ತಮಿಳು ಭಾಷೆಯ ಗೀತರಚನೆಕಾರ ವೈರಮುತ್ತು ರಾಮಸಾಮಿಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ MeToo ಆರೋಪ ಅವರ ಮೇಲಿರುವುದರಿಂದ ಅವರಿಗೆ ಯಾವುದೇ ಕಾರಣಕ್ಕೂ ಜ್ಞಾನಪೀಠ ಕೊಡಕೂಡದು ಎಂದು ವಿರೋಧ ವ್ಯಕ್ತವಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿಗೆ ಸಾಧನೆಯನ್ನು ಮಾತ್ರ ಗುರುತಿಸಬೇಕೇ ಅಥವಾ ಸಾಧಕನ ನೈತಿಕತೆಯನ್ನೂ ಸಹಾ ಪರಿಗಣಿಸಬೇಕೇ? ನೈತಿಕತೆ ಮತ್ತು ಸಾಧನೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯೇ? ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಕನ್ನಡ ಪ್ಲಾನೆಟ್ ಸಂವಾದಕ್ಕೆ ವೇದಿಕೆಯನ್ನು ತೆರೆದಿಡುತ್ತದೆ. ನಿಮ್ಮ ಬರಹಗಳನ್ನು 9972673244 ನಂಬರಿಗೆ ವಾಟ್ಸ್ಯಾಪ್ ಮಾಡಿ. ಮೊದಲಿಗೆ ಶಶಿಕಾಂತ ಯಡಹಳ್ಳಿಯವರ ಬರಹ ಇಲ್ಲಿದೆ.
ಇಪ್ಪತ್ನಾಲ್ಕು ವರ್ಷಗಳ ನಂತರ ತಮಿಳು ಭಾಷೆಯ ಗೀತರಚನೆಕಾರ ವೈರಮುತ್ತು ರಾಮಸಾಮಿಯವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಹಿಂದೆ 1975 ರಲ್ಲಿ ತಮಿಳಿನ ಲೇಖಕ ಪಿ.ವಿ.ಅಕಿಲನ್ ಹಾಗೂ 2002 ರಲ್ಲಿ ಇನ್ನೊಬ್ಬ ತಮಿಳು ಸಾಹಿತಿ ಡಿ.ಜಯಕಾಂತನ್ ರವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು ಇದು ಮೂರನೇ ಸಲ ತಮಿಳರಿಗೆ ದಕ್ಕಿದ ಪ್ರಶಸ್ತಿಯಾಗಿದೆ.
ವೈರಮುತ್ತುರವರು ತಮಿಳು ಸಾಹಿತ್ಯ, ಕವಿತೆ, ಕಾದಂಬರಿ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದು 6000 ಕ್ಕೂ ಹೆಚ್ಚು ತಮಿಳು ಚಿತ್ರಗಳಿಗೆ ಹಾಡುಗಳನ್ನು ಬರೆದು ಜನಪ್ರಿಯರಾಗಿದ್ದಾರೆ. ಬಾಷಾ, ರೊಬೋಟ್, ಶಿವಾಜಿ, ಮುತ್ತು, ಲಿಂಗ ಸೇರಿದಂತೆ ರಜನೀಕಾಂತರವರು ಅಭಿನಯಿಸಿದ ಬಹುತೇಕ ಸಿನೆಮಾಗಳಿಗೆ ವೈರಮುತ್ತುರವರು ಗೀತರಚನೆ ಮಾಡಿದ್ದು ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಗೆಯೇ ಕಮಲ್ ಹಾಸನ್ ರವರು ಅಭಿನಯಿಸಿದ ವಿಕ್ರಂ, ಅನ್ಬೇ ಶಿವಂ, ಪಂಚತಂತ್ರ, ದಶಾವತಾರಂ, ಹೇರಾಮ್ ಸೇರಿದಂತೆ ಹಲವಾರು ಸಿನೆಮಾಗಳಿಗೆ ಗೀತರಚನೆ ಮಾಡಿದ್ದಾರೆ. ವಿಜಯ್, ಅಜಿತ್ ಕುಮಾರ, ಸೂರ್ಯ, ಪ್ರಶಾಂತ್, ವಿಶಾಲ್ ಮುಂತಾದ ಸ್ಟಾರ್ ನಟರ ಸಿನಿಮಾಗಳಿಗೂ ಲಿರಿಕ್ಸ್ ಬರೆದಿದ್ದಾರೆ. ಮಣಿರತ್ನಂ, ಇಳೆಯರಾಜಾ, ದೇವಾ ಮುಂತಾದ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ತಮಿಳು ಭಾಷಾ ಸಿನೆಮಾ ರಂಗದಲ್ಲಿ ವೈರಮುತ್ತು ಗೀತರಚನೆಕಾರರಾಗಿ ಜನಪ್ರಿಯತೆ ಪಡೆದಿದ್ದಾರೆ. ಇಂತಹ ಸುಪ್ರಸಿದ್ಧ ಲಿರಿಕ್ಸ್ ರೈಟರ್ ಗೆ ಈಗ ಜ್ಞಾನಪೀಠ ಪ್ರಶಸ್ತಿ ಬಂದಿದ್ದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರು ಅಭಿನಂದಿಸಿದ್ದಾರೆ, ರಜನೀಕಾಂತ, ಕಮಲಹಾಸನ್ ರವರು ಸ್ವಾಗತಿಸಿದ್ದಾರೆ. ಎರಡೂವರೆ ದಶಕಗಳ ನಂತರ ತಮಿಳು ಭಾಷೆಗೆ ಜ್ಞಾನಪೀಠ ಬಂದಿತಲ್ಲ ‘ಇದು ತಮಿಳುನಾಡಿಗೆ ಸಂದ ಗೌರವ’ ಎಂದು ತಮಿಳಿಗರು ಹಾಗೂ ಸಿನೆಮಾಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಆದರೆ ಈ ಸಂಭ್ರಮದ ಜೊತೆಗೆ ದೊಡ್ಡ ಮಟ್ಟದಲ್ಲಿ ವಿವಾದ ಭುಗಿಲೆದ್ದಿದೆ. ವೈರಮುತ್ತುರವರಿಗೆ ಯಾವುದೇ ಕಾರಣಕ್ಕೂ ಜ್ಞಾನಪೀಠ ಕೊಡಕೂಡದು ಎಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ವಿರೋಧಕ್ಕೆ ಕಾರಣಗಳು :
Me Too ಆರೋಪ:

ಹೌದು… ವೈರಮುತ್ತುರವರ ಮೇಲೆ ಒಬ್ಬರಲ್ಲ ಇಬ್ಬರಲ್ಲ 17 ಮಹಿಳೆಯರು MeToo ಆರೋಪ ಮಾಡಿದ್ದಾರೆ. “ತಮ್ಮ ಮೇಲೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ, ಸಹಕರಿಸು ಎಂದು ಒತ್ತಾಯಿಸಿದ್ದಾರೆ, ಅವಕಾಶ ಕೊಡುವುದಾಗಿ ಹೇಳಿ ಸಹಕರಿಸಲು ಬಲವಂತಪಡಿಸಿದ್ದಾರೆ’ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪಿತ ಘಟನೆಗಳೆಲ್ಲವೂ ನಡೆದಿದೆ ಎನ್ನಲಾಗಿದ್ದು 1990 ರಿಂದ 2000 ಇಸ್ವಿಯಲ್ಲಿ. ಯಾವಾಗ ಸಂತ್ರಸ್ತ ಮಹಿಳೆಯರಿಂದ 2018 ರಲ್ಲಿ ಮೀಟೂ ಚಳುವಳಿ ಆರಂಭವಾಯ್ತೋ ಆಗ ಹದಿನೇಳು ಯುವತಿಯರಿಂದ ವೈರಮುತ್ತುರವರಿಂದ ತಾವೂ ಅನುಚಿತ ವರ್ತನೆಗೆ ಬಲಿಯಾಗಿದ್ದೇವೆ ಎಂಬ ಆರೋಪ ಕೇಳಿಬಂತು.
ಚಿನ್ಮಯಿ ಶ್ರೀಪಾದ ಎಂಬ ಹಿನ್ನೆಲೆ ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ 2005 ರಲ್ಲಿ ತನ್ನ ಮೇಲೂ ವೈರಮುತ್ತುರವರು ಸಹಕರಿಸಲು ಒತ್ತಾಯಿಸಿದರು ಎಂದು ತೀವ್ರವಾಗಿ ಆರೋಪಿಸಿದರು. 17 ಮಹಿಳೆಯರಲ್ಲಿ ನಾಲ್ವರು ಮಾಧ್ಯಮದ ಮುಂದೆ ಬಂದು ತಮ್ಮ ಅನುಭವ ಹೇಳಿಕೊಂಡಿದ್ದರು. ಆಗ ಇದು ದೊಡ್ಡ ಸುದ್ದಿ ಆಗಿ ಸಂಚಲನವನ್ನು ಹುಟ್ಟು ಹಾಕಿತ್ತು. ‘”ಈ ಆರೋಪಗಳೆಲ್ಲಾ ಸುಳ್ಳು, ನಿಜವಾಗಿದ್ದರೆ ಕೇಸು ದಾಖಲಿಸಲಿ’ ಎಂದು ವೈರಮುತ್ತು ಸವಾಲು ಹಾಕಿದ್ದರು. ಆದರೆ ಆರೋಪ ಮಾಡಿದ ಯಾರೂ ಯಾವ ಕೇಸನ್ನೂ ದಾಖಲಿಸಲಿಲ್ಲ, ಮೊಕದ್ದಮೆ ಹೂಡಲಿಲ್ಲ, ಯಾವ ಕೋರ್ಟಿನಿಂದಲೂ ವೈರಮುತ್ತು ವಿರುದ್ಧ ತೀರ್ಪು ಬರಲೂ ಇಲ್ಲ.
