ವಯನಾಡು ಕ್ಷೇತ್ರದ ಅಭಿವೃದ್ದಿಗೆ ಬದ್ಧ; ರಾಹುಲ್ ಮತ್ತು ಪ್ರಿಯಾಂಕಾ ಘೋಷಣೆ

Most read

ಕೋಯಿಕ್ಕೋಡ್: ವಯನಾಡು ಭೂಕುಸಿತದ ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸಲು ಕೇರಳ ಸರ್ಕಾರದ ಮೇಲೆ ಕಾಂಗ್ರೆಸ್ ಹಾಗೂ ಯುಡಿಎಫ್ ಒತ್ತಡವನ್ನು ಹೇರಬೇಕು ಎಂದು ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಆಗ್ರಹಪಡಿಸಿದ್ದಾರೆ. ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ತನ್ನ ಸಹೋದರಿ ಗೆಲುವು ದಾಖಲಿಸಿದ ಬಳಿಕ ಅವರು ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ನಂತರ ಇಬ್ಬರೂ ಮುಕ್ಕಂನಲ್ಲಿ ಏರ್ಪಡಿಸಲಾಗಿದ್ದ ಜಂಟಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾತನಾಡಿದ ರಾಹುಲ್, ಭೂಕುಸಿತದಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ ಭಾಷಣವನ್ನು ಆರಂಭಿಸಿದರು.

ದುರದೃಷ್ಟವಶಾತ್, ನಾವು ಅಧಿಕಾರದಲ್ಲಿಲ್ಲ. ಆದ್ದರಿಂದ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಹಾಗೂ ಯುಡಿಎಫ್ನ ಪ್ರತಿಯೊಬ್ಬರೂ ಕೇರಳ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಹೋದರಿ ಪ್ರಿಯಾಂಕಾ, ಕೆ.ಸಿ.ವೇಣುಗೋಪಾಲ್ ಅವರಿಗೆ ತಿಳಿಸಿದ್ದೇನೆ ಎಂದರು. ವಯನಾಡು ಜನರ ಮೇಲೆ ತಾರತಮ್ಯ ಧೋರಣೆ ತೋರಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿ ಇಲ್ಲಿನ ನಾಗರೀಕರಿಗೆ ಕೇಂದ್ರದಿಂದ ನೆರವು ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳುತ್ತದೆ. ಆದರೆ ಉದ್ಯಮಿ ಗೌತಮ್ ಅದಾನಿ ಅವರನ್ನು ಮಾತ್ರ ಪ್ರಧಾನಿ ಮೋದಿ ಭಿನ್ನವಾಗಿ ನಡೆಸಿಕೊಳ್ಳುತ್ತಾರೆ. ಅಮೆರಿಕದಲ್ಲಿ ಏನೇ ಆದರೂ ಪರವಾಗಿಲ್ಲ. ಭಾರತದಲ್ಲಿ ನಾವು ಆತನ ಮೇಲೆ ದೋಷಾರೋಪಣೆ ಮಾಡುವುದಿಲ್ಲ ಎಂಬ ನಿಲುವನ್ನು ಪ್ರದಾನಿ ಮೋದಿ ತಳೆದಿದ್ದಾರೆ ಎಂದು ಟೀಕಿಸಿದರು.

ಪ್ರಿಯಾಂಕಾ ಮಾತನಾಡಿ ವಯನಾಡಿಗೆ ಬರಲು ನನನಗೆ ಖುಷಿಯಾಗುತ್ತಿದೆ. ಕ್ಷೇತ್ರದ ಜನತೆಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು. ಇತ್ತೀಚೆಗೆ ನಡೆದ ವಯನಾಡು ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ 4,10,000 ಮತಗಳ ಅಂತರದಿಂದ ಜಯಗಳಿಸಿದ್ದರು.

More articles

Latest article