ಸಂವಿಧಾನ ರಕ್ಷಣೆ ಮಾಡಿದರೆ ಜನರ ರಕ್ಷಣೆ ಮಾಡಿದಂತೆ. ಆದ್ದರಿಂದ ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಗೃಹ ಕಛೇರಿಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಸಭೆಯಲ್ಲಿ ಮಾತನಾಡಿದ ಅವರು ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ವಿಕಸನಕ್ಕೆ ಸಂವಿಧಾನವನ್ನು ಬಲಪಡಿಸಬೇಕಾಗಿದೆ ಎಂದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 75 ನೇ ವರ್ಷದ ಸಂವಿಧಾನ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಂವಿಧಾನದ ಜಾಗೃತಿ ಬಗೆಗೆ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡುತಿದ್ದು, ಸಂವಿಧಾನ ತಜ್ಞರು,ವಿಚಾರವಾದಿಗಳಿಂದ ಭಾಷಣ ಹಾಗೂ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜನವರಿ 24 ಹಾಗೂ 25 ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇನ್ನೂ ರಾಜ್ಯದಲ್ಲಿನ 6 ಸಾವಿರ ಗ್ರಾ.ಪಂ.ಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದ ಚಿತ್ರ ವಾಹನಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ ಎಂದು ಹೇಳಿದರು.
ಸಂವಿಧಾನದ ಅಂಗೀಕಾರದ ಮುನ್ನಾದಿನ ಅಂಬೇಡ್ಕರರು ಮಾಡಿದ ಅಮೋಘ ಭಾಷಣವನ್ನೂ ಪುಸ್ತಕ ಒಳಗೊಂಡಿರುವುದರೊಂದಿಗೆ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಹವರೂ ಸೇರಿದಂತೆ ಸಂವಿಧಾನ ರಚನಾ ಸಭೆಯ ಮುತ್ಸದ್ದಿಗಳ ಮಾತುಗಳು ಪುಸ್ತಕದಲ್ಲಿರಲಿವೆ ಎಂದರು.
ಪ್ರಮುಖವಾಗಿ ಸಂವಿಧಾನ ಜಾರಿಗೆ ಬಂದ 75 ವರ್ಷಗಳಲ್ಲಿ ಸಂವಿಧಾನದ ಆಶಯ ಹಾಗೂ ಧ್ಯೇಯೋದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಅಂಶವೂ ಪ್ರಮುಖವಾಗಿ ಚರ್ಚೆಯಾಗಲಿದೆ. ಸಂವಿಧಾನವನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಹವಣಿಸುತಿದ್ದು ,ಸಂವಿಧಾನಕ್ಕೆ ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂತಹವರಿಗೆ ಸಂವಿಧಾನ ಜಾಥಾ ಉತ್ತರ ಕೊಡಲಿದೆ ಎಂದರು.