ಆದರೆ ವೈರಮುತ್ತುರವರ ಮೇಲೆ ಮೀಟೂ ಆರೋಪ ಮಾಡಿದ ಚಿನ್ಮಯಿರವರನ್ನು ಡಬ್ಬಿಂಗ್ ಆರ್ಟಿಸ್ಟ್ ಯೂನಿಯನ್ ಹೊರಗೆ ಹಾಕಿತು. ತಮಿಳು ಚಿತ್ರರಂಗ ಪರೋಕ್ಷವಾಗಿ ಅವರನ್ನು ಬ್ಯಾನ್ ಮಾಡಿತು. ಆರೋಪ ಮಾಡಿದ ಅನೇಕರಿಗೆ ಸಿನೆಮಾ ಕ್ಷೇತ್ರದಲ್ಲಿ ಕೆಲಸ ಸಿಗದೇ ಅವರ ಭವಿಷ್ಯವೇ ಹಾಳಾಯಿತು. ಸಂತ್ರಸ್ತರಿಗೆ ಸಹಾನುಭೂತಿ ತೋರಬೇಕಾಗಿದ್ದ ಪುರುಷ ಪ್ರಧಾನ ತಮಿಳು ಚಿತ್ರರಂಗ ಆರೋಪ ಮಾಡಿದವರನ್ನೇ ನಿರ್ಲಕ್ಷಿಸಿತು. ಜನಪ್ರಿಯ ಗೀತರಚನೆಕಾರನ ಬೆಂಬಲಕ್ಕೆ ನಿಂತಿತು. ಅಲ್ಲಿಗೆ ವೈರಮುತ್ತುರವರ ಮೇಲಿನ ಮೀಟೂ ಆರೋಪ ತಣ್ಣಗಾಗಿತ್ತು.
ಈಗ ಯಾವಾಗ ವೈರಮುತ್ತುರವರಿಗೆ ಜ್ಞಾನಪೀಠ ಪ್ರಶಸ್ತಿ ಅನೌನ್ಸ್ ಆಯ್ತೋ ಆಗ ಮೀಟೂ ಮುನ್ನಲೆಗೆ ಬಂದು ಮಹಿಳಾ ಸಂಘಟನೆಗಳಿಂದ ವಿರೋಧ ವ್ಯಕ್ತವಾಗತೊಡಗಿತು. ಅನೈತಿಕ ವ್ಯಕ್ತಿಗೆ ಅಂತಹ ದೊಡ್ಡ ಪ್ರಶಸ್ತಿ ಕೊಡಬಾರದು ಎನ್ನುವ ಪ್ರತಿರೋಧ ಕೇಳಿಬಂತು. ಟಿ.ಎಂ.ಕೃಷ್ಣ, ಮೀನಾ ಕಂದಸ್ವಾಮಿಯಂತವರು ಘೋಷಿಸಿದ ಜ್ಞಾನಪೀಠವನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.
ತಮಿಳು ಲೇಖಕರ ವಿರೋಧ
ವೈರಮುತ್ತುರವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಗೊತ್ತಾದ ಕೂಡಲೇ ತಮಿಳಿನ ಕೆಲವು ಪ್ರಸಿದ್ದ ಸಾಹಿತಿಗಳು ತಮ್ಮ ವಿರೋಧ ವ್ಯಕ್ತಪಡಿಸಿದರು. “ವೈರಮುತ್ತು ಒಬ್ಬ ಹಾಸ್ಯಾಸ್ಪದ ಗೀತರಚನೆಕಾರ, ನಿಜವಾದ ಕವಿಯಲ್ಲ. ಇದು ತಮಿಳು ಸಾಹಿತ್ಯಕ್ಕೆ ಅನ್ಯಾಯ” ಎಂದು ತಮಿಳು ಭಾಷೆಯ ಪ್ರಮುಖ ಲೇಖಕ ಜಯಮೋಹನ್ ರವರು ಆರೋಪಿಸಿ ಪ್ರಶಸ್ತಿ ವಾಪಸ್ ಪಡೆಯಲು ಜ್ಞಾನಪೀಠ ಸಮಿತಿಗೆ ಪತ್ರ ಬರೆದರು. ” ಇದು ಆಧುನಿಕ ತಮಿಳು ಸಾಹಿತ್ಯಕ್ಕಾದ ಅವಮಾನ, ಚಿತ್ರರಂಗದಿಂದ ಬಂದವರಿಗೆ ಜ್ಞಾನಪೀಠ ನೀಡುವುದು ಸಾಹಿತ್ಯವನ್ನು ಅವಮಾನಿಸುತ್ತದೆ” ಎಂದು ಇತರ ತಮಿಳು ಲೇಖಕರು ತಮ್ಮ ಅಸಮಾಧಾನ ಹೊರಹಾಕಿದರು. ಸಾಹಿತ್ಯಕ್ಷೇತ್ರದಲ್ಲಿ ಸಾಧನೆ ಮಾಡದ ತಮಗೆ ಜ್ಞಾನಪೀಠ ಸಿಗಲಿಲ್ಲವಲ್ಲಾ ಎನ್ನುವ ಅಸೂಯೆಗೋ ಇಲ್ಲಾ ಸಿನೆಮಾ ಹಾಡು ಬರೆಯುವವನಿಗೆ ಪ್ರಶಸ್ತಿ ಬಂತಲ್ಲಾ ಎನ್ನುವ ಆಕ್ರೋಶಕ್ಕೋ ಕೆಲವಾರು ಸಾಹಿತಿಗಳು ವೈರಮುತ್ತುರವರಿಗೆ ಸಿಕ್ಕ ಜ್ಞಾನಪೀಠವನ್ನು ವಿರೋಧಿಸುತ್ತಿದ್ದಾರೆ.
