ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಿಸಿ ರಂಗೇರಿದೆ. ಟಿಕೆಟ್ ಹಂಚಿಕೆಯಿಂದಾಗಿ ಎಲ್ಲೆಡೆ ಬಂಡಾಯದ ಬಿಸಿ ಹೆಚ್ಚಾಗಿದ್ದು, ಬಿಜೆಪಿಗೆ ಇದು ಮುಳ್ಳಾಗಿ ಪರಿವರ್ತನೆಯಾಗಿದೆ. ಕೆಲವು ಬಿಜೆಪಿ ಹಿರಿಯ ನಾಯಕರೇ ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ತುಮಕೂರಲ್ಲಿ ಟಿಕೆಟ್ ನಿರೀಕ್ಷೆಯಲ್ಲಿ ಇದ್ದ ಜೆಸಿ ಮಾಧುಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿದ್ದು, ತುಮಕೂರು ಟಿಕೆಟ್ ವಿ. ಸೋಮಣ್ಣ ಅವರ ಪಾಲಾಗಿದೆ. ಇದರಿಂದಾಗಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇರ ನೇರ ಫೈಟ್ ಆಗಿ ಕಡೆಗೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸೋಲು ಅನುಭವಿಸಿದ್ದರು. ಜೆಡಿಎಸ್‌ನ ಸಿಬಿ ಸುರೇಶ್ ಬಾಬು ವಿರುದ್ಧ ಪರಾಭವಗೊಂಡಿದ್ದ ಮಾಧುಸ್ವಾಮಿ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ, ಬಿಜೆಪಿ ನಾಯಕರು ಬೆಂಗಳೂರಿನ ವಿ ಸೋಮಣ್ಣ ಅವರಿಗೆ ಮಣೆ ಹಾಕಿದ್ದು, ಮಾಧುಸ್ವಾಮಿ ಅವರನ್ನು ಕೆರಳಿಸಿದೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಧುಸ್ವಾಮಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಹಲವು ಬಾರಿ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದರು. ಯಡಿಯೂರಪ್ಪನವರೇ ಕಾಂಗ್ರೆಸ್ ಜೊತೆ ಸೇರಿಕೊಂಡು ನನ್ನನ್ನು ಸೋಲಿಸಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು.
ಅಸಮಾಧಾನಗೊಂಡಿರುವ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಕೊರಟಗೆರೆ ಕಾಂಗ್ರೆಸ್ ಶಾಸಕ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕುಟುಂಬ ಹಾಗೂ ಬೆಂಬಲಿಗರ ಜೊತೆ ಚರ್ಚಿಸಿ ಇನ್ನು ನಾಲ್ಕು ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸೋಮಣ್ಣ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ತುಮಕೂರಿನಲ್ಲಿರುವ ಬಹುಸಂಖ್ಯಾತವಾಗಿ ಲಿಂಗಾಯತರಲ್ಲದ ಕಾರಣ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದರ ನಡುವೆ ನೊಳಂಬ ಲಿಂಗಾಯತ ಸಮುದಾಯದ ಜೆಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾದರೆ ಕಾಂಗ್ರೆಸ್‌ಗೆ ಶಕ್ತಿ ಬರಲಿದೆ ಮುದ್ದಹನುಮೇಗೌಡ ಆರಾಮವಾಗಿ ಗೆದ್ದು ಬರಲು ಸಾಧ್ಯವಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.