ದೇಶಾದ್ಯಂತ ಜಾತಿವಾರು ಜನಗಣತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿ ಜಾತಿ-ಉಪಜಾತಿಗಳ ಸಮಾಜಿಕ ಆರ್ಥಿಕ ಸ್ಥಿತಿಗತಿಗಳನ್ನು ಅಧಿಕೃತ ದಾಖಲೆಗಳ ಮೂಲಕ ಅಧ್ಯಯನ ನಡೆಸಿ, ಹಿಂದೆ ಉಳಿದವರ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು 2024ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಎಐಸಿಸಿ ಕಚೇರಿಯಲ್ಲಿಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು 2024 ಲೋಕಸಭಾ ಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಶೇ.50ರ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿ ತರಲಾಗುವುದು. ಎಸ್.ಸಿ, ಎಸ್ ಟಿ. ಓಬಿಸಿ ಸಮುದಾಯಗಳಿಗೆ ಸಮರ್ಪಕ ಪ್ರಮಾಣದಲ್ಲಿ ಮೀಸಲಾತಿ ಒದಗಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಇಡಬ್ಲ್ಯು ಎಸ್ (ಆರ್ಥಿಕವಾಗಿ ಹಿಂದುಳಿದವರು) ಕೋಟಾ ಅಡಿಯಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಎಲ್ಲ ಜಾತಿ ಮತ್ತು ಸಮುದಾಯಗಳಿಗೆ ತಾರತಮ್ಯವಿಲ್ಲದೆ ಜಾರಿಗೊಳಿಸಲಾಗುವುದು ಎಂದು ಪ್ರಣಾಳಿಕೆ ಹೇಳಿದೆ. ಈಗ ಇರುವ ನಿಯಮದಲ್ಲಿ ಕೆಲವು ಜಾತಿಗಳಷ್ಟೇ ಇಡಬ್ಲ್ಯುಎಸ್ ಲಾಭವನ್ನು ಪಡೆದುಕೊಳ್ಳುತ್ತಿವೆ.
ಎಲ್ಲ ಬ್ಯಾಕ್ ಲಾಗ್ ಖಾಲಿ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಹಾಗೆಯೇ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ನಿಯಮಿತ ಉದ್ಯೋಗಗಳನ್ನು ಕಾಂಟ್ರಾಕ್ಟ್ ಹುದ್ದೆಗಳನ್ನಾಗಿ ಪರಿವರ್ತಿಸುವುದನ್ನು ನಿಲ್ಲಿಸಲಾಗುವುದು ಎಂದು ಪ್ರಣಾಳಿಕೆ ತಿಳಿಸಿದೆ.