ಇದು ಕೇವಲ ತಮಿಳಿನಲ್ಲಿ ಮಾತ್ರವಲ್ಲಾ, ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಯ ಸಾಹಿತ್ಯ ಕ್ಷೇತ್ರದವರು ಚಲನಚಿತ್ರ ಗೀತೆಗಳನ್ನು ಸಾಹಿತ್ಯದ ಭಾಗವೆಂದು ಒಪ್ಪಿಕೊಳ್ಳುತ್ತಿಲ್ಲ. ಸಿನೆಮಾಗಳಿಗೆ ಹಾಡು ಬರೆಯುವವರನ್ನು ಒಂದು ರೀತಿಯಲ್ಲಿ ಅಸ್ಪೃಶ್ಯರನ್ನಾಗಿಯೇ ನೋಡಲಾಗುತ್ತಿದೆ. ಅದೊಂದು ಆಶುದ್ಧ ಸಾಹಿತ್ಯ, ಬಾಕಿ ಎಲ್ಲಾ ಶುದ್ಧ ಸಾಹಿತ್ಯ ಎನ್ನುವ ನಂಬಿಕೆಯೂ ಇದಕ್ಕೆ ಕಾರಣವಾಗಿದೆ. ಸಿನೆಮಾಕ್ಕಾಗಿಬರೆಯುವ ಸೃಜನಶೀಲ ಹಾಡುಗಳೂ ಸಾಹಿತ್ಯವೇ ಎಂದು ಜಯಂತ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಕವಿರಾಜ್ ರಂತವರು ಹೇಳುತ್ತಲೇ ಬಂದಿದ್ದಾರೆ. ಆದರೆ ವ್ಯಾವಹಾರಿಕವಾಗಿ ಬರೆದ ಜನಪ್ರಿಯ ಹಾಡುಗಳು ಕಾವ್ಯವೂ ಅಲ್ಲ, ಭಾವಗೀತೆಗಳೂ ಅಲ್ಲ, ಅಸಲಿಗೆ ಸಾಹಿತ್ಯವೇ ಅಲ್ಲ ಎನ್ನುವುದು ಬಹುತೇಕ ಸಾಹಿತಿಗಳ ಅಭಿಪ್ರಾಯವಾಗಿದೆ.
