ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ಮೈತ್ರಿಕೂಟದ ನಾಯಕರು ಮತ್ತು ಕಾರ್ಯಕರ್ತರು, ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆ ಎಂದು ಅವರು ದೂರಿದರು.
ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲಾ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆಯೇ ಇಲ್ಲ. ಶನಿವಾರವೂ ನಮ್ಮ ಕಾರ್ಯಕ್ರಮಕ್ಕೆ ಬಂದವರ ವಿಡಿಯೋ ಮಾಡಿಕೊಂಡು, ಅಧಿಕಾರಿಗಳಿಗೆ ಹೇಳಿ ಕೇಸ್ ಹಾಕಿಸಲು ಮುಂದಾಗಿದ್ದಾರೆ. ದಬ್ಬಾಳಿಕೆ ಮೂಲಕ ಇವರು ಚುನಾವಣೆ ನಡೆಸಲು ಮುಂದಾಗಿದ್ದಾರೆ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ ಎಂದು ಕೇಂದ್ರ ಸಚಿವರು ಗುಡುಗಿದರು.
ನಾನು ಇಡೀ ದೇಶಕ್ಕೆ ಮಂತ್ರಿ: ನಾನು ಮಂಡ್ಯಕ್ಕೆ ಮಾತ್ರ ಸೀಮಿತ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ ನಾನು ದೇಶ ಸುತ್ತಿ ಇಲಾಖೆಯ ಕೆಲಸ ಮಾಡುತ್ತಿದ್ದೇನೆ. ಬೇಕಿದ್ದರೆ ನನ್ನ ಪ್ರವಾಸದ ಕಾರ್ಯಕ್ರಮಗಳ ಪಟ್ಟಿ ನೀಡಲಿ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸಗಢ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಪ್ರವಾಸ ಮಾಡಿದ್ದೇನೆ. ದೆಹಲಿಯಲ್ಲಿ ಸಮಯ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದೇನೆ. ಇವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ನಾನು ಕರ್ನಾಟಕಕ್ಕೆ ಬರಲೇಬಾರದಾ ? ನನ್ನನ್ನು ಗೆಲ್ಲಿಸಿದ ಜನರ ಕಷ್ಟ ಕೇಳಬಾರದೇ ? ನಾನು ಕರ್ನಾಟಕಕ್ಕೆ ಬಂದರೆ ಇವರು ನಿದ್ದೆಗೆಡುತ್ತಾರೆ ಎಂದು ಕಿಡಿಕಾರಿದರು.