Thursday, December 12, 2024

ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು: ಬಸವರಾಜ ಬೊಮ್ಮಾಯಿ

Most read

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ರೌಡಿ ಶೀಟರ್ ಓಪನ್ ಇದೆ ಎಂದು ಹಾವೇರಿ ಎಸ್ ಪಿ ಅವರೇ ಹೇಳಿದ್ದಾರೆ. ಅಂದರೆ ಅವರ ವಿರುದ್ದ ಇನ್ನೂ ಹಲವಾರು ಕೇಸ್ ಗಳು ಇವೆ ಅಂತ ಅರ್ಥ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಶಿಗ್ಗಾಂವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಳೆದ ವರ್ಷ ತಮ್ಮ ಮೇಲೆ ಹದಿನೇಳು ಹದಿನೆಂಟು ಕೇಸ್ ಗಳಿವೆ ಎಂದು ನಾಮಪತ್ರದಲ್ಲಿ ಆಪಿಡವಿಟ್ ಸಲ್ಲಿಸಿದ್ದರು. ಈಗ ಅದ್ಯಾವುದೂ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಹಾವೇರಿ ಜಿಲ್ಲಾ ಪೊಲಲೀಸ್ ವರಿಷ್ಠಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದದ ಪ್ರಕರಣ ಓಪನ್ ಇದೆ ಎಂದು ಹೇಳಿದ್ದಾರೆ. ಅಂದರೆ ಅವರ ವಿರುದ್ಧ ಇನ್ನೂ ಪ್ರಕರಣಗಳಿವೆ ಎಂದರ್ಥ ಎಂದು ಹೇಳಿದರು.


ಅಜ್ಜಂಪಿರ್ ಖಾದ್ರಿಯವರು ಚುನಾವಣೆ ಮುಂಚೆ ಕಾಂಗ್ರೆಸ್ ಅಭ್ಯರ್ಥಿ ರೌಡಿ ಅಂತ ಹೇಳಿದ್ದರು. ಆದರೆ, ಆಮೇಲೆ ಅವರು ಅವರೊಂದಿಗೆ ಸೇರಿಕೊಂಡರು, ಅವರಂತವರು ಹೇಳಿದ ಮೇಲೆ ಅದನ್ನು ಅಲ್ಲಗಳೆಯಲು ಆಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಬೇಕು. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಾನು ಚುನಾವಣಾ ಆಯೋಗಕ್ಕೆ ಇಂದೇ ದೂರು ಕೊಡುತ್ತೇವೆ ಎಂದರು.


ಈ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಡಿಸಿ ಕೂಡಲೆ ಕಾರ್ಯಪ್ರವೃತ್ತರಾಗಬೇಕು. ಚುನಾವಣಾಧಿಕಾರಿ ಎಸಿಗೆ ದೊಡ್ಡ ಜವಾಬ್ದಾರಿ ಇದೆ. ಅವರು ಪರಿಶೀಲನೆ ಮಾಡಿ ಕೂಡಲೆ ಕ್ರಮ ಕೈಗೊಳ್ಳಬೇಕು. ವಾಸ್ತವ ಏನಿದೆ ಅಂತ ಜನರಿಗೆ ತಿಳಿಸಬೇಕು. ಇಲ್ಲದಿದ್ದರೆ ಅವರೂ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾವು ಮೊದಲು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ನಂತರ ಕಾನೂನಿನ ಹೋರಾಟ ಮಾಡುತ್ತೇನೆ. ಸುಳ್ಳು ಅಫಿಡವಿಟ್ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರು ಹಾಜರಿದ್ದರು.

More articles

Latest article