ಅಧಿಕಾರದಾಟದಲಿ ಅತಿಯಾಯ್ತು ಕಾಂಗ್ರೆಸ್ ಬಣ ಬಡಿದಾಟ

Most read

ಬಣ ಬಡಿದಾಟ, ಒಳಜಗಳ ಹಾಗೂ ಪರಸ್ಪರ ಕೆಸರೆರಚಾಟಗಳಿಂದ ಸೋಲು ಕಂಡರೂ ಕಾಂಗ್ರೆಸ್ ಪಕ್ಷ ಹಿಂದಿನ ತಪ್ಪುಗಳಿಂದ ಪಾಠ ಕಲಿಯದೆ ಈಗಲೂ ಅದನ್ನೇ ಸಂಪ್ರದಾಯವೇನೋ ಎನ್ನುವಂತೆ ಮುಂದುವರೆಸಿರುವುದು ಮತ್ತೆ ಮತದಾರರಲ್ಲಿ ಭ್ರಮನಿರಸನವನ್ನುಂಟು ಮಾಡಿದೆ. ತನ್ನದೇ ಒಳಜಗಳಗಳ ಭಾರಕ್ಕೆ ಕಾಂಗ್ರೆಸ್ ಕುಸಿದಿದ್ದೇ ಆದರೆ ಅದು ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ರಹದಾರಿ‌ ಹಾಕಿಕೊಟ್ಟಂತಾಗುತ್ತದೆ. ಹಾಗಾಗದಿರಲಿ ಎನ್ನುವುದೇ ಪ್ರಜ್ಞಾವಂತರ ಆಶಯವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಧರ್ಮದ್ವೇಷ ರಾಜಕಾರಣವನ್ನೇ ಉಸಿರಾಡುವ  ಮತೀಯವಾದಿ ಬಿಜೆಪಿ ಪಕ್ಷವನ್ನು ಆಡಳಿತದಿಂದ ದೂರವಿಡಲು ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಭೂತಪೂರ್ವ ಬಹುಮತದಿಂದ ಆಧಿಕಾರಕ್ಕೆ ತಂದರು. ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಬದಲು ಪಕ್ಷದ ಒಳಗೆ ಬಣ ಜಗಳ, ಆರೋಪ ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿರುವುದು ಆರಿಸಿ ಕಳುಹಿಸಿದ ಜನರಿಗೆ ನಿರಾಸೆಯನ್ನುಂಟು ಮಾಡಿದೆ.

ಭಾರಿ ಬಹುಮತದಿಂದ ಅಧಿಕಾರಕ್ಕೇರಿದಾಗಲೆಲ್ಲಾ ಮದವೇರಿದ ಆನೆಗಳಂತೆ ನಾಯಕರು ತಮ್ಮ ತಮ್ಮಲ್ಲಿಯೇ ಗುದ್ದಾಡುವುದು, ಒಬ್ಬರ ಹಿಂದೆ ಇನ್ನೊಬ್ಬರು ಕತ್ತಿ ಮಸೆಯುವುದು ಕಾಂಗ್ರೆಸ್ಸಿಗೆ ಅಂಟಿದ ರೋಗದಂತಿದೆ. ಎಲ್ಲರೂ ಒಂದಾಗಿ ಉತ್ತಮ ಆಡಳಿತವನ್ನು ಕೊಡೋಣ ಎನ್ನುವ ಬದ್ಧತೆ ಇಲ್ಲಿ ಯಾರಿಗೂ ಇಲ್ಲವಾಗಿ ಕೇವಲ ಸ್ವಾರ್ಥ ರಾಜಕಾರಣ ಅತಿಯಾಗಿದೆ. 

