ಗೆಳೆಯರೊಂದಿಗಿನ ಅವಾಂತರಗಳು -1

Most read

ಅವತ್ತಿನ ದಿನ ನಮ್ಮ ಪುಸ್ತಕದ ಒಂದು ಪ್ರತಿಯೂ ಮಾರಾಟವಾಗಲಿಲ್ಲ. ಪ್ರತಿ ದಿನದ ಹಾಗೆ ನಮ್ಮ ಸಂಜೆಯ ಮೀಟಿಂಗ್  ಗೆಳೆಯ ಸೂರಿಯ ಮನೆಯಲ್ಲಿ ಸೇರಿತು. ಸೂರಿ ಅಂದ್ರೆ ಗೆಳೆಯ ಸುರೇಂದ್ರರ (ಈಗ ಬೆಂಗಳೂರಿನಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕನಾಗಿದ್ದಾನೆ) ಮನೆಯಲ್ಲಿ ಸೇರಿದೆವು. ಅದು ನಮ್ಮ ಹೈಸ್ಕೂಲ್ ನಿಂದಲೂ ಖಾಯಂ ಅಡ್ಡ. ನಮ್ಮೆಲ್ಲಾ ಸ್ನೇಹಿತರ ಮನೆಗಳು  ಪ್ರಭು (ಮಧುಗಿರಿ ನ್ಯಾಯಾಲಯದಲ್ಲಿ ಶಿರಸ್ತೇದಾರ್ ), ಸೂರಿ,  ಶಿವಕುಮಾರ್ (ಬಂಟ್ವಾಳದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ), ಕೃಷ್ಣ ಮೂರ್ತಿ (ಜೀವ ವಿಮಾ ನಿಗಮದಲ್ಲಿ ಹೆಸರಾಂತ ಪ್ರತಿನಿಧಿ), ಕೆರಿಯಪ್ಪ (ಬೇರೆ ಬೇರೆ ದುಡಿಮೆಯ ದಾರಿ ಹುಡುಕುವ ಶ್ರಮ ಜೀವಿ). 

ಒಂದು ಕಿ.ಮೀ ವ್ಯಾಸದ ದೊಡ್ಡದಾದ ವೃತ್ತ ಬರೆದರೆ ಅದರ ಪರಿಧಿಯಲ್ಲಿ ನಮ್ಮೆಲ್ಲರ ಮನೆಗಳು 6 ಬಿಂದುಗಳಲ್ಲಿ ಇದ್ದವು. ಯಾರಾದರೊಬ್ಬರು ಒಬ್ಬರ ಮನೆಗೆ ಹೋದರೆ ಸಾಕು, ಅಲ್ಲಿಂದ ಆ ವೃತ್ತದ ಒಂದು ಸುತ್ತು ಬಂದರೆ ಸಾಕು ಎಲ್ಲೋ ಒಂದು ಕಡೆ ನಾವೆಲ್ಲ ಸೇರುತ್ತಿದ್ದೆವು. ಅದು ಬಹುಪಾಲು ಸಂಜೆಯ ವೇಳೆಯಾದರೆ ಸೂರಿಯವರ ಮನೆಯೇ ನಮ್ಮ ಕೊನೆಯ ತಾಣ. ಯಾಕೆಂದರೆ ಅವರ ಮನೆಯಲ್ಲಿ ನಮಗೆ ಪೂರ್ಣ ಸ್ವಾತಂತ್ರ್ಯ.