ಅದಕ್ಕೆ ಕಾರಣಗಳೂ ಇವೆ. ಮೊದಲಿನಂತೆ ಅನುಭವಿಸಿ ಬರೆದ ಹಾಡುಗಳಿಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೊದಲೇ ಆಯ್ದ ಸಂಗೀತದ ಟ್ಯೂನ್ ಗಳಿಗೆ ಹೊಂದಾಣಿಕೆಯಾಗುವ ಶಬ್ದಗಳನ್ನು ಬಳಸಿ ಹಾಡು ರಚಿಸಲಾಗುತ್ತದೆ. ಹೀಗಾಗಿ ಇಂತಹ ಹಾಡುಗಳಲ್ಲಿ ಅನುಭವ ಜನ್ಯ ಕ್ರಿಯಾಶೀಲತೆ ಇರುವುದಿಲ್ಲವಾದ್ದರಿಂದ ಸಿನೆಮಾ ಹಾಡುಗಳು ಸಾಹಿತ್ಯವಲ್ಲ ಎಂಬುದು ಸಾಹಿತಿಗಳ ಅನಿಸಿಕೆ. ಅವರ ಆರೋಪಕ್ಕೆ ತಕ್ಕಂತೆ ಹಲವಾರು ಜನಪ್ರಿಯ ಸಿನೆಮಾ ಹಾಡುಗಳಲ್ಲಿ ದ್ವಂದ್ವಾರ್ಥ, ಅಶ್ಲೀಲತೆ, ವ್ಯಕ್ತಿ ವೈಭವೀಕರಣಗಳೇ ಹೆಚ್ಚಾಗಿರುತ್ತವೆ. ಹಾಗಂತ ಅತ್ಯುತ್ತಮವಾಗಿ ಮೂಡಿ ಬಂದ ಭಾವಪೂರ್ಣ ಸಿನೆಮಾ ಹಾಡುಗಳೂ ಮೂಡಿಬಂದಿವೆ. ಉದಾಹರಣೆಗೆ ವಿ.ಉದಯಶಂಕರರವರ ಅಂದಿನ ಕಾಲದ ಹಾಡುಗಳು, ಜಯಂತ ಕಾಯ್ಕಿಣಿಯವರ ಇಂದಿನ ಕಾಲದ ಹಾಡುಗಳನ್ನು ಗಮನಿಸಬಹುದಾಗಿದೆ. ಹೀಗಾಗಿ ಸಾರಾಸಗಟಾಗಿ ಸಿನೆಮಾ ಗೀತೆಗಳನ್ನು ಸಾಹಿತ್ಯವೇ ಅಲ್ಲಾ ಎಂದು ತಿರಸ್ಕರಿಸುವುದೂ ಸೂಕ್ತವಲ್ಲ. ಆದರೆ ಅದನ್ನು ಸಾಹಿತ್ಯ ವಲಯ ಒಪ್ಪುವುದಿಲ್ಲ. ಹೀಗಾಗಿ ಸಾಹಿತ್ಯ ಕ್ಷೇತ್ರಕ್ಕೆ ಕೊಡಮಾಡುವ ಶ್ರೇಷ್ಠ ಪ್ರಶಸ್ತಿಯೊಂದು ಸಿನೆಮಾ ಗೀತರಚನೆಕಾರ ವೈರಮುತ್ತುವಿಗೆ ಬಂದಿದ್ದನ್ನು ಸಾಹಿತ್ಯ ಕ್ಷೇತ್ರದವರು ಒಪ್ಪುತ್ತಿಲ್ಲ. ಚಲನಚಿತ್ರದ ಜನಪ್ರಿಯ ಸಾಹಿತ್ಯ ಮತ್ತು ಗಂಭೀರ ಸಾಹಿತ್ಯದ ಗೊಂದಲ ಮೊದಲಿನಿಂದಲೂ ಇದೆ, ಈಗಲೂ ಮುಂದುವರೆಯುತ್ತಿದೆ.
ಮೊದಲು ಅಂದರೆ 17 ನೇ ಪ್ರಶಸ್ತಿಯವರೆಗೂ ಜ್ಞಾನಪೀಠವನ್ನು ಆಯ್ದ ನಿರ್ಧಿಷ್ಟ ಶ್ರೇಷ್ಠ ಕೃತಿಯೊಂದಕ್ಕೆ ಕೊಡಲಾಗುತ್ತಿತ್ತು. ಉದಾ. ಕುವೆಂಪುರವರ ರಾಮಾಯಣ ದರ್ಶನಂ. ಆದರೆ 18ನೇ ಪ್ರಶಸ್ತಿಯಿಂದ ಸಮಗ್ರ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಆಧರಿಸಿ ಜ್ಞಾನಪೀಠ ಕೊಡಲಾಗುತ್ತದೆ.
ರಾಜಕೀಯ ಹಸ್ತಕ್ಷೇಪ
ಈ ಸಲ ಜ್ಞಾನಪೀಠ ಪ್ರಶಸ್ತಿಯನ್ನು ಎಷ್ಟೋ ವರ್ಷಗಳ ನಂತರ ತಮಿಳು ಭಾಷೆಗೆ ಕೊಟ್ಟಿರುವುದರ ಹಿಂದೆ ಕೇಂದ್ರ ಸರಕಾರದ ರಾಜಕೀಯ ಹಿತಾಸಕ್ತಿ ಇದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಚುನಾವಣೆ ಇರುವುದರಿಂದ ತಮಿಳಿಗರನ್ನು ಓಲೈಸಿಕೊಳ್ಳಲು ಜ್ಞಾನಪೀಠ ಘೋಷಿಸಲಾಗಿದೆ ಎಂಬುದು ಹಲವರ ಆರೋಪ. ತಮಿಳುನಾಡಿನ ಜನ ಸಿನೆಮಾ ಕ್ಷೇತ್ರದ ಬಹುದೊಡ್ಡ ಅಭಿಮಾನಿಗಳಾಗಿದ್ದರಿಂದ ಜನಪ್ರಿಯ ಸಿನೆಮಾ ಗೀತರಚನೆಕಾರನಿಗೆ ಜ್ಞಾನಪೀಠ ಕೊಡಲಾಗಿದೆ ಎಂಬುದು ಬಹುತೇಕರ ಅನಿಸಿಕೆ. ಇನ್ನೊಂದು ಆಯಾಮದ ಆರೋಪವೂ ಇದೆ.
