ಬಿಜೆಪಿ ಮತ್ತು ಜೆಡಿಎಸ್ ಗಳು ಭ್ರಷ್ಟರೇ ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ಕಾಂಗ್ರೆಸ್ಸಿನ ಭ್ರಷ್ಟತನಕ್ಕೆ ಹೇಗೆ ಸಮರ್ಥನೆಯಾದೀತು? ಅದು ಭ್ರಷ್ಟ ಕಾಂಗ್ರೆಸ್ಸಿನ ಭಂಡ ಸಮರ್ಥನೆಯಷ್ಟೇ ಆಗುತ್ತೆ. ತಪ್ಪು ಯಾರೇ ಮಾಡಿರಲಿ ತನಿಖೆಯಾಗಿ ಶಿಕ್ಷೆ ಆಗಬೇಕು- ಡಾ ಶಶಿಕಾಂತ ಪಟ್ಟಣ, ರಾಮದುರ್ಗ.
ಬಿಜೆಪಿ ಮತ್ತು ಜೆಡಿಎಸ್ ಆಡಳಿತದಲ್ಲಿನ ನಿಗಮ ಮಂಡಳಿ ಹಗರಣಗಳ ಬಗ್ಗೆ ಕೆಲ ಮಾಧ್ಯಮ ಸಂಪಾದಕರು ಹೇಳಿದ್ದಾರೆ. ಇದು ಕಾಂಗ್ರೆಸ್ ಹಗರಣವನ್ನು ಗೌಣ ಮಾಡುವ ಉದ್ದೇಶವೆ? ಅಥವಾ ಅವರು ಭ್ರಷ್ಟರು, ಇವರೂ ಭ್ರಷ್ಟರು ಎಂದು ಭ್ರಷ್ಟರನ್ನು ಸಮರ್ಥಿಸಿಕೊಳ್ಳುವ ಉದ್ದೇಶವೆ ಹೇಗೆ ?
ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ, ಹಗರಣಗಳ ವ್ಯಾಧಿ ಉಲ್ಬಣಿಸಿದೆ. ತಳಮಟ್ಟದಿಂದ ಮೇಲ್ಮಟ್ಟದವರೆಗೆ ಲಂಚಗುಳಿತನ, ಭ್ರಷ್ಟತೆ ಒಂದು ಪೀಡೆಯಾಗಿ ಕಾಡುತ್ತಿದೆ. ಒಂದೇ ತಿಂಗಳಿನಲ್ಲಿ ಬಿಹಾರದ 15 ಸೇತುವೆಗಳು ಕುಸಿದವು. ದೇಶದ ಐದು ವಿಮಾನ ನಿಲ್ದಾಣದ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿದವು. ಹಿಂದಿನ ಬಿಜೆಪಿ ಸರಕಾರದಲ್ಲಿ 300 ಕೋಟಿಗೂ ಅಧಿಕ ಆಕ್ರಮ ಭ್ರಷ್ಟಾಚಾರ ನಡೆದಿದೆ ಎಂದು ಇಂದಿನ ಕಾಂಗ್ರೆಸ್ ಸರಕಾರ ಹೇಳಿದರೆ, 185 ಕೋಟಿ ಹಣ ಮಹರ್ಷಿ ವಾಲ್ಮೀಕಿ ನಿಗಮದಿಂದ ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ. ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣದ ದುರ್ಬಳಕೆಗೆ ನಾಗೇಂದ್ರ ಎಂಬ ಮಂತ್ರಿಯ ತಲೆ ದಂಡವಾಗಿದೆ. ಈಗ ನಡೆದಿರುವ ಅಧಿವೇಶನದಲ್ಲಿ ಬಿಜೆಪಿ ಪಕ್ಷದ ಶಾಸಕರು ಸದನದ ಬಾವಿಗಿಳಿದು ವಿಧಾನಸಭಾಧ್ಯಕ್ಷರ ಕಾರ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ.
ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರವಾಗಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಇವರು ಬಿಜೆಪಿ ಸರಕಾರದ ಶ್ರೀ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಇವರ ಆಡಳಿತ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತಿರುಗೇಟು ನೀಡುತ್ತಿರುವುದು ನ್ಯಾಯ ಸಮ್ಮತವೇ ? ಹಲವು ನಿಗಮ ಮಂಡಳಿಗಳಲ್ಲಿ ಇಂತಹ ಹಗರಣಗಳು ಕಳೆದ 20 ವರ್ಷಗಳಿಂದ ನಡೆಯುತ್ತಾ ಬಂದಿರುವುದು ಒಂದು ಹೊಂದಾಣಿಕೆಯ ರಾಜಕಾರಣವೇ?.
ನಿನ್ನೆಯ ದಿನ ಸದನದಲ್ಲಿ ಶ್ರೀ ಸಿದ್ಧರಾಮಯ್ಯನವರು ಅಶ್ವಥ್ ಬಗ್ಗೆ ʼನಿನ್ನ ಅನೇಕ ಹಗರಣದ ಪ್ರಕರಣಗಳಿವೆ, ಅವುಗಳನ್ನು ಬಯಲಿಗೆ ಎಳೆಯಲೇʼ ಎಂದಿದ್ದು ಕೂಡ ಆ ಸ್ಥಾನಕ್ಕೆ ಒಪ್ಪುವ ಮಾತಲ್ಲ. ಬಿಜೆಪಿ ಆಡಳಿತದ 40 % ಕಮಿಷನ್ ವರ್ಗಾವಣೆ ದಂಧೆ, ಕೃಷಿ ಮಾರುಕಟ್ಟೆ ದೇವರಾಜ್ ಅರಸ್ ನಿಗಮ ಮಂಡಳಿಯಲ್ಲಿ ಭ್ರಷ್ಟಾಚಾರ, ಪಿ ಎಸ್ ಐ ನೇಮಕದಲ್ಲಿನ ಹಗರಣ ಇತ್ಯಾದಿಗಳ ಬಗ್ಗೆ ಏಕೆ ಮುಕ್ತ ತನಿಖೆ ನಡೆಯುತ್ತಿಲ್ಲ?. ಅವರ ಹಗರಣಗಳನ್ನು ಇವರು ಇವರ ಹಗರಣಗಳನ್ನು ಅವರು ಮುಚ್ಚಿ ಹಾಕಿ ಪ್ರಕರಣಕ್ಕೆ ತೆರೆ ಎಳೆಯುವ ಒಂದು ಸುಂದರ ನಾಟಕವಷ್ಟೇ ಇದು. 50,000 ಕೋಟಿ ರೂಪಾಯಿಯಷ್ಟು ದೊಡ್ಡ ಗಣಿ ಹಗರಣಕ್ಕೆ ಎಲ್ಲಿಯ ಶಿಕ್ಷೆ?. ಅಂತಹ ಗಣಿ ಭ್ರಷ್ಟರು ಇಂದು ಶಾಸನ ಸಭೆಯಲ್ಲಿ ಮಾಲೀಕರು. ಏಕೆ ಕನ್ನಡ ಸಾಹಿತ್ಯ ಮತ್ತಿತರ ಅಕಾಡೆಮಿಗಳ ಪ್ರಗತಿಪರ ಸಾಹಿತಿಗಳು ಮೌನ? ಭ್ರಷ್ಟಾಚಾರ ಯಾರೇ ಮಾಡಲಿ ಅದು ಅಪರಾಧವಾಗಿದೆ. ಇನ್ನೂ ಒಂದು ದೊಡ್ಡ ನೋವೆಂದರೆ ಶಾಸನ ಸಭೆಯಲ್ಲಿ ಅತ್ಯಂತ ಕಡಿಮೆ ಹಾಜರಿ. ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಕೆಲ ಶಾಸಕರು ತಮ್ಮ ದಿನ ಭತ್ತ್ಯೆ, ತುಟ್ಟಿ ಭತ್ತ್ಯೆ ಸವಲತ್ತಿಗಾಗಿ ಬೆಳಿಗ್ಗೆ ಹಾಜರಿ ಹಾಕಿ ಬೆಂಗಳೂರಿನಲ್ಲಿ ಜನರ ಹೆಸರಿನಲ್ಲಿ ಮೋಜು ಮಸ್ತಿ ಮಾಡುತ್ತಾರೆ.
