Tuesday, December 10, 2024

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

Most read

ಬೆಂಗಳೂರು: ಕೋವಿಡ್-19  ಹಗರಣದ ತನಿಖೆ ನಡೆಸಿ ವರದಿ ನೀಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರನ್ನು ಅವಹೇಳನ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಕಾಂಗ್ರೆಸ್ ನಾಯಕರ ನಿಯೋಗ ದೂರು ನೀಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದ ನಿಯೋಗ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.

ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಪ್ರಹ್ಲಾದ ಜೋಷಿ ಹೇಳಿಕೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದೇವೆ. ನ್ಯಾಯಾಂಗ ತನಿಖಾ ಆಯೋಗ ಹಾಗೂ ನ್ಯಾ. ಕುನ್ಹಾ ಬಗ್ಗೆ ನಿಂದಿಸಿ ಕೆಟ್ಟದಾಗಿ ಜೋಶಿ ಮಾತನಾಡಿದ್ದಾರೆ ಎಂದರು. ಕುನ್ಹಾ ನ್ಯಾಯಾಧೀಶರಲ್ಲ, ಪೊಲಿಟಿಕಲ್‌ ಏಜೆಂಟ್‌ ಎಂದು ಜರಿದಿದ್ದಾರೆ. ದುರುದ್ಧೇಶದಿಂದ ಮತ್ತು ಚುನಾವಣಾ ದೃಷ್ಟಿಯಿಂದ ಕುನ್ಹಾ ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದು ಸರಿಯಾದ ಮಾತಲ್ಲ.

ಜೋಷಿ ಸಾಮಾನ್ಯ ವ್ಯಕ್ತಿಯಲ್ಲ. ಅವರು ಕೇಂದ್ರ ಸಚಿವರು. ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು ಮತು ಆಯೋಗಗಳನ್ನು ಕುರಿತು ವೈಯಕ್ತಿಕ ಟೀಕೆ ಮಾಡಬಾರದು. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದ ನಡೆಯಾಗಿರುತ್ತದೆ. ಕಾನೂನು ಬಾಹಿರವೂ ಹೌದು. ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಪಡಬಾರದು ಎಂದರು.

ಡಿ. ಕುನ್ಹಾ ಆಗಸ್ಟ್‌ ನಲ್ಲಿ ಮಧ್ಯಂತರ ವರದಿ ನೀಡಿದ್ದಾರೆ. ಈಗ ಉಪ ಚುನಾಣೆ ನಡೆಯುತ್ತಿದೆ. ಅವರ ವರದಿಗೂ ಉಪ ಚುನಾವನೆಗೂ ಯಾವುದೇ ಸಂಬಂಧವಿಲ್ಲ. ಆಯೋಗದ ಮೇಲೆ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ತನಿಖಾ ಹಂತದಲ್ಲಿ ಯಾರೊಬ್ಬರೂ ಈ ರೀತಿ ಮಾತನಾಡಬಾರದು ಎಂದರು.

ರಾಜ್ಯಪಾಲರಿಗೆ ಎಲ್ಲ ಬೆಳವಣಿಗೆಗಳನ್ನೂ ವಿವರಿಸಿದ್ದೇವೆ. ನ್ಯಾಯಮೂರ್ತಿಗಳ ಮಾನ ಹರಣ ಮಾಡಿದ ಜೋಷಿ ವಿರುದ್ಧ ಕ್ರಮ ಜರುಗಿಸಬೇಕು. ರಾಷ್ಟ್ರಪತಿಗಳ ಗಮನಕ್ಕೂ ತರಬೇಕು ಎಂದು ಒತ್ತಾಯಿಸಿದ್ಧೇವೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಕೇಂದ್ರ ಸಚಿವರಲ್ಲಿದೆ. ಕೂಡಲೇ ಪ್ರಹ್ಲಾದ ಜೋಷಿ ಕ್ಷಮೆ ಯಾಚಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಆಗ್ರಹಪಡಿಸಿದರು.

More articles

Latest article