ಸಿದ್ದರಾಮಯ್ಯ

ಹಿಂದೆ 1989 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 178 ಸ್ಥಾನಗಳ ಬಹುಮತ ಬಂದಾಗಲೂ ಈ ಸ್ವಾರ್ಥ ರಾಜಕಾರಣ ಗರಿಗೆದರಿತ್ತು. ಒಂದು ವರ್ಷ ಕಳೆಯುವುದರೊಳಗೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿ ಬಂಗಾರಪ್ಪನವರನ್ನು ಸಿಎಂ ಮಾಡಲಾಗಿತ್ತು. ನಂತರ ಅವರನ್ನೂ ಕಿತ್ತಾಕಿ ವೀರಪ್ಪ ಮೊಯಿಲಿಯವರನ್ನು ಸಿಎಂ ಮಾಡಲಾಯ್ತು. ಹೀಗೆ ಸಿಎಂ ಬದಲಾವಣೆಗಳ ಹಿಂದಿರುವ ಸ್ವಾರ್ಥ ರಾಜಕಾರಣಕ್ಕೆ ಬೇಸತ್ತ ಮತದಾರರು 1994 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಕೇವಲ 36 ಸ್ಥಾನಗಳಿಗೆ ಕಟ್ಟಿಹಾಕಿದರು. 

ಮುಂದೆ 1999 ರಲ್ಲಿ ಎಸ್.ಎಂ.ಕೃಷ್ಣರವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ 132 ಸ್ಥಾನಗಳ ಬಹುಮತ ಪಡೆದು ಅಧಿಕಾರದ ಪಟ್ಟ ಗಿಟ್ಟಿಸಿತಾದರೂ ಒಳಜಗಳಗಳು ನಿಲ್ಲಲಿಲ್ಲ. ನಾಯಕರುಗಳ ನಡುವಿನ ಮುಸುಕಿನ ಗುದ್ದಾಟಗಳು ಬಹಿರಂಗವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಇದರಿಂದ ಮತ್ತೆ ಕುಪಿತಗೊಂಡ  ಮತದಾರರು 2004 ರಲ್ಲಿ ಕಾಂಗ್ರೆಸ್ಸನ್ನು ಕೇವಲ 65 ಸ್ಥಾನಗಳಿಗೆ ಕಟ್ಟಿಹಾಕುವ ಮೂಲಕ ಪಾಠ ಕಲಿಸಿದ್ದರು.

ಬಣ ಬಡಿದಾಟ, ಒಳಜಗಳ ಹಾಗೂ ಪರಸ್ಪರ ಕೆಸರೆರಚಾಟಗಳಿಂದ ಸೋಲು ಕಂಡರೂ ಕಾಂಗ್ರೆಸ್ ಪಕ್ಷ ಹಿಂದಿನ ತಪ್ಪುಗಳಿಂದ ಪಾಠ ಕಲಿಯದೆ ಈಗಲೂ ಅದನ್ನೇ ಸಂಪ್ರದಾಯವೇನೋ ಎನ್ನುವಂತೆ ಮುಂದುವರೆಸಿರುವುದು ಮತ್ತೆ ಮತದಾರರಲ್ಲಿ ಭ್ರಮನಿರಸನವನ್ನುಂಟು ಮಾಡಿದೆ. 

