ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ಶೀಘ್ರ : ಡಿಸಿಎಂ ಡಿಕೆ ಶಿವಕುಮಾರ್

Most read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬೆಂಗಳೂರಲ್ಲಿ ಸುರಂಗ ಮಾರ್ಗವನ್ನು ಮಾಡಿಯೇ ಮಾಡುತ್ತೇವೆ. ಟನಲ್‌ ರಸ್ತೆಗೆ ಭೂಮಿ ಬೇಕಾಗಿದ್ದು, ಟೆಂಡರ್ ಕರೆಯುತ್ತಿದ್ದೇವೆ. ಸುರಂಗ ಮಾರ್ಗ ನಿರ್ಮಾಣ ಮಾಡಲು ಸೇನೆಗೆ ಸಂಬಂಧಿಸಿದ ಜಾಗ ಮತ್ತು ಖಾಸಗಿ ಜಮೀನಿನ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಷ್ಟು ಭೂಮಿ ಅವಶ್ಯಕತೆ ಇದೆ ಎಂದು ಚರ್ಚಿಸಿ ನಿರ್ಧಾರ ಮಾಡಲಾಗುವುದು. ಭೂಮಿಯ ಅವಶ್ಯಕತೆಯ ಕುರಿತು ನಾವು ಸೇನೆಗೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಖಾಸಗಿ ಮಾಲೀಕರು ಮತ್ತು ಮೆಟ್ರೋಗೆ ಸೇರಿದ ಆಸ್ತಿಗಳೂ ಸಹ ಇದ್ದು, ಅವುಗಳನ್ನು ನಾವು ಸ್ವಾಧೀನಪಡಿಸಿಕೊಳ್ಳಲು ಪ್ರಕ್ರಿಯೆ ಆರಂಭವಾಗಿದೆ ಎಂದರು.

ಸುರಂಗವನ್ನು ಭೂಮಿಯ ಒಳಗೆ ನಿರ್ಮಿಸುವುದರಿಂದ ಮೇಲ್ಮೈ ಸ್ಥಳ ಮತ್ತು ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ. ಈ ಯೋಜನೆಯು NH-7 ಅನ್ನು NH-14 ನೊಂದಿಗೆ ಸಂಪರ್ಕಿಸಲಿದ್ದು, ರಾಜ್ಯ ಸರ್ಕಾರವು ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ ಎಂದು ಅವರು ತಿಳಿಸಿದರು.

ಹೆಬ್ಬಾಳ ಸಮೀಪದ ಎಸ್ಟೀಮ್‌ ಮಾಲ್‌ನಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ವರೆಗೆ 16.5 ಕಿ.ಮೀ. ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಾಣ ಆಗಲಿದೆ. ಎಸ್ಟೀಮ್‌ ಮಾಲ್‌, ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಲಾಲ್‌ಬಾಗ್‌ ಮೂಲಕ ಸಿಲ್ಕ್ ಬೋರ್ಡ್‌ ಜಂಕ್ಷನ್‌ ವರೆಗೆ ಸುರಂಗ ಮಾರ್ಗ ಸಾಗಲಿದೆ. ಮೆಟ್ರೊ ಸುರಂಗ ಮಾರ್ಗ ಹಾದು ಹೋಗಿರುವೆಡೆ ರಸ್ತೆ ಸುರಂಗವು 180 ಅಡಿಯಷ್ಟು ಆಳದಲ್ಲಿ ಸಾಗಲಿದೆ ಎಂದು ತಿಳಿದುಬಂದಿದೆ.

More articles

Latest article