ಅನೇಕ ಹಗರಣಗಳು- ಭೂ ಹಗರಣ, ಅರ್ಕಾವತಿ ಹಗರಣ, ಸಹಕಾರ ಹಣಕಾಸು ಸಂಸ್ಥೆ, ಜನರಿಗೆ ಮೋಸ ಮಾಡಿದ ಹಣ ವಂಚನೆ ಮಾಡಿದ ಪ್ರಕರಣಗಳು ಒಂದೇ ಎರಡೇ.. ರಾಜ್ಯದಲ್ಲಿನ ನೀಟ್ ಪರೀಕ್ಷೆಯ ಕಿಂಗ್ ಪಿನ್ ಸಿಕ್ಕಿದ್ದಾರೆ. ಸುದ್ದಿ ಮಾಧ್ಯಮಗಳು ಸುದ್ದಿ ಮಾಡುತ್ತವೆ. ಆದರೆ ಸರಕಾರ ಯಾವುದೇ ನಿರ್ಣಯ ತೆಗೆದುಕೊಳ್ಳದೆ ತನಿಖಾ ತಂಡಕ್ಕೆ ವಹಿಸಿ ಕೈ ತೊಳೆದುಕೊಳ್ಳುತ್ತದೆ. ಹಾಗಾದರೆ ಭ್ರಷ್ಟ ಮುಕ್ತ ಸರಕಾರ ಒಂದು ಹಗಲು ಕನಸೇ ?
ಬಿಜೆಪಿ ಮತ್ತು ಜೆಡಿಎಸ್ ಗಳು ಭ್ರಷ್ಟರೇ ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ಕಾಂಗ್ರೆಸ್ಸಿನ ಭ್ರಷ್ಟತನಕ್ಕೆ ಹೇಗೆ ಸಮರ್ಥನೆಯಾದೀತು? ಅದು ಭ್ರಷ್ಟ ಕಾಂಗ್ರೆಸ್ಸಿನ ಭಂಡ ಸಮರ್ಥನೆಯಷ್ಟೇ ಆಗುತ್ತೆ. ತಪ್ಪು ಯಾರೇ ಮಾಡಿರಲಿ ತನಿಖೆಯಾಗಿ ಶಿಕ್ಷೆ ಆಗಬೇಕು. ಇಲ್ಲಿಯವರೆಗೆ ಭ್ರಷ್ಟತನ, ಹಗರಣಗಳಿಗೆ ಯಾವುದೇ ಶಿಕ್ಷೆ ಆಗಿಲ್ಲ.
ಆರೋಪ, ಹಗರಣಗಳ ವಿಷಯ ಬಂದಾಗ ಹಿಂದಿನ ಸರಕಾರದ ಆರೋಪಗಳನ್ನು ಹಗರಣಗಳನ್ನು ಉಲ್ಲೇಖಿಸುವುದು ಹಾಸ್ಯಾಸ್ಪದ. ಅದು ಖಂಡಿತ ಪರಿಹಾರವಲ್ಲ. ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಅಂತಹ ಶಾಸಕರನ್ನು ಮಂತ್ರಿಗಳನ್ನು ವಜಾ ಗೊಳಿಸಿ ಉನ್ನತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಝೇಂಡಾ ಬೇರೆ ಅಜೆಂಡಾ ಒಂದೆ ಮತದಾರರು ಎಚ್ಚೆತ್ತುಕೊಳ್ಳಬೇಕು
ಡಾ ಶಶಿಕಾಂತ ಪಟ್ಟಣ, ರಾಮದುರ್ಗ
ವೃತ್ತಿಯಲ್ಲಿ ವಿಜ್ಞಾನಿ. ಲೇಖಕರಾಗಿ, ವಚನಸಾಹಿತ್ಯದ ಚಿಂತಕರಾಗಿ, ಕವಿಯಾಗಿ ಪರಿಚಿತರು.
ಇದನ್ನೂ ಓದಿ-ಹಗರಣಗಳ ನೆಪ, ಆರೋಪ ಪ್ರತ್ಯಾರೋಪಗಳ ಪ್ರತಾಪ