ಬಿಜೆಪಿ ಪಕ್ಷದ ಬಣಜಗಳ ಹಾಗೂ ದುರಾಡಳಿತಕ್ಕೆ ಬೇಸತ್ತ ಕರ್ನಾಟಕದ ಮತದಾರರು 2023 ರ ವಿಧಾನಸಭಾ ಚುನಾವಣೆಯಲ್ಲಿ 138 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಅವಕಾಶವನ್ನು ತಂದುಕೊಟ್ಟರು. ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರರಂತಹ ನಾಯಕರಿಂದ ಉತ್ತಮ ಆಡಳಿತವನ್ನು ನಿರೀಕ್ಷಿಸಿದ್ದರು. ಆದರೆ ಯಾವಾಗ ಸಿಎಂ ಸಿದ್ದರಾಮಯ್ಯನವರದ್ದೊಂದು ಹಾಗೂ ಡಿಸಿಎಂ ಡಿಕೆಶಿ ಯವರದ್ದೊಂದು ಹೀಗೆ ಎರಡು ಶಕ್ತಿ ಕೇಂದ್ರಗಳು ಕಾಂಗ್ರೆಸ್ ಪಕ್ಷದೊಳಗೆ ಸಕ್ರಿಯವಾದವೋ ಆಗ ಒಳ ಏಟಿನ ರಾಜಕಾರಣ ಶುರುವಾಯಿತು. ಅದ್ಯಾರು ಹೇಳಿದರೋ ಗೊತ್ತಿಲ್ಲಾ ಸಿಎಂ ಪದವಿ 50:50 ಮ್ಯಾಚ್ ಎಂದು. ಎರಡೂವರೆ ವರ್ಷ ಸಿದ್ದರಾಮಯ್ಯನವರು ಸಿಎಂ ಹಾಗೂ ಬಾಕಿ ಉಳಿದ ಎರಡೂವರೆ ವರ್ಷ ಡಿಕೆಶಿ ಸಿಎಂ ಎಂದು ಪುಕಾರು ಮಾಡಲಾಯ್ತು. ಸುದ್ದಿ ಮಾಧ್ಯಮಗಳಂತೂ ಈ 50:50 ಹಂಚಿಕೆ ಕುರಿತು ಉಪ್ಪು ಕಾರ ಹುಳಿ ಹಾಕಿ ಪುಂಖಾನುಪುಂಖವಾಗಿ ಪ್ರಚಾರ ಮಾಡುತ್ತಲೇ ಬಂದವು. ಆದರೆ ಈ ಪವರ್ ಶೇರಿಂಗ್ ಪಾಲಿಟಿಕ್ಸ್ ಬಗ್ಗೆ ಯಾವ ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯೂ ಹೇಳಿಯೇ ಇಲ್ಲ. ಸ್ವತಃ ಸಿಎಂ ಹಾಗೂ ಡಿಸಿಎಂ ಗಳೇ ಬಾಯಿ ಬಿಟ್ಟಿಲ್ಲ. ಆದರೂ ಸುದ್ದಿ ಮಾಧ್ಯಮಗಳ ಸುದ್ದಿಯನ್ನೇ ಬಹುತೇಕರು ನಂಬಿದ್ದಾರೆ. ಈ ಸುದ್ದಿಯ ಸುತ್ತಲೇ ಕರ್ನಾಟಕದ ರಾಜಕಾರಣ ಸುತ್ತುತ್ತಿದೆ. ಕಾಂಗ್ರೆಸ್ ಪಕ್ಷ ಎರಡು ಬಣಗಳಾಗಿ ಹೋಳಾದಂತಿದೆ. ಸಿದ್ದು ಬಳಗದ ಸಮರ್ಥಕರು ಡಿಕೆಶಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬಾರದು ಎಂದು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ದಲಿತ ಸಿಎಂ ಎನ್ನುವ ದಾಳವನ್ನೂ ಉರುಳಿಸಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯನವರ ಕುಮ್ಮಕ್ಕು ಇದೆ ಎಂದು ಡಿಕೆಶಿ ಬಣ ವಟಗುಟ್ಟುತ್ತಿದೆ. 

ಡಿಕೆ ಶಿವಕುಮಾರ್

ಅತ್ತ ಡಿಕೆ ಶಿವಕುಮಾರರು ಸುಮ್ಮನೆ ಕೂತಿಲ್ಲ. ಕೂಡುವ ವ್ಯಕ್ತಿತ್ವವೂ ಅವರದಲ್ಲ. ಅವರು ಹೈಕಮಾಂಡ್ ಲೆವಲ್ ನಲ್ಲೇ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಸಿದ್ದರಾಮೋತ್ಸವವನ್ನು ಪಕ್ಷದ ಸಮಾವೇಶವನ್ನಾಗಿಸಿ ಸಿದ್ದು ಬಣಕ್ಕೆ ಶಾಕ್ ನೀಡುವಲ್ಲಿ ಯಶಸ್ವಿಯಾದರು‌ ದಲಿತ ಸಮಾವೇಶವನ್ನು ತಡೆಯುವಲ್ಲೂ ಸಫಲರಾದರು. ಎಐಸಿಸಿ ಅಧ್ಯಕ್ಷರಾದ ಖರ್ಗೆಯವರಿಂದಲೇ “ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ” ಎಂದು ಹೇಳಿಸಿ ತಮ್ಮ ವಿರುದ್ಧ ಮಾತಾಡುವವರ ಬಾಯಿಗೆ ಬೀಗ ಹಾಕುವ ಕೆಲಸ ಮಾಡಿಸಿದರು. 