ಆದರೆ ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರಕಾರವಾಗಲೀ ಇಲ್ಲಾ ಯಾವುದೇ ಸರಕಾರಿ ಕೃಪಾ ಪೋಷಿತ ಸಂಸ್ಥೆಗಳಾಗಲೀ ಕೊಡಮಾಡುವುದಿಲ್ಲ. ಆ ಪ್ರಶಸ್ತಿಗೂ ಸರಕಾರಗಳಿಗೂ ಸಂಬಂಧವೇ ಇಲ್ಲ. ಜ್ಞಾನಪೀಠ ಎನ್ನುವುದು ಖಾಸಗಿ ಸಂಸ್ಥೆಯೊಂದು ಕೊಡುತ್ತಿರುವ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾಗಿದೆ.
ಜ್ಞಾನಪೀಠ ಪ್ರಶಸ್ತಿಯ ಹಿನ್ನೆಲೆ

1944 ರಲ್ಲಿ ಉದ್ಯಮಪತಿಯಾಗಿದ್ದ ಸಾಹು ಶಾಂತಿಪ್ರಸಾದ್ ಜೈನ್ ಹಾಗೂ ಅವರ ಪತ್ನಿ ರಮಾ ಜೈನ್ ರವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿ ಅದಕ್ಕೆ ಬೇಕಾದ ಹಣಕಾಸನ್ನು ಠೇವಣಿ ಇಡುತ್ತಾರೆ. ‘ಜ್ಞಾನಪೀಠ ಟ್ರಸ್ಟ್’ ಮೂಲಕ ಈ ಖಾಸಗಿ ಪ್ರಶಸ್ತಿಯನ್ನು 1961 ರಿಂದ ಕೊಡಲಾಗುತ್ತಿದೆ. ಭಾರತದ 22 ಭಾಷೆಗಳು ಹಾಗೂ ಇಂಗ್ಲೀಷ್ ಭಾಷೆಯ ಸಾಹಿತ್ಯದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜ್ಞಾನಪೀಠವನ್ನು ಕೊಡಲಾಗುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ 11 ಲಕ್ಷ ರೂಪಾಯಿಗಳ ನಗದನ್ನು ಹಾಗೂ ಸರಸ್ವತಿ ಪ್ರತಿಮೆಯನ್ನು ಕೊಟ್ಟು ಸನ್ಮಾನಿಸಲಾಗುತ್ತದೆ. ನಗದು ಮೊತ್ತ ದೊಡ್ಡದಾಗಿರುವುದರಿಂದ ಈ ಪ್ರಶಸ್ತಿಯ ಮೌಲ್ಯವೂ ದೊಡ್ಡದಾಗಿದೆ.
ಜ್ಞಾನಪೀಠದ ಆಯ್ಕೆ ಹೇಗೆ?
ಮೂರು ಹಂತಗಳಲ್ಲಿ ಜ್ಞಾನಪೀಠಕ್ಕೆ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ.
1. ನಾಮ ನಿರ್ದೇಶನ : ಜ್ಞಾನಪೀಠ ವೆಬ್ ಸೈಟಿನಲ್ಲಿ ಅರ್ಜಿ ಫಾರಂ ಡೌನ್ ಲೋಡ್ ಮಾಡಿಕೊಂಡು ಪ್ರಶಸ್ತಿಗೆ ಅರ್ಹರಾದವರನ್ನು ನಾಮ ನಿರ್ದೇಶನ ಮಾಡಬಹುದಾಗಿದೆ.
2. ಭಾಷಾ ಸಲಹಾ ಸಮಿತಿ : ಪ್ರತಿ ಭಾಷೆಗೆ 3 ಜನ ಸ್ಕಾಲರ್ ಗಳನ್ನು ಅಥವಾ ವಿಮರ್ಶಕರ ಸಮಿತಿಯನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಹೊಸ ಸಮಿತಿ ರಚಿಸಲಾಗುತ್ತದೆ. ನಾಮನಿರ್ದೇಶನಗಳನ್ನು ಹಾಗೂ ಯೋಗ್ಯತೆಯನ್ನು ಪರಿಶೀಲಿಸುವ ಸಮಿತಿ ಆಯಾ ಭಾಷೆಯ ಸಾಧಕರನ್ನು ಶಿಫಾರಸ್ಸು ಮಾಡುತ್ತದೆ.