ಕೊನೆಗೆ ನಾಳೆಯ ಪುಸ್ತಕದ ಮಾರಾಟದ ಬಗ್ಗೆ ಚರ್ಚೆ ನಡೆಯಿತು. ಮೊದಲು ಶಾಲೆಗಳಿಗೆ ಹೋಗೋಣ ಸಹಜವಾಗೇ ಮಕ್ಕಳ ಬಳಿ ಹಣ ಇರುವುದಿಲ್ಲ, ಮಾರನೇ ದಿನ ಬರುತ್ತೇವೆ ಎಂದು ಹೇಳೋಣ. ಹೇಗೋ ಸೈಕಲ್ ಇರೋದ್ರಿಂದ ಬಸ್ಸಿನ ಖರ್ಚಿಲ್ಲ ಅಂತ ತೀರ್ಮಾನಿಸಿ ನಾಳೆಯ ದಿನ ಸಿರಿವಂತೆ ಶಾಲೆಗೆ ಹೋಗೋಣವೆಂದು ತೀರ್ಮಾನಿಸಿದೆವು. ಆದ್ರೆ ನಮ್ಮ ಪ್ರತಿ ದಿನದ ಇನ್ನೊಂದು ಕೆಲ್ಸ ಅಂದ್ರೆ ವರದಾ ನದಿಗೆ ಬೆಳಗ್ಗೆ ತಿಂಡಿ ತಿಂದು ಹೊರಟರೆ 12.00ರ ವರೆಗೆ ಮೀನು ಹಿಡಿಯೋದು. ಅದನ್ನ ಬಿಡೋ ಹಾಗಿಲ್ಲ. ಬೆಳಗ್ಗಿನ ಬದಲಾಗಿ 3.00 ಗಂಟೆಗೆ ಮೀನು ಹಿಡಿಯೋಕೆ ಹೋಗೋದು ಅಂತ ತೀರ್ಮಾನ ಮಾಡಿದ್ದಾಯಿತು. ಮಾರನೇ ದಿನ 10 ಕಿ.ಮೀ. ದೂರ ಇದ್ದ ಸಿರಿವಂತೆ ಶಾಲೆಗೆ ಹೋದೆವು. ಒಂದು ಇಪ್ಪತ್ತು ಪುಸ್ತಕ ಮಾರಾಟವಾದವು. ಅಂತೂ 100 ರೂಪಾಯಿ ಸಂಪಾದನೆ ಆಯಿತು. ನಮ್ಮ ಮುಖದಲ್ಲಿ ಸಣ್ಣದೊಂದು ಕಿರುನಗೆ. ಇನ್ನು 1,700 ರೂಪಾಯಿ ಸಂಪಾದನೆ ಆದರೆ ಸಾಲ ತೀರಿಸಬಹುದು ಎಂಬ ಆಶಾಭಾವನೆ ಮೂಡಿತು.

ಮತ್ತೆ ಮೂರುಗಂಟೆಯ ಸಮಯಕ್ಕೆ  ನಾವೆಲ್ಲ ವರದಾ ನದಿಯ ಮುದುಕನ ಗುಂಡಿಯಲ್ಲಿ ಹರಿದ ನೂರು ತೂತಿರುವ ಬಲೆ ಹಿಡಿದು ಚೀಂಕ್ರ, ಐತ, ಪಿಂಚಲು ಸೆರೆಗಾರರನ್ನು ಹಿಡಿಯಲು (ಇವು ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪಾತ್ರಗಳು. ನಾವು ಬೇರೆಬೇರೆ  ಜಾತಿಯ ಮೀನುಗಳಿಗೆ ಪಾತ್ರದ ಹೆಸರು ಕೊಟ್ಟಿದ್ದೆವು.) ಕೆಲಸದಲ್ಲಿ ತೊಡಗಿ ನಾಳೆಯ ಯೋಜನೆ ಬಗ್ಗೆ ಯೋಚಿಸಿದಾಗ ನಮ್ಮೂರಿಂದ 5, 6 ಕಿ. ಮೀ. ದೂರದ ಮಾಸೂರಿನಲ್ಲಿ ಹೊಸದಾಗಿ ಹೈಸ್ಕೂಲ್ ಕಟ್ಟಡದ ಉದ್ಘಾಟನೆ ಆಗ್ತಾ ಇದೆ, ಕಾಗೋಡು ತಿಮ್ಮಪ್ಪನವರು ಬರ್ತಾ ಇದಾರೆ, ಅಲ್ಲಿ ಜನ ಜಾಸ್ತಿ ಸೇರುತ್ತಾರೆ ಅಂತ ತಿಳಿದು ಮಾರನೇ ದಿನ ಅಲ್ಲಿಗೆ ಹೋಗೋದಿಕ್ಕೆ ತೀರ್ಮಾನಿಸಿದೆವು. ಒಂದು ಕಡೆ ನಿಂತುಕೊಂಡು ಪುಸ್ತಕದ ಮಾರಾಟಕ್ಕೆ ವೇದಿಕೆ ನಿರ್ಮಿಸಿಕೊಂಡೆವು. ನಮ್ಮ ಅದೃಷ್ಟಕ್ಕೆ ನೂರಕ್ಕೂ ಹೆಚ್ಚು ಪುಸ್ತಕ ಮಾರಾಟವಾದವು. ನಾನು ಎಸ್ ಎಂ ಇ. ಕಾನ್ವೆಂಟ್ ಗೆ ಹೋಗ್ತಾ ಇದ್ದಿದ್ರಿಂದ ನನಗೆ ಪ್ರತಿದಿನ ಹೋಗೋಕೆ ಆಗ್ತಾ ಇರ್ಲಿಲ್ಲ. ಆಗ ಪ್ರಭಾಕರ ಶಿವಮೊಗ್ಗದಲ್ಲಿ ಬಿ. ಇಡಿ ಮಾಡಿದ್ರಿಂದ ಅವನಿಗೆ ಶಿವಮೊಗ್ಗ ನಗರದಲ್ಲಿ ಶಾಲೆಗಳ ಪರಿಚಯ ಇತ್ತು. ಹಾಗಾಗಿ ಪ್ರಭು ಶಿವಮೊಗ್ಗದ ಬಸ್ಸು ಹತ್ತಿದ. ನಮ್ಮ ಕೈಯಿಂದ ಹಣ ಹಾಕದೆ ಇರೋದ್ರಿಂದ ಲಾಭದ ಉದ್ದೇಶ ಇರಲಿಲ್ಲ. ಮಾಡಿರುವ ಸಾಲ ತೀರಿದ್ರೆ ಸಾಕಾಗಿತ್ತು. ಅಂತೂ ಇಂತೂ ಒಂದು ವಾರ ಶಿವಮೊಗ್ಗದಲ್ಲಿ ಇದ್ದ ಗೆಳೆಯ ಪ್ರಭು 500 ಪುಸ್ತಕಗಳನ್ನು ಮಾರಾಟ ಮಾಡಿದ್ದ. ಅಲ್ಲಿವರೆಗೆ ಬಂದ ಹಣದಲ್ಲಿಯೇ ಊಟ ತಿಂಡಿ, ಖರ್ಚಿಗೆ  ಗೆಳೆಯರೊಂದಿಗಿನ ಸಣ್ಣ ಪಾರ್ಟಿ ಮಾಡಲು ಪುಸ್ತಕ ಮಾರಿದ ದುಡ್ಡು ತಕ್ಕ ಮಟ್ಟಿಗೆ ನೆರವಾಗಿತ್ತು.

