ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಪ್ರವೇಶಕ್ಕೆ ರಿಯಾಯಿತಿ; ಸಂಪುಟ ತೀರ್ಮಾನ

Most read

ಬೆಂಗಳೂರು: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಪ್ರವೇಶಕ್ಕೆ ರಿಯಾಯಿತಿ, ಗಣಿ ಗುತ್ತಿಗೆ ರಾಜಧನ ಪರಿಷ್ಕರಣೆಯಿಂದ ರೂ.311 ಕೋಟಿ ಹೆಚ್ಚುವರಿ ಆದಾಯ ಗಳಿಸುವ ನಿರ್ಧಾರಗಳಿಗೆ ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು, ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶವಿರಲಿದೆ. ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಯಲ್ಲಿ ಮೊದಲು ನಿರ್ಬಂಧಗಳಿದ್ದವು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿನ ಒಟ್ಟು ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಮುಸ್ಲಿಂ, ಕ್ರೀಶ್ಚಿಯನ್, ಸಿಖ್, ಜೈನ್, ಬೌದ್ದ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆ ಪ್ರಮಾಣವು ಕಡಿಮೆಯಿರುವುದರಿಂದ ಅಲ್ಪಸಂಖ್ಯಾತರ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಲಿ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳಲ್ಲಿ ನಿಗಧಿಪಡಿಸಿರುವ ಶೇಕಡಾವಾರು ವಿದ್ಯಾರ್ಥಿಗಳು ಲಭ್ಯವಾಗುವುದು ಕಷ್ಟಕರವಾಗಿದೆ. ಆದ್ದರಿಂದ ಈ ನಿಯಮಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿತ್ತು ಎಂದರು.

ರಾಜಧನ ಪರಿಷ್ಕರಣೆಯಿಂದ ರೂ.311 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆ:
ರಾಜ್ಯ ಸರ್ಕಾರವು ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ರಾಜಸ್ವ ಸಂಗ್ರಹಣೆಗೆ ಇದರಿಂದ ಅನುಕೂಲವಾಗುವುದರಿಂದ ರಾಜಧನ ಪರಿಷ್ಕರಣೆಗೆ ಅನುಕೂಲವಾಗುವ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿತ್ತು. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ ಸಚಿವ ಸಂಪುಟ ನಿರ್ಣಯಿಸಿದೆ. ಈ ಪರಿಷ್ಕರಣೆಯಿಂದ ಒಟ್ಟಾರೆಯಾಗಿ ರೂ. 311.55 ಕೋಟಿಗಳ ಹೆಚ್ಚುವರಿ ಮೊತ್ತ ಸಂಗ್ರಹಣೆ ಅಂದಾಜಿಸಲಾಗಿದೆ. ಕಟ್ಟಡ ಕಲ್ಲು ಉಪಖನಿಜದ ರಾಜಧನವನ್ನು ಪ್ರತಿ ಮೆಟ್ರಿಕ್ ಟನ್ಗೆ ರೂ.80 ರಂತೆ ನಿಗದಿಪಡಿಸಲಾಗಿದೆ.

More articles

Latest article