ಈ ಎಲ್ಲಾ ಬಣ ಬೆಳವಣಿಗೆಗಳನ್ನು ಗಮನಿಸಿದಾಗ ‘ನಾ ಕೊಡೆ, ನೀ ಬಿಡೆ’ ಎನ್ನುವ ಬೃಹನ್ನಾಟಕ ನೇಪಥ್ಯದಲ್ಲಿ ನಡೆಯುತ್ತಿದೆ. ಇದಕ್ಕೆ ಸಾಕಷ್ಟು ಒಗ್ಗರಣೆ ಹಾಕುವ ಸುದ್ದಿ ಮಾಧ್ಯಮಗಳು ತಮ್ಮ ಊಹೆಗಳನ್ನೂ ಸೇರಿಸಿ ಕಥೆ ಕಟ್ಟುತ್ತಿವೆ. 

ಈಗ ರಾಜ್ಯದಲ್ಲಿರುವ ವಿರೋಧ ಪಕ್ಷ ಬಿಜೆಪಿ ಯ ಮನೆಯೇ ಒಡೆದು ಊರ ಬಾಗಿಲಾಗಿದೆ. ಅಲ್ಲಿಯೂ ಪಾರ್ಟಿ ಅಧ್ಯಕ್ಷಗಿರಿಗೆ ಬಣ ಜಗಳ ತಾರಕಕ್ಕೇರಿದೆ. ವಿಜಯೇಂದ್ರ ಹಾಗೂ ಯತ್ನಾಳ ಬಣಗಳ ಅರಚಾಟ ಹಾಗೂ ಕೆಸರೆರಚಾಟ ಹಾದಿ ಬೀದಿಯ ಮಾತಾಗಿದೆ. ಆಳುವ ಕಾಂಗ್ರೆಸ್ ನೇತೃತ್ವದ ಸರಕಾರ ಎರಡು ವರ್ಷದಲ್ಲಿ ಅನೇಕ ತಪ್ಪುಗಳನ್ನು ಮಾಡಿದೆ. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿಯನ್ನು ಸರಿತೂಗಿಸಿಕೊಂಡು ಹೋಗುವುದರಲ್ಲಿ ಏದುಸಿರು ಬಿಡುತ್ತಿದೆ. ಕೆಲವಾರು ಹಗರಣಗಳೂ ಸದ್ದು ಮಾಡುತ್ತಿವೆ. ಆದರೆ ಇವುಗಳನ್ನೆಲ್ಲಾ ಒಗ್ಗಟ್ಟಿನಿಂದ ಪ್ರತಿಭಟಿಸಬೇಕಾದ ವಿರೋಧ ಪಕ್ಷವೇ ಒಳಜಗಳದಲ್ಲಿ ನಿರತವಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿದೆ. 

ಬಿ ವೈ ವಿಜಯೇಂದ್ರ , ಬಸನಗೌಡ ಪಾಟೀಲ್‌ ಯತ್ನಾಳ್‌

ಕಾಂಗ್ರೆಸ್ ಸರಕಾರಕ್ಕೆ ದುರ್ಬಲವಾದ ವಿರೋಧ ಪಕ್ಷಗಳಿಂದ ಯಾವುದೇ ಅಪಾಯ ಇಲ್ಲವಾದರೂ ಸ್ವಪಕ್ಷೀಯ ಬಣಗಳಿಂದ ಅಪಾಯವಂತೂ ಇದ್ದೇ ಇದೆ. ಹೀಗೆಯೇ ಈ ಬಣ ರಾಜಕೀಯ ಮುಂದುವರೆದರೆ, ಆರೋಪ ಪ್ರತ್ಯಾರೋಪಗಳು ಮುಂದುವರೆದರೆ, ಸಾರ್ವಜನಿಕವಾಗಿ ಕೆಸರೆರಚಾಟ ಅತಿಯಾದರೆ ಕಾಂಗ್ರೆಸ್ ಪಕ್ಷ ಮತ್ತೆ ಮತದಾರರ ವಿರೋಧವನ್ನು ಎದುರಿಸಬೇಕಾಗುತ್ತದೆ. ಅದರ ನಕಾರಾತ್ಮಕ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸ ಬೇಕಾಗುತ್ತದೆ. 

