೇ ಉಲ್ಲೇಖಿಸಿವೆ.

ಡಾ.ಉದಯಕುಮಾರ್‌ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ-ನಕಲಿ ದೇವಮಾನವರು ಮತ್ತು ಮೋದಿಯ ಧಾರ್ಮಿಕ ಗೆಟಪ್ಪಿನ ಮರ್ಮ

More articles

Latest article