3. ಜ್ಞಾನಪೀಠ ಆಯ್ಕೆ ಮಂಡಳಿ: ಇದಕ್ಕೆ ಮೌಲ್ಯಮಾಪನ ಮಂಡಳಿ ಎಂದೂ ಕರೆಯುತ್ತಾರೆ. 7 ರಿಂದ 11 ಜನ ಸಾಹಿತ್ಯ ಕ್ಷೇತ್ರದ ದಿಗ್ಗಜರು ಈ ಮಂಡಳಿಯ ಸದಸ್ಯರಾಗಿರುತ್ತಾರೆ. ಇವರ ಅವಧಿ 3 ವರ್ಷಗಳಾಗಿದ್ದು ಮತ್ತೆರಡು ವರ್ಷ ವಿಸ್ತರಿಸಬಹುದಾಗಿದೆ. ಎಲ್ಲಾ 23 ಭಾಷಾ ಸಮಿತಿಗಳ ಶಿಫಾರಸ್ಸುಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆಯನ್ನು ಘೋಷಿಸಲಾಗುತ್ತದೆ. ಒಂದು ಸಾರಿ ಪ್ರಶಸ್ತಿ ಪಡೆದ ಭಾಷೆಯ ಸಾಧಕರನ್ನು ಮುಂದಿನ ಎರಡು ವರ್ಷಗಳ ಕಾಲ ಪರಿಗಣಿಸಲಾಗುವುದಿಲ್ಲ.
ಹೀಗಾಗಿ ಯಾವುದೇ ಬಾಹ್ಯ ಹಸ್ತಕ್ಷೇಪ ಇಲ್ಲದೇ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೂ ರಾಜಕೀಯ ಪ್ರಭಾವ ಹಾಗೂ ಪ್ರಭಾವಶಾಲಿಗಳ ಲಾಬಿ ಎನ್ನುವ ಆರೋಪ ಆಗಾಗ ಕೇಳಿಬರುತ್ತಲೇ ಇರುತ್ತದೆ. ಈಗಾಗಲೇ 59 ಸಾಹಿತ್ಯದ ಸಾಧಕರಿಗೆ ಜ್ಞಾನಪೀಠ ವನ್ನು ಕೊಡಲಾಗಿದೆ. ತಮಿಳು ಭಾಷೆಯ ವೈರಮುತ್ತುರವರಿಗೆ ಸಂದಿರುವುದು 60 ನೇ ಜ್ಞಾನಪೀಠ. ಈ ಪ್ರಶಸ್ತಿ ಸರಕಾರಿ ಸ್ವಾಮ್ಯಕ್ಕೆ ಒಳಪಡದಿದ್ದರೂ ಜ್ಞಾನಪೀಠ ಮಂಡಳಿಯ ವಿನಂತಿಯ ಮೇರೆಗೆ ರಾಷ್ಟ್ರಪತಿಗಳು ಇಲ್ಲವೇ ಸರಕಾರದ ಉನ್ನತ ಸ್ಥಾನದಲ್ಲಿರುವವರು ಜ್ಞಾನಪೀಠವನ್ನು ಪ್ರದಾನ ಮಾಡುತ್ತಾರೆ.
ಈಗ ಅಸಲಿ ವಿಷಯಕ್ಕೆ ಬರೋಣ. ಜ್ಞಾನಪೀಠ ಪ್ರಶಸ್ತಿಗೆ ಸಾಧನೆಯನ್ನು ಮಾತ್ರ ಗುರುತಿಸಬೇಕಾ ಅಥವಾ ಸಾಧಕನ ನೈತಿಕತೆಯನ್ನೂ ಸಹಾ ಪರಿಗಣಿಸಬೇಕಾ ಎನ್ನುವ ಪ್ರಶ್ನೆ ಕಾಡುತ್ತದೆ. ವೈರಮುತ್ತುರವರ ಸಿನಿ ಸಾಹಿತ್ಯದ ಸಾಧನೆಯನ್ನು ಗುರುತಿಸಿದ ಜ್ಞಾನಪೀಠ ಮಂಡಳಿ ಪ್ರಶಸ್ತಿಯನ್ನು ಘೋಷಿಸಿದೆ. ಅವರ ಮೇಲಿರುವ ಆರೋಪಗಳೇನು, ಅವರ ನೈತಿಕತೆ ಹಾಗೂ ಅನೈತಿಕತೆಯ ಮೌಲ್ಯ ಅಪಮೌಲ್ಯಗಳೇನು ಎಂದು ಪರಿಗಣಿಸಲು ಆಯ್ಕೆ ಸಮಿತಿಯಲ್ಲಿ ಅವಕಾಶವಿಲ್ಲ. ವೈರಮುತ್ತು ರವರಿಂದ ಅನೇಕ ಮಹಿಳೆಯರಿಗೆ ಅಪಚಾರ ಆಗಿದ್ದರೆ ಅದಕ್ಕೆ ಕಾನೂನಾತ್ಮಕ ಕ್ರಮಗಳಿವೆ. ವಿಚಾರಣೆ ನಡೆದು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದರೆ ಪ್ರಶಸ್ತಿ ಕೊಟ್ಟಿರುವುದನ್ನು ವಿರೋಧಿಸಬಹುದಾಗಿದೆ. ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಧೈರ್ಯವನ್ನೂ ಸಂತ್ರಸ್ತೆಯರು ತೆಗೆದುಕೊಳ್ಳಬೇಕಾಗಿದೆ. ಈ ಮೀಟು ಆರೋಪಗಳಿಗೆ ಸಾಕ್ಷಿ ಆಧಾರಗಳ ಕೊರತೆ ಇರುತ್ತದೆ. ಇಬ್ಬರ ನಡುವೆ ನಡೆಯುವ ಒತ್ತಾಯದ ಬಲವಂತ ಸಹಕಾರದ ಕುರಿತ ಮಾತುಗಳಿಗೆ ಸೂಕ್ತ ಸಾಕ್ಷ್ಯಗಳಿರುವುದಿಲ್ಲ. ಹೀಗಾಗಿ ಮೊಕದ್ದಮೆಗಳು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಹಾಗಂತ ಮಹಿಳೆಯರ ಗೌರವಕ್ಕೆ ಚ್ಯುತಿ ಬಂದರೆ ವಿರೋಧಿಸಲೇ ಬೇಕಾಗುತ್ತದೆ.