ಈಗ ಬಿಜೆಪಿ ಒಡೆದ ಮನೆಯಾಗಿರಬಹುದು. ಚುನಾವಣೆಗೆ ಇನ್ನೂ ಮೂರು ವರ್ಷಗಳಿವೆ. ಅಷ್ಟರಲ್ಲಿ ಮತ್ತೆ ಮತೀಯ ಭಾವನೆಯನ್ನು ಕೆರಳಿಸಿ, ಧರ್ಮದ್ವೇಷವನ್ನು ಹುಟ್ಟುಹಾಕಿ, ಹಿಂದೂ ಮತಾಂಧತೆಯನ್ನು ವ್ಯಾಪಕಗೊಳಿಸಬಹುದಾದ ಬಿಜೆಪಿ ಪಕ್ಷವು ಮುಂದಿನ ಚುನಾವಣೆಯಲ್ಲಿ ಅಡ್ಡದಾರಿಯಲ್ಲಾದರೂ ಅಧಿಕಾರ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ಸಿನ ಗ್ಯಾರಂಟಿ ಅಸ್ತ್ರಗಳನ್ನೇ ಇನ್ನೂ ಹೆಚ್ಚಾಗಿಯೇ ಹೂಡಿ ಚುನಾವಣಾ ಕದನವನ್ನು ಗೆಲ್ಲುವ ಅವಕಾಶವನ್ನು ಬಿಜೆಪಿಯು ಆರೆಸ್ಸೆಸ್ ಸಹಯೋಗದೊಂದಿಗೆ ಬಳಸಿಕೊಳ್ಳದೇ ಇರದು.

ಹೀಗಾಗಿ ಕಾಂಗ್ರೆಸ್ ಪಕ್ಷವು ಕಲಹದಲಿ ಕಂಗೆಟ್ಟ ಬಿಜೆಪಿಯನ್ನು ಉದಾಸೀನ ಮಾಡದೆ ಜನಪರವಾದ ಯೋಜನೆಗಳನ್ನು ಜನತೆಗೆ ತಲುಪಿಸಬೇಕಿದೆ. ಕಾಂಗ್ರೆಸ್ ನಾಯಕರುಗಳು ತಮ್ಮ ಅಭಿಪ್ರಾಯಬೇಧ ಅಸಮಾಧಾನಗಳನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ವ್ಯಕ್ತಪಡಿಸದೆ ಪಕ್ಷದ ವೇದಿಕೆಗಳಲ್ಲಿ ಚರ್ಚಿಸಿ ಸಮಾಧಾನ ಕಂಡುಕೊಳ್ಳಬೇಕಿದೆ. ದೊಡ್ಡ ಶತ್ರುವನ್ನು ಹೊಡೆದುರುಳಿಸಬೇಕೆಂದರೆ ಜನರ ನಂಬಿಕೆ ಗಳಿಸುವುದು ಕಾಂಗ್ರೆಸ್ಸಿಗೆ ಮೊದಲ ಆದ್ಯತೆಯಾಗಬೇಕಿದೆ. ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ಮತ್ತೆ ಬಿಜೆಪಿಗೆ ಅವಕಾಶ ದಕ್ಕದಂತೆ ನೋಡಿಕೊಳ್ಳಬೇಕಿದೆ. ತನ್ನದೇ ಒಳಜಗಳಗಳ ಭಾರಕ್ಕೆ ಕಾಂಗ್ರೆಸ್ ಕುಸಿದಿದ್ದೇ ಆದರೆ ಅದು ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ರಹದಾರಿ‌ ಹಾಕಿಕೊಟ್ಟಂತಾಗುತ್ತದೆ. ಹಾಗಾಗದಿರಲಿ ಎನ್ನುವುದೇ ಪ್ರಜ್ಞಾವಂತರ ಆಶಯವಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ವಿಜಯೇಂದ್ರ ಬುಡಕ್ಕೆ ಕೊಡಲಿ: ಕಂಗಾಲಾದ ಬಿಜೆಪಿ ಹೈಕಮಾಂಡ್!

More articles

Latest article