ಕೊನೆಗೆ  ಕೆರಿಯಪ್ಪನಿಗೆ ಸಾಲದ ಹಣ ಹಿಂದಿರುಗಿಸಿ ಸಾಲ ಮುಕ್ತರಾದೆವು. ಕೈಯಲ್ಲಿ ಕಾಸಿಲ್ಲದಿದ್ದರು ನಮ್ಮ ಮೊದಲ ಪುಸ್ತಕ ಮುದ್ರಣಗೊಂಡು  ನಮ್ಮ ಕನಸುಗಳನ್ನು ನಾವೇ ನನಸು ಮಾಡಬಲ್ಲೆವು ಎಂಬ ಆತ್ಮ ವಿಶ್ವಾಸ ನಮ್ಮಲ್ಲಿ ಮೂಡಿತು. ನಂತರದಲ್ಲಿ ಹತ್ತು ಹದಿನೈದು ವರ್ಷಗಳ  ನಂತರ ನನ್ನ ಕದುರು ಭತ್ತ  ಪ್ರಭುವಿನ ಅಲೆಗಳು ಪುಸ್ತಕಗಳು ಪ್ರಕಟವಾದವು. ಆದ್ರೂ ನಮಗೆ ನಮ್ಮ ಮೊದಲ ಪುಸ್ತಕ ಮಾರಾಟದ ದಿನಗಳು ಮಹತ್ವವಾದವು. ಈ ವರ್ಷ ನನ್ನ ಹೊಸ ಪುಸ್ತಕ ಬಿಡುಗಡೆಗೆ ಸಿದ್ಧವಾಗುತ್ತಿದೆ.

(ಹೊಸ ಅವಾಂತರ ಶೀಘ್ರವೇ ನಿರೀಕ್ಷಿಸಿ)


ಅಣ್ಣಪ್ಪ.ಎಂ.ಜಿ.ಕಾಗೋಡು

ಇದನ್ನೂ ಓದಿ- http://ಕಾರ್ಪೋರೇಟ್‌ ಸ್ನೇಹಿ – ಜನವಿರೋಧಿ ಬಜೆಟ್‌ 2025 https://kannadaplanet.com/corporate-friendly-anti-people-budget-2025/

More articles

Latest article