ವೈರಮುತ್ತುರವರು ನಿಜವಾಗಿಯೂ ಸ್ತ್ರೀಪೀಡಕ ಆಗಿದ್ದರೆ ಅದನ್ನು ವಿರೋಧಿಸಲಿ. ಆದರೆ ಅದಕ್ಕೂ ಅವರ ಸಾಧನೆಗೆ ಒಲಿದಿರುವ ಜ್ಞಾನಪೀಠಕ್ಕೂ ತಳುಕು ಹಾಕುವುದು ಸೂಕ್ತ ಎನ್ನಿಸುವಂತಿಲ್ಲ. ಪ್ರತಿರೋಧಕ್ಕೆ ಒಳಗಾಗಿ ದಕ್ಕಿದ ಜ್ಞಾನಪೀಠವನ್ನು ರದ್ದುಗೊಳಿಸಿದ್ದೇ ಆದರೆ ತಮಿಳು ಭಾಷೆಗೆ ಅನ್ಯಾಯವಾಗುತ್ತದೆ. ಹೀಗಾಗಿ ನೈತಿಕತೆ ಮತ್ತು ಸಾಧನೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಚರ್ಚೆಯ ಸಂಗತಿಯಾಗಿದೆ. ನಡೆ ನುಡಿ ಸಿದ್ಧಾಂತ ಆಗಬೇಕೆನ್ನುವುದು, ಬರೆದಂತೆ ಬದುಕ ಬೇಕೆನ್ನುವುದು ಆದರ್ಶವಾದ ಹಾಗೂ ಅಪೇಕ್ಷಣೀಯ. ಆದರೆ ವಾಸ್ತವ ಹಾಗಿಲ್ಲ. ಹೀಗಾಗಿ ಯಾವುದೇ ಸಾಧಕ ತಪ್ಪು ಮಾಡಿದ್ದರೆ ಅದನ್ನು ವಿರೋಧಿಸಬೇಕು, ಸಾಧನೆಗೆ ಸೂಕ್ತ ಮನ್ನಣೆ ಸಿಕ್ಕಾಗ ಅಭಿನಂದಿಸಬೇಕು. ಜ್ಞಾನಪೀಠ ಪ್ರಶಸ್ತಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸಿನೆಮಾ ಗೀತೆರಚನಕಾರನಿಗೆ ಸಾಹಿತ್ಯದ ಅತ್ಯುನ್ನತ ಗೌರವ ಪ್ರಶಸ್ತಿ ಜ್ಞಾನಪೀಠ ಸಿಕ್ಕಿದ್ದಕ್ಕೆ ಸಂಭ್ರಮಿಸಬೇಕು. ನಮ್ಮ ನೆರೆ ರಾಜ್ಯದ ಸಾಧಕನಿಗೆ ಇಂತಹುದೊಂದು ಉನ್ನತ ಪ್ರಶಸ್ತಿ ದೊರಕಿದ್ದಕ್ಕೆ ಹೆಮ್ಮೆಪಡಬೇಕು. ಈಗ ಕನ್ನಡ ಚಲನಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ಬರೆದ ಜಯಂತ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ರವರು ಜ್ಞಾನಪೀಠದ ಕನಸನ್ನು ಕಾಣಬಹುದು. ವೈರಮುತ್ತುರವರ ಸಾಧನೆಯ ಮಾನದಂಡದ ಪ್ರಕಾರ ಕನ್ನಡಕ್ಕೆ ಎಂಟರ ನಂತರ ಮತ್ತೊಂದು ಜ್ಞಾನಪೀಠ ದೊರಕಬಹುದೆಂಬ ಆಸೆಯನ್ನು ಇಟ್ಟುಕೊಳ್ಳಬಹುದು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು

